ಚಾಮರಾಜನಗರ : ಕೆರೆ ತುಂಬಿಸದಿದ್ದರೆ ಓಟು ಕೊಡಲ್ಲ!

By: ಬಿ.ಎಂ.ಲವಕುಮಾರ್
Subscribe to Oneindia Kannada

ಚಾಮರಾಜನಗರ, ಜನವರಿ 25 : 'ನಮಗೆ ನೀರು ಕೊಡಿ ಇಲ್ಲಾಂದ್ರೆ ಚುನಾವಣೆಯಲ್ಲಿ ಮತ ಹಾಕಲ್ಲ' ಎಂಬುದಾಗಿ ಮರಗದ ಕೆರೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಆಗ್ರಹಿಸುತ್ತಿದ್ದಾರೆ. ಇಷ್ಟಕ್ಕೂ ರೈತರು ನೀರನ್ನು ಕೇಳುತ್ತಿರುವುದು ಮನೆಗಲ್ಲ ಕೆರೆಗೆ.

ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರು ಉಣಿಸಲು ಯೋಗ್ಯವಾಗಿರುವ ಮರಗದ ಕೆರೆಗೆ ನೀರನ್ನು ತುಂಬಿಸಿ. ಕೆರೆ ತುಂಬಿದರೆ ಸುತ್ತಲಿನ ಪರಿಸರ ಹಸಿರಾಗುವುದಲ್ಲದೆ, ಒಂದಷ್ಟು ರೈತರು ಬದುಕೋದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ರೈತರ ಕಳಕಳಿ. [ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ವಿವರ]

chamarajanagar

ಚಾಮರಾಜನಗರ ತಾಲೂಕಿನ ಹರದನಹಳ್ಳಿ ಹೋಬಳಿಯ ವ್ಯಾಪ್ತಿಗೆ ಬರುವ ಸುವರ್ಣಾವತಿ ಚಿಕ್ಕಹೊಳೆ ಜಲಾಶಯದ ಆಜು ಬಾಜಿನ ಮರಗದ ಕರೆ ಹಲವಾರು ವರ್ಷಗಳಿಂದ ನೀರಿಲ್ಲದೆ ಒಣಗಿದೆ. ಈ ಕೆರೆಯ ನೀರನ್ನು ನಂಬಿ ಬೆಳೆ ಬೆಳೆಯುತ್ತಿದ್ದ ರೈತರು ನೀರಿಲ್ಲದೆ ಕಂಗಾಲಾಗಿದ್ದಾರೆ. [ಚಾಮರಾಜನಗರದ ಕಾಡಂಚಿನಲ್ಲೊಂದು ರೊಟ್ಟಿ ಹಬ್ಬ!]

ರಾಜ್ಯ ಸರ್ಕಾರ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಚಾಮರಾಜನಗರ ತಾಲೂಕಿನ 20 ಕೆರೆಗಳಿಗೆ ನೀರಾವರಿ ಇಲಾಖೆಯ ಮೂಲಕ ಕಬಿನಿ ನದಿಯಿಂದ ನೀರು ಹರಿಸಿದೆ. ಇದರಿಂದ ಹಲವಾರು ಕೆರೆಗಳು ತುಂಬಿವೆ. ಆದರೆ, ರೈತರಿಗೆ ಉಪಯೋಗವಾಗಲಿರುವ ಕೆರೆಗೆ ನೀರು ಹರಿಸಲು ವಿಳಂಬ ಧೋರಣೆ ಅನುಸರಿಸುತ್ತಿದೆ. [ಚಾಮರಾಜನಗರದಲ್ಲಿ 1,600 ಎಕರೆಯಲ್ಲಿ ಕೈಗಾರಿಕಾ ಪ್ರದೇಶ]

ಸರ್ಕಾರ ಗುಂಡ್ಲುಪೇಟೆ ತಾಲೂಕಿನ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿ, ಅಲ್ಲಿನ ಕೆರೆಗಳನ್ನು ಭರ್ತಿಮಾಡಿ ಅಲ್ಲಿನ ರೈತರಿಗೆ ಅನುಕೂಲ ಮಾಡಿಕೊಟ್ಟಿದೆ, ಆದರೆ, ಚಾಮರಾಜನಗರದ ಮರಗದ ಕೆರೆಗೆ ಮಾತ್ರ ಏಕೆ ನೀರು ಹರಿಸುತ್ತಿಲ್ಲ? ಎನ್ನುವುದು ರೈತರ ಪ್ರಶ್ನೆ.

ಒಂದು ವೇಳೆ ನೀರು ಹರಿಸದಿದ್ದರೆ ಮರಗದ ಕೆರೆ ಅಚ್ಚುಕಟ್ಟಿನ ವ್ಯಾಪ್ತಿಗೆ ಬರುವ ದೊಡ್ಡಮೋಳೆ, ಚಿಕ್ಕಮೋಳೆ, ಬಂಡಿಗೆರೆ, ತಾವರೆಕಟ್ಟೆಮೋಳೆ ಸೇರಿದಂತೆ ಹಲವಾರು ಗ್ರಾಮಗಳ ಜನರು ಒಗ್ಗಟ್ಟಾಗಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮರಗದ ಕೆರೆಯು ಸುಮಾರು 300 ಎಕರೆ ವಿಸ್ತೀರ್ಣ ಹೊಂದಿದ್ದು, ಇದು ತುಂಬಿದರೆ ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರು ಸಿಗಲಿದೆ ಎಂಬುದು ರೈತರ ಲೆಕ್ಕಾಚಾರವಾಗಿದೆ. ಆದರೆ, ಸರ್ಕಾರ ಮೌನಕ್ಕೆ ಶರಣಾಗಿರುವುದರಿಂದ ರೈತರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಚುನಾವಣಾ ಆಯೋಗ ಈಗಾಗಲೇ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ್ದು,
ಫೆ.20ರಂದು ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಉಡುಪಿ ಮುಂತಾದ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Villagers of Haradanahalli hobali of Chamarajanagar district have decided to boycott Taluk and Zilla panchayat election for not providing water to the Maragada kere. Taluk and Zilla panchayat elections will be held on February 20th, 2016.
Please Wait while comments are loading...