ಬಿಜೆಪಿಗೆ ಮರಳುವ ಯಡಿಯೂರಪ್ಪ ಮುಂದಿರುವ ಸವಾಲುಗಳು!
ಬೆಂಗಳೂರು. ಜ.3 : ಮಾಜಿ ಸಿಎಂ ಮತ್ತು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳಲಿದ್ದಾರೆ ಎಂಬ ಸುದ್ದಿಗಳಿಗೆ ತೆರೆಬಿದ್ದಿದ್ದು, ಕೆಜೆಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಲು ಬಿ.ಎಸ್.ಯಡಿಯೂರಪ್ಪ ಒಪ್ಪಿಗೆ ನೀಡಿದ್ದಾರೆ. ಆದರೆ, ಬಿಜೆಪಿಗೆ ಮರಳುವ ಅವರ ಹಾದಿ ಸುಗಮವಾಗಿಲ್ಲ. ಹಲವಾರು ಸವಾಲುಗಳು ಅವರನ್ನು ಸ್ವಾಗತಿಸುತ್ತಿವೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರ ಗಮನಕ್ಕೆ ತಂದು ಯಡಿಯೂರಪ್ಪ ಅವರ ಜೊತೆ ಬಿಜೆಪಿ ನಾಯಕರು ಮಾತುಕತೆ ನಡೆಸಿದ್ದರು. ಗುರುವಾರ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಮಾತುಕತೆ ಫಲಪ್ರದವಾಗಿದ್ದು, ಯಡಿಯೂರಪ್ಪ ಕೆಜೆಪಿ-ಬಿಜೆಪಿ ವಿಲೀನಕ್ಕೆ ಸಮ್ಮತಿ ಸೂಚಿಸಿದ್ದಾರೆ. [ಒಂದುಗೂಡಿದ ಬಿಜೆಪಿ ಮತ್ತು ಕೆಜೆಪಿ]
ಯಡಿಯೂರಪ್ಪ ಪ್ರಬಲ ನಾಯಕರು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದು ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವುದರಿಂದ ಅವರ ಮುಂದೆ ಹಲವಾರು ಸವಾಲುಗಳಿವೆ. ಜೊತೆಗೆ ವೈಯಕ್ತಿಕವಾಗಿಯೂ ಅವರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನ ದೊರೆಯಬೇಕಾಗಿದೆ. [ಯಡಿಯೂರಪ್ಪ ಬಿಜೆಪಿಗೆ, JDSಗೆ ಸಂಚಕಾರ]
ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ, ಅವರ ಹೆಗಲಿಗೆ ಹೆಗಲು ಕೊಟ್ಟು ನಿಂತು ಪಕ್ಷ ಸಂಘಟನೆ ಮಾಡಿದ ಬೆಂಬಲಿಗರ ಹಿತ ಕಾಯುವುದು ಯಡಿಯೂರಪ್ಪ ಅವರ ಜವಾಬ್ದಾರಿ ಆಗಿದೆ. ಆದ್ದರಿಂದ ಹಲವಾರು ಸವಾಲುಗಳನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಮರಳಲಿರುವ ಅವರು, ಯಾವ ಕಾರ್ಯತಂತ್ರದ ಮೂಲಕ ಕಾಂಗ್ರೆಸ್ ಕಟ್ಟಿಹಾಕುತ್ತಾರೆ ಕಾದು ನೋಡಬೇಕು. ಯಡಿಯೂರಪ್ಪ ಮುಂದಿರುವ ಸವಾಲುಗಳು

ಪಕ್ಷ ಸಂಘಟನೆ ಮಾಡುವುದು
ಬಿ.ಎಸ್.ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ನಂತರ ನಡೆದ ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗ ಅನುಭವಿಸಿದೆ. ಸಾಲು-ಸಾಲು ಸೋಲುಗಳ ನಡುವೆಯೇ ಬಿಜೆಪಿ ಯಡಿಯೂರಪ್ಪ ಅವರನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಸಿದ್ಧತೆ ಆರಂಭಿಸಲಿದೆ. ಆದ್ದರಿಂದ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯದಲ್ಲಿ ಸಂಚರಿಸಿ ಯಡಿಯೂರಪ್ಪ ಪಕ್ಷ ಸಂಘಟನೆ ಮಾಡಬೇಕು.

ಜನರನ್ನು ಸೆಳೆಯುವುದು
ಕರ್ನಾಟಕದ ತುಂಬಾ ಜನರನ್ನು ಸೆಳೆಯುವ ಶಕ್ತಿ ಇರುವ ನಾಯಕರು ಬಿಜೆಪಿಯಲ್ಲಿ ಇಲ್ಲ. ಪಕ್ಷದ ಪ್ರಮುಖ ನಾಯಕರು ಅವರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದಾರೆ. ಆದ್ದರಿಂದ ಯಡಿಯೂರಪ್ಪ ತಮ್ಮ ಮಾತಿನ ಮೂಲಕ ಜನರನ್ನು ಸೆಳೆದು, ಲೋಕಸಭೆ ಚುನಾವಣೆಗೆ ಮತಗಳನ್ನು ತರಬೇಕಾದ ಸವಾಲು ಇದೆ.

ಬೆಂಬಲಿಗರ ಹಿತ ಕಾಪಾಡುವುದು
ಯಡಿಯೂರಪ್ಪ ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿದಾಗ ಹಲವಾರು ಶಾಸಕರು ಬಿಜೆಪಿ ತೊರೆದು ಯಡಿಯೂರಪ್ಪ ಜೊತೆ ಕೆಜೆಪಿ ಸೇರಿದರು. ಅದರಲ್ಲಿ ಬಹುತೇಕರು ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಆದರೆ, ಕೆಜೆಪಿ ಸಂಘಟನೆಗಾಗಿ ದುಡಿದಿದ್ದಾರೆ. ಆದ್ದರಿಂದ ಯಡಿಯೂರಪ್ಪ ಅವರ ಹಿತ ಕಾಪಾಡಬೇಕಾಗುತ್ತದೆ.

ಸ್ಥಾನಮಾನದ ವಿಚಾರ
ಬಿ.ಎಸ್.ಯಡಿಯೂರಪ್ಪ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯರ್ತರಾಗಿ ಸೇರಿಕೊಂಡು ನಂತರ ಮುಖ್ಯಮಂತ್ರಿ ಹುದ್ದೆಗೆ ಏರಿದವರು. ಸಿಎಂ ಸ್ಥಾನ ತೊರೆದ ಬಳಿಕ ಸ್ಥಾನ ಮಾನ ನೀಡಲಿಲ್ಲ ಎಂದು ಮುನಿಸಿಕೊಂಡು ಕೆಜೆಪಿ ಕಟ್ಟಿದ್ದು ಹಳೆಯ ಕಥೆ. ಸದ್ಯ ಅವರು ಬಿಜೆಪಿಗೆ ಮರಳಿದರೆ ಯಾವ ಸ್ಥಾನ ಮಾನ ದೊರೆಯುತ್ತದೆ ಎಂಬುದು ಕುತೂಹಲ ಹುಟ್ಟುಹಾಕಿದೆ.

ಜಾತಿಯ ಮತಗಳನ್ನು ಸೆಳೆಯುವುದು
ಜಗದೀಶ್ ಶೆಟ್ಟರ್, ಅಶೋಕ್, ಈಶ್ವರಪ್ಪ ಮೂವರು ನಾಯಕರು ಪ್ರಬಲ ಜಾತಿಯ ಹಿನ್ನೆಲೆ ಹೊಂದಿದ್ದಾರೆ. ಆದರೆ, ಅವುಗಳನ್ನು ಮತಗಳಾಗಿ ಪರಿವರ್ತಿಸಲು ಅವರು ವಿಧಾನಸಭೆ ಚುನಾವಣೆಯಲ್ಲಿಯೇ ವಿಫಲರಾಗಿದ್ದಾರೆ. ಪ್ರಹ್ಲಾದ್ ಜೋಶಿ ಮತ್ತು ಅನಂತ್ ಕುಮಾರ್ ಅವರಿಗೆ ಜಾತಿಯ ಬೆಂಬಲವಿಲ್ಲ. ರಾಜ್ಯದ ಪ್ರಬಲ ಲಿಂಗಾಯತ ಮತ್ತು ಇತರ ಸಮುದಾಯದ ಬಲ ಪಡೆಯಲು ಯಡಿಯೂರಪ್ಪ ಮತ್ತೊಮ್ಮೆ ಶ್ರಮಪಡಬೇಕು.

ಕೈ ಕಟ್ಟಿಹಾಕಬೇಕು
ಯಡಿಯೂರಪ್ಪ ಕೆಜೆಪಿ ಕಟ್ಟುವಾಗ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಇಂದು ರಾಜ್ಯದ ಸಿಎಂ. ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಸ್ಪಷ್ಟ ಬಹುಮತ ಪಡೆದು ತಮ್ಮ ಪ್ರಾಬಲ್ಯ ವೃದ್ಧಿಸಿಕೊಂಡಿದೆ. ಬಿಜೆಪಿಗೆ ವಾಪಸ್ ಬರುವ ಯಡಿಯೂರಪ್ಪ ತಂತ್ರಗಾರಿಕೆ ಮೂಲಕ ರಾಜ್ಯದಲ್ಲಿ ಕೈ ಕಟ್ಟಿಹಾಕಬೇಕು.

ಲೋಕಸಭೆ ಚುನಾವಣೆ
ಯಡಿಯೂರಪ್ಪ ಮುಂದಿರುವ ಪ್ರಮುಖ ಸವಾಲು ಲೋಕಸಭೆ ಚುನಾವಣೆ. ದೇಶದಲ್ಲಿ ನರೇಂದ್ರ ಮೋದಿ ಅಲೆ ಎದ್ದಿದ್ದು, ಬಿಜೆಪಿಗೆ ಅಧಿಕಾರದ ಗದ್ದುಗೆ ಏರಲು ತಯಾರಿ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವಂತೆ ಮಾಡಿ ಪಕ್ಷಕ್ಕೆ ಶಕ್ತಿ ತುಂಬುವ ಜವಾಬ್ದಾರಿ ಯಡಿಯೂರಪ್ಪ ಅವರ ಹೆಗಲ ಮೇಲಿದೆ.












Click it and Unblock the Notifications