Caste census: ಜಾತಿ ಗಣತಿ ವರದಿ ಜಾರಿಗೆ ಕೊನೆಗೂ ಮುಹೂರ್ತ ಫಿಕ್ಸ್
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಾತಿಗಣತಿ ವರದಿ ಜಾರಿ ಬಗ್ಗೆ ಮತ್ತೊಂದು ಅಪ್ಡೇಟ್ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಅವರು ಹಲವು ವೇದಿಕೆಗಳಲ್ಲಿ ಜಾತಿ ಗಣತಿ ವರದಿ ಜಾರಿ ಮಾಡುವ ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಈ ಜಾತಿವಾರು ಜನ ಗಣತಿಯ ವರದಿ ಜಾರಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ ಎಂದು ತಿಳಿದುಬಂದಿದೆ.
ಜಾತಿ ಗಣತಿ ವರದಿ ಬಗ್ಗೆ ಈ ಇತ್ತೀಚೆಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಅವರು ಈ ಗಣತಿ ವೈಜ್ಞಾನಿಕವಾಗಿ ನಡೆದಿದೆ. ಅದನ್ನು ನಮ್ಮ ಸರ್ಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದ್ದರು. ಜಾತಿ ಗಣತಿಯ ವರದಿ ವೈಜ್ಞಾನಿಕವಾಗಿ ಸಿದ್ಧವಾಗಿದ್ದು, ಸಮಾಜದ ಎಲ್ಲ ವರ್ಗಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಅನುಕೂಲಕರವಾಗಿದೆ. ಅದರಂತೆಯೇ ಸರ್ಕಾರದ ಕಾರ್ಯಕ್ರಮಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದಿದ್ದರು.

ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ಬಂದಿದೆ. 1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಶೇಕಡಾ 50ರಷ್ಟು ಮೀರಬಾರದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಕಳೆದ ಸರ್ಕಾರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಎಂದು ಮೀಸಲಾತಿ ಕಲ್ಪಿಸಿದ್ದು, ಸಂವಿಧಾನದ ಆಶಯಗಳಿಗೆ ವಿರುದ್ಧ. ಸಂವಿಧಾನದ ಆರ್ಟಿಕಲ್ (15) ಮತ್ತು (16)ರ ಪ್ರಕಾರ ಮೀಸಲಾತಿ ನೀಡಬೇಕಾಗಿರುವುದು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸಮಾಜದಲ್ಲಿ ಅಸಮಾನತೆ ಹೋಗಬೇಕು. ಜಾತಿ ವ್ಯವಸ್ಥೆಯಿಂದ ನಿರ್ಮಾಣವಾಗಿರುವ ಅಸಮಾನತೆಯಿಂದ ಬಹುಸಂಖ್ಯಾತ ಜನ ಅವಕಾಶ ವಂಚಿತರಾಗಿದ್ದಾರೆ. ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ತಳ ಸಮುದಾಯವಿರಲಿ, ಮೇಲ್ವರ್ಗವಿರಲಿ ಎಲ್ಲರಿಗೂ ಸಮಾನತೆ ಇರಬೇಕು ಎಂಬ ಅಂಶವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದಾರೆ. ಆದರೆ ಹಿಂದುಳಿದ ಜಾತಿಗಳಲ್ಲೂ ತಾರತಮ್ಯ, ಅಸಮಾನತೆ ಇದೆ. ಇದನ್ನು ಒಂದೇ ಬಾರಿಗೆ ಹೋಗಲಾಡಿಸಲು ಸಾಧ್ಯವಿಲ್ಲ ಎಂದೂ ಹೇಳಿದ್ದರು.

ಅಲೆಮಾರಿ ಜನಾಂಗಕ್ಕೆ ಉಚಿತ ಶಿಕ್ಷಣದ ಹಕ್ಕೊತ್ತಾಯ ಸರಿಯಾಗಿದೆ. ಸರ್ಕಾರವು ಸರ್ವರಿಗೂ ಶಿಕ್ಷಣದ ಹಕ್ಕನ್ನು ನೀಡಿದ್ದು, ಅದರ ಪ್ರಕಾರ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿಯೂ ಅವಕಾಶ ಸಿಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಬಜೆಟ್‌ನಲ್ಲೂ ಅಲೆಮಾರಿ ಜನಾಂಗಕ್ಕೆ ವಿಶೇಷ ಗಮನ ಹರಿಸಲಾಗಿದೆ. ಅತಿ ಹಿಂದುಳಿದ ವರ್ಗದವರಿಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದಿದ್ದರು.
ಈ ಜಾರಿ ಗಣತಿ ವರದಿ ಜಾರಿಗೆ ಪರ ವಿರೋಧದ ನಿಲುವುಗಳು ವ್ಯಕ್ತವಾಗಿವೆ. ಪ್ರಮುಖವಾಗಿ ಹಿಂದುಳಿದ ವರ್ಗಗಳ ಸಮಾಜದವರು ಈ ಜಾತಿ ಗಣತಿ ವರದಿ ಸ್ವೀಕರಿಸಿ, ಜಾರಿ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಲಿಂಗಾಯತ, ಒಕ್ಕಲಿಗ ಸಮುದಾಯಗಳು ಈ ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ವರದಿ ಸ್ವೀಕರಿಸಬಾರದು ಎಂದು ವಿರೋಧಿಸುತ್ತಿವೆ. ಇದೇ ಕಾರಣದಿಂದಲೇ ಜಾತಿ ಗಣತಿ ವರದಿ ಜಾರಿಗೆ ಸರ್ಕಾರ ಹಿಂದೇಟು ಹಾಕುತ್ತಲೇ ಇತ್ತು. ಆದರೆ ಸಿದ್ದರಾಮಯ್ಯ ಅವರು ಭರವಸೆ ನೀಡಿರುವುದರಿಂದ ಈ ವರದಿ ಜಾರಿಯಾಗುವ ದಿನಗಳು ಹತ್ತಿರದಲ್ಲಿವೆ ಎಂದು ಹೇಳಲಾಗುತ್ತಿದೆ. ಈ ವರದಿ ಜಾರಿಗೆ ಪರ ವಿರೋಧ ಇರುವುದರಿಂದ ಇದು ಜಾರಿಯಾದರೆ, ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ್ಲ ಕಲ್ಲೋಲ ಸೃಷ್ಟಿಯಾಗುವ ಸಾಧ್ಯತೆಯೂ ಇದೆ.












Click it and Unblock the Notifications