ಬಿ.ವೈ ವಿಜಯೇಂದ್ರ ಪ್ಲ್ಯಾನ್ - ಬಿ ಏನು ?
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಬಿಜೆಪಿಯಲ್ಲಿ ಬಣ ರಾಜಕೀಯ ಈ ಹಿಂದೆ ಎಂದೂ ನಡೆಯದಷ್ಟರ ಮಟ್ಟಿಗೆ ಕರ್ನಾಟಕದಲ್ಲಿ ನಡೆದಿದೆ. ಬಿ.ವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿರುವುದನ್ನು ಬಿಜೆಪಿಯಲ್ಲಿ ಕೆಲವರು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದಾರೆ.
ಇದೀಗ ಹೈಕಮಾಂಡ್ ಕೊನೆಗೂ ಈ ಗೊಂದಲಗಳಿಗೆ ತೆರೆ ಎಳೆಯುವುದಕ್ಕೆ ಮುಂದಾಗಿದೆ. ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿನ ಬಣ ರಾಜಕೀಯಕ್ಕೆ ಬ್ರೇಕ್ ಹಾಕಿ ಹೊಸ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಫೈನಲ್ ಮಾಡಲು ಮುಂದಾಗಿದೆ. ಆದರೆ, ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿದ ಮೇಲೆ ಬಿ.ವೈ ವಿಜಯೇಂದ್ರ ಅವರು ಏನು ಮಾಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ಈ ಬಗ್ಗೆ ಅವರು ಈ ಹಿಂದೆಯೇ ಅವರ ಆಪ್ತರ ಮುಂದೆ ಹೇಳಿಕೊಂಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿಯಲ್ಲಿ ಬಣ ರಾಜಕೀಯ ಬೀದಿಗೆ ಬಂದಿದೆ. ಬಿಜೆಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಬಣಗಳು ಸೃಷ್ಟಿಯಾಗಿದ್ದು ಬಿಜೆಪಿ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಶಾಸಕರು ಬಿ.ವೈ ವಿಜಯೇಂದ್ರ ಅವರ ಕಾರ್ಯ ವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರ ನಡುವಿನ ಮುನಿಸು, ಸಂಸದ ಡಾ.ಕೆ ಸುಧಾಕರ್ ಹಾಗೂ ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಅವರ ಅಸಮಾಧಾನ ಸೇರಿದಂತೆ ಬಿಜೆಪಿಯಲ್ಲಿ ಗೊಂದಲದ ವಾತಾವರಣ ಇದೆ. ರಾಜ್ಯದಲ್ಲಿ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಹೀನಾಯವಾಗಿ ಸೋತ ಮೇಲೆ ಈ ಬಣ ಜಗಳ ಜೋರಾಗಿದೆ. ಆ ರೀತಿ ನೋಡಿದರೆ ಲೋಕಸಭೆ ಚುನಾವಣೆಯ ಸಮಯದಿಂದಲೂ ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕು ಎನ್ನುವ ಕೂಗು ಇದೆ.
ಬಿಜೆಪಿಯ ಮಾಜಿ ಮುಖಂಡ ಕೆ.ಎಸ್ ಈಶ್ವರಪ್ಪ ಅವರು ಇದೇ ಕಾರಣಕ್ಕೆ ಪಕ್ಷ ಬಿಟ್ಟು ಹೋಗಿದ್ದರು. ಮುಂದುವರಿದು ಬಿಜೆಪಿ ಪಕ್ಷವನ್ನು ಕಟ್ಟಿದವರನ್ನು ಕಡೆಗಣಿಸಲಾಗುತ್ತಿದೆ. ಪಕ್ಷ ಬಿಜೆಪಿಯ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಬಿ.ಎಸ್ ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ಅವರ ಹಿಡಿತದಲ್ಲಿ ಇದೆ ಎಂದು ಹಲವರು ದೂರಿದ್ದಾರೆ. ಇಷ್ಟೆಲ್ಲ ಗೊಂದಲ ಹಾಗೂ ಬಣ ರಾಜಕೀಯದ ನಂತರ ಕೊನೆಗೂ ಈ ಸಮಸ್ಯೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಕ್ಕೆ ಬಿಜೆಪಿ ಮುಂದಾಗಿದೆ.
ಬಿ.ವೈ ವಿಜಯೇಂದ್ರ ಮುಂದಿರುವ ಆಯ್ಕೆ ಏನು ?
ಇನ್ನು ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಒಂದೊಮ್ಮೆ ಬಿ.ವೈ ವಿಜಯೇಂದ್ರ ಅವರನ್ನು ಕೆಳಗೆ ಇಳಿಸಿದರೆ ಅವರ ಮುಂದಿನ ಆಯ್ಕೆ ಯಾವುದು ಅಥವಾ ಏನಾಗಿರಲಿದೆ ಎನ್ನುವ ಬಗ್ಗೆ ಚರ್ಚೆ ನಡೆದಿದೆ. ಈ ಹಿಂದೆ ಅವರೇ ಈ ಬಗ್ಗೆ ಅವರ ಆಪ್ತರೊಂದಿಗೆ ಈ ಬಗ್ಗೆ ರಿಯಾಕ್ಟ್ ಮಾಡಿದ್ದರು ಎನ್ನುವ ವಿಷಯ ಇದೀಗ ಚರ್ಚೆಯ ಮುನ್ನೆಲೆಗೆ ಬಂದಿದೆ.
ಒಂದೊಮ್ಮೆ ಬಿ.ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿದರೆ ಅವರು ರಾಜ್ಯದಾದ್ಯಂತ ಲಿಂಗಾಯತ ಸಮುದಾಯವನ್ನು ಕಟ್ಟುವ ಹಾಗೂ ಲಿಂಗಾಯತ ನಾಯಕರಾಗಿ ಬೆಳೆಯುವ ಲೆಕ್ಕಾಚಾರವನ್ನು ಹಾಕಿಕೊಂಡಿದ್ದಾರೆ. ಸದ್ಯಕ್ಕೆ ಬಿ.ವೈ ವಿಜಯೇಂದ್ರ ಅವರನ್ನು ಬಿಜೆಪಿ ಹೈಕಮಾಂಡ್ ಅಷ್ಟು ಸುಲಭವಾಗಿ ಬಿಟ್ಟು ಕೊಡುವ ಸಾಧ್ಯತೆ ಇಲ್ಲ. ಆದರೆ, ಒಂದೊಮ್ಮೆ ಕೆಳಗೆ ಇಳಿಸಿದರೂ ಅವರು ಪ್ಲ್ಯಾನ್ ಬಿಯನ್ನು ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications