ಬಜೆಟ್ ಬಂಪರ್ ಗೂ ಮುನ್ನ ಸಂಬಳಕ್ಕಾಗಿ ಕಾದಿರುವ ಸರ್ಕಾರಿ ನೌಕರರು
Recommended Video

ಬೆಂಗಳೂರು, ಜುಲೈ 05: ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ, ವಿತ್ತಸಚಿವರಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡಿಸುತ್ತಿದ್ದಾರೆ.
ಬಜೆಟ್ ನಲ್ಲಿ ಬಂಪರ್ ಕೊಡುಗೆ ನಿರೀಕ್ಷೆಯಲ್ಲಿರುವ ಸರ್ಕಾರಿ ನೌಕರರು ಸದ್ಯ ತಿಂಗಳ ಸಂಬಳಕ್ಕಾಗಿ ಕಾದಿರುವ ಪ್ರಸಂಗ ನಡೆದಿದೆ.
ನಿರೀಕ್ಷೆಯಂತೆ, ಈ ಹಿಂದೆ ಘೋಷಿಸಿದಂತೆ ಆರನೇ ವೇತನ ಆಯೋಗದ ಶಿಫಾರಸಿನ ಪ್ರಕಾರ, ರಾಜ್ಯ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಶೇ. 30 ಹೆಚ್ಚಳವಾಗಲಿದೆ. ಆದರೆ, ಹೆಚ್ಚುವರಿ ಮೊತ್ತ ಇನ್ನೂ ಸರ್ಕಾರಿ ನೌಕರರ ಕೈ ಸೇರಿಲ್ಲ. ಇದಕ್ಕೆ ತಾಂತ್ರಿಕ ಸಮಸ್ಯೆಯ ಕಾರಣ ನೀಡಲಾಗಿದೆ.

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್ಆರ್ಎಂಎಸ್) ತಂತ್ರಾಂಶದಲ್ಲಿ ಪರಿಷ್ಕೃತ ವೇತನದ ವಿವರಗಳನ್ನು ದಾಖಲಿಸುವ ಪ್ರಕ್ರಿಯೆ ವಿಳಂಬವಾಗಿದೆ. ಹೀಗಾಗಿ, ಜೂನ್ ತಿಂಗಳ ವೇತನದಲ್ಲಿ ಕೊಡುಗೆ ಮೊತ್ತ ಸೇರಿಲ್ಲ.
ಹೀಗಾಗಿ, ಬಜೆಟ್ ದಿನದಂದು ಐದೂವರೆ ಲಕ್ಷಕ್ಕೂ ಅಧಿಕ ನೌಕರರ ಸಂಬಳ ವಿಳಂಬವಾಗಿದೆ. ಜೂನ್ ತಿಂಗಳ ವೇತನ ನೀಡುವ ವೇಳೆ ಪರಿಷ್ಕೃತ ವೇತನ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಮೂಲಕ ಎಲ್ಲ ಇಲಾಖೆಗಳಿಗೆ ಆದೇಶ ಕಳಿಸಿತ್ತು. ಆದರೆ ಬಹುತೇಕ ಇಲಾಖೆಗಳಲ್ಲಿ ಪರಿಷ್ಕೃತ ವೇತನವನ್ನು ನೌಕರರ ಖಾತೆಗಳಿಗೆ ಜಮಾವಾಗಿಲ್ಲ. ಜುಲೈ 9 ಅಥವಾ 10 ನಂತರ ವೇತನ ಜಮಾ ಆಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಐಎಎಸ್ ನಿವೃತ್ತ ಅಧಿಕಾರಿ ಎಂ.ಆರ್. ಶ್ರೀನಿವಾಸ ಮೂರ್ತಿ ಅಧ್ಯಕ್ಷತೆಯ ಆಯೋಗವು ಜನವರಿ 31, 2018ರಂದು ಸಲ್ಲಿಸಿರುವ ವರದಿ ಹಾಗೂ ಶಿಫಾರಸ್ಸನ್ನು ಅನುಷ್ಠಾನಗೊಳ್ಳಲಿದೆ. ಈ ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದರಿಂದ ಸರ್ಕಾರದ ಬೊಕ್ಕಸಕ್ಕೆ 10,508 ಕೋಟಿ ರು ಅಧಿಕ ಹೊರೆ ಬೀಳಲಿದೆ.












Click it and Unblock the Notifications