BJP: ಬಿಜೆಪಿಯಲ್ಲಿ ವಿಪಕ್ಷ ನಾಯಕ ಕೂಡ ಬದಲಾಗ್ತಾರೆ: ಸುಳಿವು ಕೊಟ್ಟ ಶಾಸಕ
ಕರ್ನಾಟಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರದ ಕಿಡಿ ಹೊತ್ತಿಕೊಂಡಿದೆ. ಸ್ವಪಕ್ಷದಲ್ಲೇ ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಎಲ್ಲರೂ ತಿರುಗಿಬಿದ್ದಿದ್ದಾರೆ. ಹೈಕಮಾಂಡ್ ನಾಯಕರಿಗೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಈ ಬೆಳವಣಿಗೆ ನಡುವೆ ಇದೀಗ ವಿಪಕ್ಷ ನಾಯಕರ ಸ್ಥಾನ ಕೂಡ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸದ್ಯ ರಾಜ್ಯ ಬಿಜೆಪಿಗೆ ಮೇಜರ್ ಸರ್ಜರಿಯಾಗಲಿದ್ದು, ರಾಜ್ಯಾಧ್ಯಕ್ಷ ಸ್ಥಾನದ ಜೊತೆಗೆ ವಿಪಕ್ಷ ನಾಯಕ ಕೂಡ ಬದಲಾಗಲಿದ್ದಾರೆ ಎಂಬ ವಿಚಾರ ಚರ್ಚೆಗೆ ಬಂದಿದೆ. ಸದ್ಯ ವಿಪಕ್ಷ ನಾಯಕನ ಸ್ಥಾನದಲ್ಲಿ ಆರ್.ಅಶೋಕ್ ಇದ್ದು, ಇವರ ಸ್ಥಾನ ಕೂಡ ತಪ್ಪುವ ಸಾಧ್ಯತೆ ಇದೆ ಎಂದು ಗುಸುಗುಸು ಶುರುವಾಗಿದೆ. ಈ ಬಗ್ಗೆ ಕಾಂಗ್ರೆಸ್ ಸಚಿವ ಲಕ್ಷ್ಮಣ್ ಸವದಿ ಕೂಡ ಬಹಿರಂಗ ಹೇಳಿಕೆ ನೀಡಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್ ಅವರು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ವಿರುದ್ಧ ಪ್ರತಿದಿನವೂ ಆರೋಪ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆ ಮಾತ್ರವಲ್ಲ, ವಿರೋಧಪಕ್ಷದ ನಾಯಕರ ಸ್ಥಾನದ ಬದಲಾವಣೆಯೂ ಆಗಲಿದೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬಾಂಬ್ ಸಿಡಿಸಿದ್ದಾರೆ. ನನಗೆ ಬಿಜೆಪಿಯಲ್ಲಿ ಅನೇಕ ಮಂದಿ ಸ್ನೇಹಿತರಿದ್ದಾರೆ. ಅವರಿಂದಲೇ ಈ ವಿಷಯ ನನಗೆ ಗೊತ್ತಾಯಿತು. ಹಾಗಾಗಿ ಖಾಲಿಯಾಗಲಿರುವ ಎರಡೂ ಕುರ್ಚಿಗಳ ಮೇಲೆ ಹಲವು ಮಂದಿ ಕಣ್ಣಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಅಶೋಕ್ ಅವರು ವಿಪಕ್ಷಗಳ ನಾಯಕರಾಗಿರುವ ಕಾರಣ ಅವರು ಪ್ರತಿದಿನವ ಏನಾದರೂ ಹೇಳಬೇಕು. ಇಲ್ಲದಿದ್ದರೆ ಹೈಕಮಾಂಡ್ ನಾಯಕರು ಅವರನ್ನು ನಿದ್ದೆ ಮಾಡ್ತಿದ್ದೀರಾ? ಎಂದು ಕೇಳ್ತಾರೆ. ಆದ ಕಾರಣ ಅಶೋಕ್ ಸುದ್ದಿಯಲ್ಲಿರಬೇಕೆಂದು ಕಾಂಗ್ರೆಸ್ ಬಗ್ಗೆ ಏನಾದರೂ ಮಾತನಾಡುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಶೋಕ್ ಅವರು ಮೊದಲು ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಯೋಚಿಸಲಿ. ಮೊದಲಿಗೆ ನಿಮ್ಮ ಪಕ್ಷದಲ್ಲಿ ಏನು ನಡೆದಿದೆ ಎಂಬುದನ್ನು ನೋಡಿಕೊಳ್ಳಿ. ಅದನ್ನು ಬಿಟ್ಟು ಬೇರೆ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ನಿಮಗೇನಿದೆ? ಎಂದು ಪ್ರಶ್ನಿಸಿದ್ದಾರೆ.

ಇನ್ನು ತರಾತುರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಆಯ್ಕೆ ನಡೆದಿದ್ದು, ಬಿ.ವೈ.ವಿಜಯೇಂದ್ರ ಹಾಗೂ ಆರ್.ಅಶೋಕ್ ಅವರು ತಮ್ಮ ಸ್ಥಾನಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿಲ್ಲ ಎಂದು ದೂರು ಸ್ವಪಕ್ಷದಲ್ಲೇ ಕೇಳಿಬಂದಿದೆ. ಈ ಹಿನ್ನೆಲೆ ಹೈಕಮಾಂಡ್ ಕೂಡ ಎರಡೂ ಹುದ್ದೆಗಳಿಗೆ ಹೊಸ ನಾಯಕರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸದ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕರಾಗಿರು ಆರ್.ಅಶೋಕ್ ಅವರ ಕಾರ್ಯವೈಖರಿಗೆ ಬಿಜೆಪಿಯಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಕಳೆದ ಅಧಿವೇಶನದಲ್ಲೂ ಅಶೋಕ್ ಅವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ವಿಫಲರಾದರು ಎಂದು ಬೇಸರ ಹಂಚಿಕೊಂಡಿದ್ದರು.
ವಿಧಾನಸಭೆ ಕಲಾಪದಲ್ಲಿ ಸರ್ಕಾರದ ಹಗರಣಗಳ ಬಗ್ಗೆ ಪ್ರಸ್ತಾಪಿಸುವಲ್ಲಿ ಅಶೋಕ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಬದಲಿಗೆ, ಬಿಜೆಪಿಯನ್ನೇ ಮುಜುಗರಕ್ಕೆ ಸಿಲುಕಿಸಿದರು ಎಂದು ಬಿಜೆಪಿ ಶಾಸಕರು ಅಸಮಾಧಾನ ಹೊರಹಾಕಿದ್ದರು. ವಕ್ಫ್ ಮತ್ತು ಮುಡಾ ಹಗರಣ, ಪಂಚಮಸಾಲಿ ವಿವಾದ ಸೇರಿದಂತೆ ರಾಜ್ಯ ಸರ್ಕಾರವನ್ನು ಸರಿಯಾಗಿ ತರಾಟೆಗೆ ತೆಗೆದುಕೊಳ್ಳಲಿಲ್ಲ. ಅಶೋಕ್ ಅವರು ಪರಿಣಾಮಕಾರಿಯಾಗಿ ದಾಖಲೆ ಹಾಗೂ ಅಂಕಿಅಂಶಗಳ ಸಮೇತ ಸರ್ಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಫೇಲ್ ಆಗಿದ್ದರು ಎಂದು ದೂರಿದ್ದರು.
ಸದ್ಯ ಬಿ.ವೈ.ವಿಜಯೇಂದ್ರ ಹಾಗೂ ಆರ್.ಅಶೋಕ್ ಅವರ ಬಗ್ಗೆ ಬಿಜೆಪಿಯಲ್ಲಿ ಹಲವು ನಾಯಕರಿಗೆ ಅಸಮಾಧಾನವಿದ್ದು, ಇದು ಹೈಕಮಾಂಡ್ ಗಮನಕ್ಕೂ ಬಂದಿದೆ. ಹಾಗಾಗಿ ರಾಜ್ಯಾಧ್ಯಕ್ಷರ ಬದಲಾವಣೆ ಜೊತೆಗೆ ವಿಪಕ್ಷ ನಾಯಕ ಕೂಡ ಬದಲಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಸದ್ಯ ಆರ್.ಅಶೋಕ್ ಅವರಿಗೂ ಕುರ್ಚಿ ಕಂಟಕ ಎದುರಾಗಿದೆ.












Click it and Unblock the Notifications