ಗ್ಯಾರಂಟಿ ಅನುಷ್ಠಾನ ಮಾಡಿ; ಇಲ್ಲವಾದರೆ ಅಧಿಕಾರ ಬಿಟ್ಟು ತೊಲಗಿ: ನಳಿನ್‍ಕುಮಾರ್ ಕಟೀಲ್
ಬೆಂಗಳೂರು,ಜುಲೈ 04: ಸುಳ್ಳು ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದು ಜನವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‍ಕುಮಾರ್ ಕಟೀಲ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ ಅವರು, ಚುನಾವಣೆ ಪೂರ್ವದಲ್ಲಿ ಮನೆಮನೆಗೆ ಸಹಿ ಹಾಕಿದ ಗ್ಯಾರಂಟಿ ಕಾರ್ಡ್‍ಗಳನ್ನು ಹಂಚುವ ಮೂಲಕ ಸುಳ್ಳು ಘೋಷಣೆಗಳ ಆಧಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಇದೀಗ ಜನರಿಗೆ ಮೋಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಸರಕಾರ ಬಂದು 24 ಗಂಟೆಗಳಲ್ಲಿ ಭರವಸೆ ಅನುಷ್ಠಾನಕ್ಕೆ ತರುವುದಾಗಿ ಹೇಳಿದವರು ಇದೀಗ ಸುಮಾರು 2 ತಿಂಗಳಾದರೂ ಸಮರ್ಪಕ ಮಾರ್ಗಸೂಚಿಯನ್ನೇ ನೀಡಿಲ್ಲ. ಗ್ಯಾರಂಟಿಗಳನ್ನು ಕಂಡಿಷನ್‍ಗಳೊಂದಿಗೆ ಜಾರಿ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. 10 ಕೆಜಿ ಅಕ್ಕಿ ಎಂದವರು ಇದೀಗ 5 ಕೆಜಿಗೆ ಹಣ ನೀಡುತ್ತಿದ್ದಾರೆ ಎಂದ ಅವರು, ಕೊಟ್ಟ ಮಾತಿನಂತೆ ನಡೆಯಿರಿ ಎಂದು ಆಗ್ರಹಿಸಿದರು. ವಿದ್ಯುತ್ ದರ ಇವತ್ತು ಹೊರೆಯಾಗಿದೆ ಎಂದರು. ವಿದ್ಯುತ್ ದರ ಇಳಿಸಿ ಹಿಂದಿನ ದರ ವಿಧಿಸಲು ಆಗ್ರಹಿಸಿದರು.
ರಾಜ್ಯ ಸರಕಾರ ದ್ವೇಷದ ರಾಜಕೀಯ ಮಾಡುತ್ತಿದೆ. ಮತಾಂತರ ನಿಷೇಧ ಕಾಯ್ದೆ, ಗೋಹತ್ಯಾ ನಿಷೇಧ ರದ್ದು ಮಾಡುವುದನ್ನು ಅವರು ಖಂಡಿಸಿದರು. ಜನವಿರೋಧಿ ಸರಕಾರ ಇದೆಂದು ತಿಳಿಸಿದ ಅವರು, 5 ಭಾಗ್ಯಗಳನ್ನು ಮನೆಮನೆಗೆ ತಲುಪಿಸುವ ವರೆಗೆ ಹೋರಾಟ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.
ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದು ಜನರನ್ನು ವಂಚಿಸಿದ ಸರಕಾರ ಇದು ಎಂದು ಟೀಕಿಸಿದರು. 10 ಕೆಜಿ ಅಕ್ಕಿ, ಜೊತೆಗೆ ಕೇಂದ್ರದಿಂದ ಕೊಡುವ 5 ಕೆಜಿ ಅಕ್ಕಿ ಸೇರಿ 15 ಕೆಜಿ ಅಕ್ಕಿ ಕೊಡಲೇಬೇಕು. 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡಲೇಬೇಕು. ನಿರುದ್ಯೋಗಿಗಳಿಗೆ ಷರತ್ತಿನಲ್ಲದೆ ಭತ್ಯೆ ಕೊಡಿ. ಗೃಹಿಣಿಗೆ 2 ಸಾವಿರ ರೂ. ಕೊಡಿ ಎಂದು ಆಗ್ರಹಿಸಿದರು.
ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿದರೆ ಅದರ ಪರಿಣಾಮ ಒಳ್ಳೆಯದಾಗುವುದಿಲ್ಲ. ಗ್ಯಾರಂಟಿ ಅನುಷ್ಠಾನ ಮಾಡಿ, ಇಲ್ಲವಾದರೆ ಅಧಿಕಾರ ಬಿಟ್ಟು ತೊಲಗಿ ಎಂದು ಎಚ್ಚರಿಕೆ ನೀಡಿದರು. ಜನವಿರೋಧಿ, ಭ್ರಷ್ಟ ಸರಕಾರದ ವಿರುದ್ಧ ನಿರಂತರ ಹೋರಾಟಕ್ಕೆ ಕಾರ್ಯಕರ್ತರು ಸಿದ್ಧರಾಗಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಮಾತನಾಡಿ, ವಂಚನೆ ತನ್ನ ಹುಟ್ಟುಗುಣ ಎಂಬುದನ್ನು ಕಾಂಗ್ರೆಸ್ ಮತ್ತೆ ಸಾಬೀತುಪಡಿಸಿದೆ ಎಂದು ಟೀಕಿಸಿದರು. ಯುವ ನಾಯಕ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಇದು ಮಾತು ತಪ್ಪಿದ ದುಷ್ಟ ಸರಕಾರ ಎಂದು ಆರೋಪಿಸಿದರು. ಜನರ ಕಿವಿಗೆ ಹೂ ಮುಡಿಸುವ ಕೆಲಸವನ್ನು ಈ ಸರಕಾರ ಮಾಡಿದೆ ಎಂದು ಆಕ್ಷೇಪಿಸಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾತನಾಡಿ, ಭ್ರಷ್ಟ, ಜನವಿರೋಧಿ ಸಿದ್ದರಾಮಯ್ಯ ಸರಕಾರವು ದೀರ್ಘ ಕಾಲ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ನುಡಿದರು. ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವಂತೆ ಆಗ್ರಹಿಸಿದರು. ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಎಲ್ಲ 28 ಸ್ಥಾನಗಳನ್ನು ಗೆಲ್ಲಲಿದೆ ಎಂದು ತಿಳಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾತನಾಡಿ, ಈ ಸರಕಾರದ ವಾರಂಟಿ ಡಿಸೆಂಬರ್‍ವರೆಗೆ ಮಾತ್ರ. ಸಿದ್ದರಾಮಯ್ಯ ಕುರ್ಚಿ ಖಾಲಿ ಮಾಡುವುದಿಲ್ಲ; ಡಿ.ಕೆ.ಶಿವಕುಮಾರ್ ಗೆ ಕುರ್ಚಿ ಸಿಗುವುದಿಲ್ಲ ಎಂದು ನುಡಿದರು. ಗ್ಯಾರಂಟಿ ವಿಷಯದಲ್ಲಿ ಸರಕಾರ ಈಗ ಹೊಸ ನಾಟಕ ಮಾಡುತ್ತಿದೆ ಎಂದು ಟೀಕಿಸಿದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲಾಗದು ಎಂದರು.












Click it and Unblock the Notifications