ರೇಣುಕಾಸ್ವಾಮಿ ಕೊಲೆ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಲಿ ಎಂದ ಬಿ.ವೈ ವಿಜಯೇಂದ್ರ
ಬೆಂಗಳೂರು, ಜೂನ್ 13: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ ಹದಿನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ. ರೇಣುಕಾಸ್ವಾಮಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಸದ್ಯ ಪ್ರಕರಣದ ತನಿಖೆ ಮುಂದುವರಿದೆ.
ಈ ಪ್ರಕರಣದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.' ಚಿತ್ರದುರ್ಗದ ಯುವಕ ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆಗೈಯ್ದಿರುವ ಪ್ರಕರಣ ಅತ್ಯಂತ ಅಮಾನವೀಯ ಹಾಗೂ ಖಂಡನೀಯ. ನಟ ದರ್ಶನ್ ಸೇರಿದಂತೆ ಇತರರ ಮೇಲೆ ಬಂದಿರುವ ಆರೋಪ ಅತ್ಯಂತ ಕಳವಳಕಾರಿ ಘಟನೆಯಾಗಿದೆ.

ಸರ್ಕಾರ ಯಾವುದೇ ಮುಲಾಜಿಗೂ ಈಡಾಗದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ತನಿಖೆಯನ್ನು ಬಿಗಿಗೊಳಿಸಲಿ. ಮೃತ ರೇಣುಕಾಸ್ವಾಮಿ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ, ರೇಣುಕಾ ಸ್ವಾಮಿ ಸಾವಿಗೆ ನ್ಯಾಯ ಸಿಗುವಂತಾಗಲಿ ಎಂದು ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.
ನಟ ದರ್ಶನ್‌ಗೂ ಕಾನೂನು ಒಂದೇ- ಗೃಹ ಸಚಿವ ಡಾ.ಜಿ ಪರಮೇಶ್ವರ್
ದರ್ಶನ್ ಬಂಧನದ ಬಗ್ಗೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಮಾತನಾಡಿ, ನಟ ದರ್ಶನ್ ಪ್ರಕರಣದಿಂದ ಬಚಾವ್ ಆಗಲು ಪ್ರಭಾವಿ ರಾಜಕಾರಣಿಯಿಂದ ಪ್ರಯತ್ನ ಮಾಡಿದ್ದರು ಎಂಬ ಆರೋಪ ಬಗ್ಗೆ ನನಗೆ ಗೊತ್ತಿರುವಂತೆ ಯಾರು ಸಹ ಪ್ರಯತ್ನ ಮಾಡಿಲ್ಲ. ಕಾನೂನಿನಲ್ಲಿ ಏನೆಲ್ಲ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಅದನ್ನು ಪೊಲೀಸರು ಮಾಡುತ್ತಾರೆ. ಇದರಲ್ಲಿ ಸರ್ಕಾರದಿಂದ ನಾವ್ಯಾರು ಮಧ್ಯ ಪ್ರವೇಶಿಸುವುದಿಲ್ಲ. ಮುಕ್ತವಾಗಿ ತನಿಖೆ ನಡೆಸಲು ಪೊಲೀಸರಿಗೆ ಅವಕಾಶವಿದೆ ಎಂದು ಹೇಳಿದರು.
ಎಲ್ಲರಿಗೂ ಕಾನೂನು ಒಂದೇ. ನಟ ದರ್ಶನ್‌ಗೂ ಕಾನೂನು ಒಂದೇ, ಪರಮೇಶ್ವರ್‌ಗೂ ಒಂದೇ ಕಾನೂನು. ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು. ನಟ ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ತನಿಖೆಯಲ್ಲಿ ಬರುವ ಅಂಶಗಳನ್ನು ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಯಾರು ಸಹ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.
ಶಿಕ್ಷೆ ಸಿಗುವವರೆಗೂ ಚುರುಕುತನ ತನಿಖೆ ನಡೆಯಬೇಕು-ಬಸವರಾಜ ಬೊಮ್ಮಾಯಿ
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದ್ದು, ನಟ ದರ್ಶನ್ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಸಿಗುವವರೆಗೂ ಚುರುಕುತನ ತನಿಖೆ ನಡೆಯಬೇಕು. ಮುಖ್ಯವಾಗಿ ಪ್ರಕರಣದಲ್ಲಿ ನಿಯತ್ತಿನ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications