ಕಲಾಪದಲ್ಲಿ ಗ್ಯಾರಂಟಿ ಗದ್ದಲ; ವಿಧಾನಸಭೆ, ಪರಿಷತ್ ಕಲಾಪ ಮುಂದೂಡಿಕೆ
ಬೆಂಗಳೂರು, ಜುಲೈ 04; ಕರ್ನಾಟಕ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳ ಅನುಷ್ಠಾನದಲ್ಲಿ ದ್ರೋಹ ಮಾಡಲಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪ ಮಾಡಿದೆ. ಈ ಕುರಿತು ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಬಿಜೆಪಿ ಸದಸ್ಯರ ಗದ್ದಲದ ಕಾರಣ ಉಭಯ ಸದನಗಳ ಕಲಾಪವನ್ನು 3 ಗಂಟೆಗೆ ಮೂಂದೂಡಲಾಗಿದೆ.
ಮಂಗಳವಾರದ ಕಲಾಪ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದು ಗದ್ದಲ ಎಬ್ಬಿಸಿದರು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, "ಈ ಮೊಂಡಾಟ ಬಿಡಿ, ಮೊಂಡಾಟದಿಂದ ಏನೂ ಆಗಲ್ಲ" ಎಂದು ಹೇಳಿದರು.

ಗದ್ದಲ ಮಾಡುತ್ತಿದ್ದ ಬಿಜೆಪಿಯ ಸದಸ್ಯರು 'ಮೊಂಡಾಟ' ಎಂಬ ಪದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಆಗ ಸಿದ್ದರಾಮಯ್ಯ ಪುನಃ "ಮೊಂಡಾಟ ಅಸಂವಿಧಾನ ಪದವಾ?, ಯಾವುದೇ ಪ್ರಶ್ನೆಗೆ ಉತ್ತರ ನೀಡಲು ನಾವು ತಯಾರು. ವಿಪಕ್ಷಗಳ ಮಾತಿಗೆ ಹೆದರಿಕೊಂಡು ಓಡಿ ಹೋಗಲ್ಲ" ಎಂದರು.
ಸದನದಲ್ಲಿ ಗದ್ದಲ ಹೆಚ್ಚಾದ ಕಾರಣ ಸ್ಪೀಕರ್ ಯು. ಟಿ. ಖಾದರ್ ಕಲಾಪವನ್ನು ಕೆಲವು ನಿಮಿಷಗಳ ಕಾಲ ಮುಂದೂಡಿದರು. ಆಗ ವಿಧಾನ ಪರಿಷತ್‌ನಲ್ಲಿಯೂ ಗ್ಯಾರಂಟಿ ಯೋಜನೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಬಿಜೆಪಿ ಗದ್ದಲ ಆರಂಭಿಸಿತು. ಮತ್ತೊಂದು ಕಡೆ ಸದನದ ಹೊರಗೆ ಫ್ರೀಡಂಪಾರ್ಕ್ನಲ್ಲಿ ಬಿಜೆಪಿ ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿಭಟನೆ ಆರಂಭಿಸಿತು.
ಕಲಾಪ ಮುಂದೂಡಿಕೆ; ವಿಧಾನ ಪರಿಷತ್‌ನಲ್ಲಿಯೂ ಬಿಜೆಪಿ ಗದ್ದಲ ಮುಂದುವರೆದಿದ್ದರಿಂದ ಕಲಾಪವನ್ನು ಮೊದಲು 12 ಗಂಟೆಗೆ ಮುಂದೂಡಿಕೆ ಮಾಡಲಾಯಿತು. ಬಳಿಕ ಕಲಾಪ ಆರಂಭವಾದರೂ ಸದಸ್ಯರ ಗದ್ದಲ ಕೊನೆಗೊಳ್ಳಲಿಲ್ಲ. ಆದ್ದರಿಂದ ಮಧ್ಯಾಹ್ನ 3 ಗಂಟೆಗೆ ಕಲಾಪವನ್ನು ಸಭಾಪತಿ ಬಸವರಾಜ ಹೊರಟ್ಟಿ ಮೂಂದೂಡಿಕೆ ಮಾಡಿದರು.
ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದರು. ದ್ರೋಹ ದ್ರೋಹ ಕಾಂಗ್ರೆಸ್ ದ್ರೋಹ ಎಂದು ಘೋಷಣೆಗಳನ್ನು ಕೂಗಿದರು. ಆಗ ಕಾಂಗ್ರೆಸ್ ಶಾಸಕರು ಸಹ ಬಿಜೆಪಿ ವಿರುದ್ದ ಘೋಷಣೆ ಕೂಗಿದರು. ಆಗ ಸ್ಪೀಕರ್ ಕಲಾಪವನ್ನು ಕೆಲವು ಕಾಲ ಮುಂದೂಡಿದರು.
ಬಳಿಕ ಸ್ಪೀಕರ್ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಚಿವ ವಿ. ಸುನಿಲ್ ಕುಮಾರ್ ಭೇಟಿ ಮಾಡಿದರು. ಬಳಿಕ ಮತ್ತೆ ಕಲಾಪ ಆರಂಭವಾದರೂ ಸಹ ಬಿಜೆಪಿ ಸದಸ್ಯರು ಗದ್ದಲ ಮುಂದುವರೆಸಿದರು. ಆಗ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ ಮಾಡಲಾಯಿತು.
ಬಿಜೆಪಿ ನಾಯಕರ ವಾಗ್ದಾಳಿ; ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬಿಜೆಪಿ ಪ್ರತಿಭಟನೆ ಆರಂಭವಾಯಿತು. ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, "ರಾಜ್ಯದ ಜನರಿಗೆ ಕಾಂಗ್ರೆಸ್ ಸುಳ್ಳು ಹೇಳಿ, 5 ಗ್ಯಾರಂಟಿ ಕಾರ್ಡ್ ಹಂಚಿ ಅಧಿಕಾರಕ್ಕೆ ಬಂದಿದೆ. ಸರ್ಕಾರ ರಚನೆಯಾದ 24 ಗಂಟೆಯೊಳಗೆ ಜನರಿಗೆ ಗ್ಯಾರಂಟಿಗಳನ್ನು ತಲುಪಿಸುತ್ತೇವೆ ಎಂದು ನಾಯಕರು ಹೇಳಿದ್ದರು. ಆದರೆ ಯಾವ ಗ್ಯಾರಂಟಿಯೂ ಜನರಿಗೆ ಸಮರ್ಪಕವಾಗಿ ತಲುಪಿಲ್ಲ" ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾತನಾಡಿ, "ನಾವು ಕರ್ನಾಟಕ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಅವರು ನೀಡಿದ ಯಾವುದೇ ಭರವಸೆಗಳು ಜಾರಿಯಾಗಿಲ್ಲ. ನಾವು ಯಾವುದೇ ಹೊಸ ಬೇಡಿಕೆ ಮುಂದಿಟ್ಟಿಲ್ಲ. ಅವರು ನೀಡಿದ 5 ಗ್ಯಾರಂಟಿ ಜಾರಿಗೊಳಿಸಲಿ ಎಂಬುದು ನಮ್ಮ ಪ್ರಮುಖ ಬೇಡಿಕೆ ಅವರು ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ನಾವು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹೋರಾಟ ನಡೆಸುತ್ತೇವೆ" ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.












Click it and Unblock the Notifications