ವರುಣಾದಿಂದ ಸಿದ್ದರಾಮಯ್ಯ ಸ್ಪರ್ಧೆ ಫಿಕ್ಸ್! ಸಿದ್ದು ಸೋಲಿಸಲು ಬಿಜೆಪಿ ಪ್ಲಾನ್: ಬಿಜೆಪಿ ಪ್ರಬಲ ಸ್ಪರ್ಧಿ ಯಾರು ಗೊತ್ತಾ?
ಬೆಂಗಳೂರು, ಮಾರ್ಚ್ 23: ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಪ್ರಚಾರದ ಕಣ ರಂಗೇರುತ್ತಿದೆ. ಇತ್ತ ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟವೇ ದೊಡ್ಡ ಗೊಂದಲವಾಗಿದ್ದು, ಹೈಕಮಾಂಡ್ ಸೂಚನೆ ಮೇರೆಗೆ ಕೋಲಾರ ಸ್ಪರ್ಧೆಯಿಂದ ಸಿದ್ದರಾಮಯ್ಯ ಹಿಂದೆ ಸರಿದಿದ್ದಾರೆ.
ಈಗಾಗಲೇ ಹೈಕಮಾಂಡ್ ಸೂಚನೆಯಂತೆ ವರುಣಾ ಕ್ಷೇತ್ರದಲ್ಲೇ ಸಿದ್ದರಾಮಯ್ಯ ಸ್ಪರ್ಧೆಗೆ ರೆಡಿಯಾಗಿದ್ದು, ಈ ಬಾರೀ ಶತಾಯಗತಾಯ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ತವರು ನೆಲದಲ್ಲೇ ಹಿಮ್ಮೆಟ್ಟಿಸಬೇಕೆಂದು ಬಿಜೆಪಿ ರಣತಂತ್ರ ರೂಪಿಸಿದೆ.

ಹೈಕಮಾಂಡ್ ನಿರ್ಧಾರಕ್ಕೆ ಒಪ್ಪಿ ಸಿದ್ದರಾಮಯ್ಯಯ ವರುಣಾದಲ್ಲೇ ಸ್ಪರ್ಧೆ ಮಾಡಿದ್ರೆ ಮಾಜಿ ಮುಖ್ಯಮಂತ್ರಿ ಪುತ್ರ ಬಿ.ವೈ ವಿಜಯೇಂದ್ರ ಅವರನ್ನ ಕಣಕ್ಕಿಳಿಸಲ ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಹೈಕಮಾಂಡ್ ಸೂಚನೆಯಂತೆ ವರುಣಾದಲ್ಲಿ ಸ್ಪರ್ಧೆ ಮಾಡಿದ್ರೆ, ಇತ್ತ ಬಿಜೆಪಿಯಿಂದ ವಿಜಯೇಂದ್ರ ಸ್ಪರ್ಧೆ ಮಾಡಿದ್ರೆ ಈ ಬಾರಿ ವರುಣಾ ಕ್ಷೇತ್ರವೂ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆಯುವುದರಲ್ಲಿ ಸಂಶಯವಿಲ್ಲ.
ಈ ಹಿಂದೆ 2018 ರ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಿದ್ದ ಸಿದ್ದರಾಮಯ್ಯ ಅವರು, ಈ ಬಾರೀ ಒಂದೇ ಕ್ಷೇತ್ರದಲ್ಲಿ ಆಯ್ಕೆ ಮಾಡಿಕೊಳ್ಳಲ್ಲಿದ್ದು, ವರುಣಾ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಅವರು ವರುಣಾದಿಂದಲೇ ಸ್ಪರ್ಧೆ ಮಾಡಿದರೆ ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಕಟ್ಟಿ ಹಾಕಬೇಕೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಈಗಾಗಲೇ ಶಿಕಾರಿಪುರದಿಂದ ಸ್ಪರ್ಧೆ ಮಾಡುವುದಾಗಿ ವಿಜಯೇಂದ್ರ ಘೋಷಣೆ ಮಾಡಿದ್ದಾರೆ. ಆದರೆ ವರುಣಾದಿಂದ ವಿಜಯೇಂದ್ರ ಅವರನ್ನ ಕಣಕ್ಕಿಳಿಸಪಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದೀಗ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ್, ವರುಣಾದಿಂದಲೇ ಸ್ಪರ್ಧೆ ಮಾಡಲಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದ್ದು, ಬಿಜೆಪಿ ಕೂಡ ರಾಜಕೀಯ ತಂತ್ರಗಾರಿಕೆಯನ್ನು ಬದಲಾಯಿಸಿದ್ದು, ವಿಜಯೇಂದ್ರಗೆ ವರುಣಾದಿಂದ ಟಿಕೆಟ್ ನೀಡುವ ಕುರಿತು ಪಕ್ಷದ ವಲಯದಲ್ಲಿ ಚಿಂತನಮಂಥನ ನಡೆದಿದೆ. ಈ ಹಿಂದೆ 2018ರ ವಿಧಾನಸಭಾ ಚುನಾವಣೆಯಲ್ಲೇ ವಿಜಯೇಂದ್ರಗೆ ವರುಣಾದಿಂದ ಕಣಕ್ಕಿಳಿಸುವ ಕುರಿತು ಸಾಕಷ್ಟು ಚರ್ಚೆ ನಡೆದಿದ್ದು, ಕೊನೆಕ್ಷಣದಲ್ಲಿ ಪಕ್ಷದ ವರಿಷ್ಠರು ಹಿಂದೆ ಸರಿಯಬೇಕೆಂದು ಸೂಚನೆ ಕೊಟ್ಟಿದ್ದರಿಂದ ವಲ್ಲದ ಮನಸ್ಸಿನಿಂದಲೇ ಹಿಂದೆ ಸರಿದರು, ಆದರೆ, ಇದೀಗ ವರುಣಾದಿಂದ ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದು, ತವರು ಕ್ಷೇತ್ರ ಶಿಕಾರಿಪುರವನ್ನ ವಿಜಯೇಂದ್ರ ಸ್ಪರ್ಧೆಗೆ ಘೋಷಿಸಿದ್ರು. ಅದರಂತೆ ವಿಜಯೇಂದ್ರ ಶಿಕಾರಿಪುರದಲ್ಲಿ ಕಣಕ್ಕಿಳಿಯಲು ಬೇಕಾದ ಸಿದ್ದತೆಯನ್ನು ನಡೆಸಿದ್ದಾರೆ. ಕ್ಷೇತ್ರದಲ್ಲಿ ಎರಡು ಬಾರಿ ಪ್ರವಾಸವನ್ನು ಸಹ ನಡೆಸಿದ್ದಾರೆ.

ವರುಣಾ ಕ್ಷೇತ್ರ ಕಾಂಗ್ರೆಸ್‍ನ ಭದ್ರಕೋಟೆ ಎಂದು ಹೇಳಿದರೂ ಈ ಕ್ಷೇತ್ರದಲ್ಲಿ ಲಿಂಗಾಯಿತ ಸೇರಿದಂತೆ ಬೇರೆ ಬೇರೆ ಸಮುದಾಯದ ಮತಗಳು ನಿರ್ಣಾಯಕವಾಗಿವೆ. ರಾಜ್ಯಾದ್ಯಂತ ಸಿದ್ದರಾಮಯ್ಯ ಪ್ರವಾಸ ನಡೆಸದೆ ವರುಣಾ ಕ್ಷೇತ್ರಕ್ಕೆ ಸೀಮಿತಗೊಳಿಸುವ ನಿಟ್ಟಿನಲ್ಲಿ ವಿಜಯೇಂದ್ರನನ್ನು ಅಖಾಡಕ್ಕಿಳಿಸಲು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸಿದೆ. ಅಂತಿಮವಾಗಿ ಸಿದ್ದರಾಮಯ್ಯ ತೆಗೆದುಕೊಳ್ಳುವ ನಿರ್ಧಾರದ ಮೇಲೆ ವಿಜಯೇಂದ್ರ ಸ್ಪರ್ಧೆ ನಿರ್ಧಾರವಾಗಲಿದೆ.
ಇತ್ತ ಹೈಕಮಾಂಡ್ ವರಿಷ್ಠರ ಲೆಕ್ಕಾಚಾರವೇ ಬೇರೆಯದ್ದಾಗಿದೆ. ಶಿಕಾರಿಪುರದಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿ ಗೆಲ್ಲಿಸುವುದು ಸುಲಭ. ವಿಜಯೇಂದ್ರ ಅವರಿಗಿರುವ ವರ್ಚಸ್ಸು ಪ್ರಭಾವವನ್ನು ಬಳಸಿಕೊಂಡು ವರುಣಾದಿಂದ ಕಣಕ್ಕಿಳಿಸಲು ರಣತಂತ್ರ ರೂಪಿಸಿದೆ. ಕೇವಲ ವರುಣಾ ಕ್ಷೇತ್ರ ಮಾತ್ರವಲ್ಲದೆ ಮೈಸೂರು ಮತ್ತು ಚಾಮರಾಜನಗರ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಲಿಂಗಾಯಿತ ಮತಗಳನ್ನು ಸೆಳೆಯುವುದು ಹಾಗೂ ಸಿದ್ದರಾಮಯ್ಯ ಅವರನ್ನು ಮತ್ತೊಮ್ಮೆ ತವರು ಜಿಲ್ಲೆಯಲ್ಲಿ ಸೋಲಿನ ರುಚಿ ತೋರಿಸಬೇಕೆಂಬುದು ಬಿಜೆಪಿ ರೂಪಿಸಿರುವ ರಣತಂತ್ರ ರೂಪಿಸಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಅವರನ್ನು ವರುಣಾದಲ್ಲಿ ಕಟ್ಟಿ ಹಾಕಲು ವಿಜಯೇಂದ್ರ ಅಸ್ತ್ರ ಬಳಸಲು ಮುಂದಾಗಿದ್ದು, ಮೈಸೂರು ಮತ್ತು ಚಾಮರಾಜನಗರ ಭಾಗದಲ್ಲಿ ಬಿಎಸ್‍ವೈ ಹೆಚ್ಚು ಹೆಚ್ಚು ಪ್ರಚಾರ ನಡೆಸಿದಷ್ಟು ಪಕ್ಷಕ್ಕೆ ಆನೆ ಬಲ ಬರಲಿದೆ. ಲಿಂಗಾಯಿತ ಮತಗಳು ಸೆಳೆಯುವುದರಿಂದ ಹೆಚ್ಚುವರಿ ಕ್ಷೇತ್ರಗಳನ್ನು ಗೆಲ್ಲಬಹುದೆಂಬ ಆಲೋಚನೆಯೂ ಇದೆ. ವಿಜಯೇಂದ್ರ ಸ್ಪರ್ಧೆಯಿಂದಾಗಿ ಯಡಿಯೂರಪ್ಪಗೂ ಪುತ್ರನನ್ನು ಗೆಲ್ಲಿಸಿಕೊಡಬೇಕಾದ ಅನಿವಾರ್ಯತೆ ಎದುರಾಗಲಿದ್ದು, ಪ್ರತಿಷ್ಠೆಯ ಕ್ಷೇತ್ರವಾಗಿ ಯಡಿಯೂರಪ್ಪನವರು ವರುಣಾ ಕ್ಷೇತ್ರವನ್ನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಒಟ್ನಾಲಿ ಸಿದ್ದರಾಮಯ್ಯ ಕ್ಷೇತ್ರ ಗೊಂದಲವೇ ದೊಡ್ಡ ತಲೆನೋವಾಗಿದ್ದು, ಅಂತಿಮವಾಗಿ ಸಿದ್ದರಾಮಯ್ಯ ತೆಗೆದುಕೊಳ್ಳುವ ನಿರ್ಧಾರದ ಮೇಲೆ ವಿಜಯೇಂದ್ರ ಸ್ಪರ್ಧೆ ನಿರ್ಧಾರವಾಗಲಿದೆ.












Click it and Unblock the Notifications