Temple Priests: ಅರ್ಚಕರ ಅಭಿವೃದ್ಧಿ ಕಾನೂನಿಗೆ ಬಿಜೆಪಿ ಅಡ್ಡಿ, ಅನುಮೋದನೆ ವಿಳಂಬ: ಅರ್ಚಕರ ಒಕ್ಕೂಟ
ಬೆಂಗಳೂರು, ಏಪ್ರಿಲ್ 06: ತಸ್ತಿಕ್ ಮೊತ್ತ ಹೆಚ್ಚಿಸಿದ್ದ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದಲ್ಲಿನ ಅರ್ಚಕರ ಏಳಿಗೆಗೆ ರೂಪಿಸಿರುವ ಕಾನೂನನ್ನು ರಾಜ್ಯ ಬಿಜೆಪಿಯು ವಿರೋಧಿಸುತ್ತಿದೆ. ಈ ಮೂಲಕ ಅರ್ಚಕರ ಕಲ್ಯಾಣಕ್ಕೆ ಅಡ್ಡಿಗಾಲು ಹಾಕುತ್ತಿದೆ. ರಾಜ್ಯಪಾಲರಿಂದ ಅಂಕಿತ ಹಾಕದಿರಲು ಮತ್ತು ವಿಳಂಬಕ್ಕೆ ಬಿಜೆಪಿಯ ಆಕ್ಷೇಪ ನೀತಿಯೇ ಕಾರಣ ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ (ರಿ.) ಸೇರಿದಂತೆ ಅರ್ಚಕರ ಸಮೂಹ ಬೇಸರ ಹೊರ ಹಾಕಿದೆ.
ಧರ್ಮದ ವಿಷಯದಲ್ಲಿ ರಾಜಕೀಯ ಮಾಡಬಾರದು. ಆದರೆ ಕರ್ನಾಟಕ ಬಿಜೆಪಿ ನಾಯಕರು ಧರ್ಮದ ಹೆಸರಿನಲ್ಲಿಯೇ ರಾಜಕೀಯ ಮಾಡುತ್ತಾ ಬಂದಿದ್ದದ್ದಾರೆ. ಈಗಲೂ ಸಹ ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯಡಿಯಲ್ಲಿ ಬರುವ ದೇವಸ್ಥಾನಗಳ ಹಾಗೂ ಅರ್ಚಕರ ಕಲ್ಯಾಣ ಅಭಿವೃದ್ಧಿ ಮಾಡಿಲ್ಲ. ಸದ್ಯ ಕಾಂಗ್ರೆಸ್ ಸರ್ಕಾರ ಮಾಡಲು ಯೋಜಿಸಿರುವ ಕಾಯಿದೆಯನ್ನು ಸಹಿಸದೆ ಮಾನ್ಯ ರಾಜ್ಯಪಾಲರಿಗೆ ಒತ್ತಡ ಹೇರಿ ಸಹಿ ಹಾಕದಂತೆ ಮಾಡಿದೆ. ಬಿಜೆಪಿಯು ಅರ್ಚಕ ಸಮೂಹಕ್ಕೆ ದ್ರೋಹ ಬಗೆಯುತ್ತಿದೆ ಎಂದು ಒಕ್ಕೂಟದ ಸದಸ್ಯರು ದೂರಿದರು.

ಕಾಂಗ್ರೆಸ್ ಸರ್ಕಾರವು ಅರ್ಚಕರ ಕಲ್ಯಾಣಕ್ಕೆ ಯೋಜನೆ ರೂಪಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿ ವರ್ಷವಾದರೂ ಮಾನ್ಯ ರಾಜ್ಯಪಾಲರು ಸಹಿ ಹಾಕಿಲ್ಲ. ಅರ್ಚಕರ ಕಲ್ಯಾಣ ಯೋಜನೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ವಿಳಂಬಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರ ಸಾವಿರಾರು ದೇವಾಲಯಗಳ ಅರ್ಚಕರ ಅಭಿವೃದ್ಧಿಗಾಗಿ ಮನೆ ನಿರ್ಮಾಣ, 10 ಲಕ್ಷ ರೂಪಾಯಿ ಜೀವ ವಿಮೆ, ಅರ್ಚಕರ ಮಕ್ಕಳಿಗೆ ಪ್ರತಿ ವರ್ಷ ವಿದ್ಯಾರ್ಥಿ ವೇತನ, ಪ್ರತಿ ವರ್ಷ 'ಸಿ' ಗ್ರೇಡ್ ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಮುಂತಾದ ಮಹತ್ವದ ಸೌಲಭ್ಯ ನೀಡಬೇಕೆಂಬ ಉದ್ದೇಶದಿಂದ ಕಾನೂನು ರೂಪಿಸಿದೆ. ಆದರೆ ಇದನ್ನು ಬಿಜೆಪಿ ಸಹಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿಲ್ಲ.

ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅರ್ಚಕರ ತಸ್ತೀಕ್ ಮೊತ್ತವನ್ನು ರೂಪಾಯಿ 60,000 ದಿಂದ ರೂ.72,000 ಹೆಚ್ಚಳ ಮಾಡಿ ಭರ್ಜರಿ ಗುಡ್ ನ್ಯೂಸ್ ನೀಡಿತ್ತು. ಈ ಮೊದಲು ಕೂಡ ಅಂದರೆ 2013, 2015 ಮತ್ತು 2017 ಹಾಗೂ ಪ್ರಸ್ತುತ 2025 ರಲ್ಲಿ ಒಟ್ಟು 4 ಬಾರಿ ರೂ.48,000 ರೂಪಾಯಿ ಹೆಚ್ಚಿಸಲಾಗಿದೆ. ಇಷ್ಟು ಬಾರಿಯೂ ತಸ್ತೀಕ್ ಮೊತ್ತವನ್ನು ಹೆಚ್ಚಿಸಿರುವುದು ಕಾಂಗ್ರೆಸ್ ಸರ್ಕಾರ ಎಂದ ಅರ್ಚಕ ಸಮೂಹ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಸನ್ಮಾನಿಸಿದ್ದರು. ಹರ್ಷ ವ್ಯಕ್ತಪಡಿಸಿದ್ದರು.
ಅರ್ಚಕರ, ಆಗಮಿಕರ ಹಾಗೂ ಉಪಾಧಿವಂತರುಗಳ ಕಷ್ಟ ಕಾರ್ಪಣ್ಯಗಳಿಗಾಗಿ ಅವರ ದುಃಖ, ದುಮ್ಮಾನಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ ಸಾಮಾಜಿಕ ನೆಲೆಯಲ್ಲಿ, ಇತ್ತೀಚಿನ ದಿನಗಳಲ್ಲಿ ಮುಜರಾಯಿ ಇಲಾಖೆಯಲ್ಲಿ ಅಭಿವೃದ್ಧಿಯ ಪ್ರವಾಹವೇ ಆಗಿದೆ.
ಅರ್ಚಕರ ಅನುಕೂಲಕ್ಕಾಗಿ ಕಾನೂನು ತಿದ್ದುಪಡಿ ಮಾಡಿರುವ ಕಡತ ಸಂಬಂಧ ಅರ್ಚಕರ ನಿಯೋಗದೊಂದಿಗೆ ಮಾನ್ಯ ರಾಜ್ಯಪಾಲರನ್ನು ಭೇಟಿ ಮಾಡಿ ಯಾವ ಉದ್ದೇಶದಿಂದ ಕಡತಕ್ಕೆ ಸಹಿಹಾಕದೆ ವಿಳಂಬ ಮಾಡುತ್ತಿದ್ದೀರಿ ಎಂದು ಕೇಳಿ, ಅನುಮೋದನೆಗೆ ಮನವಿ ಮಾಡಲಾಗುವುದು ಎಂದು ಒಕ್ಕೂಟದ ಮುಖ್ಯ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎಸ್.ಎನ್. ದೀಕ್ಷಿತ್, ಗೌರವ ಪ್ರಧಾನ ಸಲಹೆಗಾರರು ಡಾ. ರಾಧಾಕೃಷ್ಣ ಕೆ.ಇ, ಗೌರವ ಉಪಾಧ್ಯಕ್ಷ ಡಾ. ಎಸ್.ಆರ್. ಶೇಷಾದ್ರಿ, ಭಟ್ಟರ್ ಅವರು ತಿಳಿಸಿದರು.












Click it and Unblock the Notifications