ಶ್ರೀರಾಮಲು ಪಕ್ಷ ತೊರೆಯುವ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಅಲರ್ಟ್: ಸ್ವಾಭಿಮಾನಿಗೆ ಸಿಎಂ ಫೋನ್ ಕಾಲ್?
ರಾಜ್ಯ ಬಿಜೆಪಿಯಲ್ಲಿ ಇದೀಗ ನಾಯಕರ ಅಸಮಾಧಾನ ತಣಿಸುವುದೇ ದೊಡ್ಡ ಸವಾಲಾಗಿದೆ. ದಿನಕ್ಕೊಬ್ಬ ನಾಯಕರು ಪಕ್ಷದ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ. ಒಂದೆಡೆ ಆಂತರಿಕ ಕಚ್ಚಾಟ ಹಾಗೂ ಬಣ ಬಡಿದಾಟದಿಂದಲೂ ಬಿಜೆಪಿ ಮನೆಯಲ್ಲಿ ಒಡಕು ಮೂಡಿರುವ ಲಕ್ಷಣಗಳು ಕಂಡುಬರುತ್ತಿವೆ. ಸದ್ಯ ಬಿಜೆಪಿ ಸಂಸದರಾದ ಬಿ.ಶ್ರೀರಾಮುಲು ಅವರು ಬಹಿರಂಗವಾಗಿಯೇ ಪಕ್ಷ ತೊರೆಯುವ ಬಗ್ಗೆ ಮಾತನಾಡಿ ಸಂಚಲನ ಸೃಷ್ಟಿಸಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಸದ ಬಿ.ಶ್ರೀರಾಮುಲು ಅವರು ಪಕ್ಷ ತೊರೆಯುತ್ತೇನೆ ಎಂದು ನಾಯಕರ ಮುಂದೆಯೇ ಅಭಿಪ್ರಾಯ ತಿಳಿಸಿದ್ದಾರೆ. ನಿಷ್ಠಾವಂತರಿಗೆ, ಶ್ರಮ ಹಾಕಿ ಕೆಲಸ ಮಾಡುವವರಿಗೆ ಇಲ್ಲಿ ಬೆಲೆ ಕೂಡ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ ಎಂದು ಎಲ್ಲೆಡೆ ಚರ್ಚೆಗಳು ನಡೆಯುತ್ತಿವೆ. ಇನ್ನು ಶ್ರೀರಾಮುಲು ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಕೂಡ ಅಲರ್ಟ್ ಆಗಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಕಾಂಗ್ರೆಸ್ ನಾಯಕರು ಕೂಡ ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದ ಬಗ್ಗೆ ನಿಗಾ ಇಟ್ಟಿದ್ದಾರೆ. ಹಲವು ನಾಯಕರು ಕೂಡ ಬಿಜೆಪಿಯಿಂದ ಕಾಂಗ್ರೆಸ್‌ಗೆ ಹಾರಲು ರೆಡಿಯಾಗಿದ್ದಾರೆ ಎಂದೂ ಹೇಳಲಾಗುತ್ತಿದೆ. ಇತ್ತೀಚೆಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಅವರು ತಮಗೆ ನೀಡಿರುವ ಪಕ್ಷದ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಇದರ ನಡುವೆಯೇ ಶ್ರೀರಾಮುಲು ಅವರು ಕೂಡ ನೇರವಾಗಿಯೇ ಪಕ್ಷ ಬಿಡುತ್ತೇನೆ ಎಂದು ಹೇಳಿ ಅಸಮಾಧಾನ ತೋರಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ನಾಯಕರು ಕೂಡ ಪಕ್ಷಕ್ಕೆ ಸ್ವಾಗತ ಎಂದೇ ಬಿಜೆಪಿ ನಾಯಕರಿಗೆ ಓಪನ್ ಆಫರ್ ಕೂಡ ನೀಡಿದ್ದರು. ಈಗಾಗಲೇ ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಅವರು ಬಹುತೇಕ ಕಾಂಗ್ರೆಸ್‌ಗೆ ಹೋಗುವ ಇಂಗಿತ ಹೊರಹಾಕಿದ್ದಾರೆ. ಇದೀಗ ಶ್ರೀರಾಮುಲು ಅವರು ಬಹಿರಂಗವಾಗಿಯೇ ಪಕ್ಷ ಬಿಡುವ ನಿರ್ಧಾರ ತಿಳಿಸಿರುವುದರಿಂದ ಕಾಂಗ್ರೆಸ್ ಗಾಳ ಹಾಕಿದೆ ಎಂದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಕಳೆದ ವಿಧಾನಸಭೆಯಲ್ಲಿ ಬಿಜೆಪಿಗೆ ಹೀನಾಯ ಸೋಲು ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಇತ್ತೀಚೆಗೆ ನಡೆದ ಉಪಚುನಾವಣೆಗಳಲ್ಲೂ ಮೂರಕ್ಕೆ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಮತ್ತೆ ಟಕ್ಕರ್ ಕೊಟ್ಟಿತ್ತು. ಇದೀಗ ಬಿಜೆಪಿ ನಾಯಕರ ಅಸಮಾಧಾನವನ್ನೇ ಅಸ್ತ್ರ ಮಾಡಿಕೊಂಡು ಹಲವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಪ್ಲ್ಯಾನ್ ಮಾಡಿದೆ ಎಂಬ ಗುಸುಗುಸು ಕೇಳಿಬರುತ್ತಿದೆ. ಇನ್ನು ಶ್ರೀರಾಮುಲು ಅವರು ಪಕ್ಷ ತೊರೆಯುವ ಬಗ್ಗೆ ಹೇಳಿಕೆ ನೀಡಿರುವ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಅಲರ್ಟ್ ಆಗಿದ್ದಾರೆ. ಅಲ್ಲದೆ ಸಿಎಂ ಸಿದ್ದರಾಮಯ್ಯ ಅವರು ಫೋನ್ ಕರೆ ಮೂಲಕ ಶ್ರೀರಾಮುಲು ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಈ ವಿಚಾರಕ್ಕೆ ರೆಕ್ಕೆಪುಕ್ಕ ಬಂದಿದೆ.

ಶ್ರೀರಾಮುಲು ಹೇಳಿದ್ದೇನು?: ನಿನ್ನೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಸದ ಶ್ರೀರಾಮುಲು ಅವರಿಗೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ತರಾಟೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಇದರಿಂದ ಬೇಸರಗೊಂಡಿದ್ದ ಶ್ರೀರಾಮುಲು ಅವರು ಇಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ, ಬೇಕಾದರೆ ನಾನು ಪಕ್ಷ ತೊರೆಯುತ್ತೇನೆ. ಆದರೆ ಅದಕ್ಕೂ ಮುನ್ನ ಪಕ್ಷದಲ್ಲಿ ಏನಾಗಿದೆ ಎಂದು ಹೈಕಮಾಂಡ್‌ಗೆ ತಿಳಿಸಿ ಹೋಗ್ತೀನಿ ಎಂದೂ ಸಭೆಯಲ್ಲೇ ಅವರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಅಲರ್ಟ್ ಆಗಿದೆ ಎಂದು ಚರ್ಚೆ ನಡೆಯುತ್ತಿದೆ.












Click it and Unblock the Notifications