ಶಿಕ್ಷಣ ಸಚಿವರನ್ನು ಮೊದಲು ಚೇಂಜ್ ಮಾಡಿ: ಸಿಎಂಗೆ ಸಲಹೆ ಕೊಟ್ಟಿದ್ದು ಯಾರು?
ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವ ಸ್ಥಾನದಲ್ಲಿರುವ ಮಧು ಬಂಗಾರಪ್ಪ ಅವರನ್ನು ಮೊದಲು ಬದಲಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ನಾಯಕ ಸಲಹೆ ಕೊಟ್ಟಿದ್ದಾರೆ. ಹೌದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಸಿಡಿದಿದ್ದಾರೆ.
ಎಸ್‌ಎಸ್‌ಎಲ್‌ಸಿ ಓದುವ ಮಕ್ಕಳಿಗೆ ಉತ್ತಮ ಗುಣಮಟ್ಟದ ತರಬೇತಿ ನೀಡಬೇಕೇ ಹೊರತು ನಪಾಸಾದರೆ ಮೂರು ಬಾರಿ ಅವಕಾಶ ಕೊಡುವುದರ ಮೂಲಕ ಅವರ ಸ್ಪರ್ಧಾತ್ಮಕತೆಯನ್ನು ಸರ್ಕಾರ ಕಡಿಮೆ ಮಾಡುತ್ತಿದೆ ಎಂದು ಶಿಕ್ಷಣ ಇಲಾಖೆಯ ನಿರ್ಧಾರವನ್ನು ಖಂಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಇರುವ ನ್ಯೂನತೆಗಳು, ಸಮಸ್ಯೆಗಳು, ಕೊರತೆಗಳನ್ನು ಶಿಕ್ಷಣ ಇಲಾಖೆ ಸರಿಪಡಿಸಬೇಕೇ ಹೊರತು ಮೂರು ಬಾರಿ ಪರೀಕ್ಷೆ ನಡೆಸುವುದರಿಂದ ಯಾವುದೇ ರೀತಿಯಾದ ಆಮೂಲಾಗ್ರ ಬದಲಾವಣೆ ತರಲು ಸಾಧ್ಯವಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಎಸ್‌ಎಸ್‌ಎಲ್‌ಸಿಯಲ್ಲಿ ಶೇ 20ರಷ್ಟು ಕೃಪಾಂಕ ನೀಡಿದರೂ ಫಲಿತಾಂಶ ಸುಧಾರಣೆ ಆಗುತ್ತಿಲ್ಲವೆಂದರೆ ಇನ್ನೆಷ್ಟರ ಮಟ್ಟಿಗೆ ಶಿಕ್ಷಣ ಇಲಾಖೆ ವೈಫಲ್ಯ ಕಂಡಿದೆ ಎಂಬುದನ್ನು ಅರಿಯಬಹುದು. ಮೊದಲು ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆ ಆಗಬೇಕಾಗಿದೆ ಎಂದು ಗುಡುಗಿದ್ದಾರೆ.

ಖುದ್ದು ಕನ್ನಡ ಓದಲು, ಬರೆಯಲು ಬಾರದ ಸಚಿವರನ್ನು ಈ ಇಲಾಖೆಯ ಸಾರಥಿಯನ್ನಾಗಿ ಮಾಡಿರುವುದರಿಂದಲೇ ಸಮಸ್ಯೆಗಳು ಪ್ರಾರಂಭವಾಗಿದೆ. ಕೂಡಲೇ, ಶಿಕ್ಷಣ ಇಲಾಖೆ ಸಚಿವರನ್ನು ಬದಲಿಸಿ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬಲ್ಲವರಿಗೆ ಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ಯತ್ನಾಳ್ ಸಲಹೆ ನೀಡಿದ್ದಾರೆ.
ಬೋರ್ಡ್ ಪರೀಕ್ಷೆ ಇರಲ್ಲ: ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ರಾಜ್ಯ ಪಠ್ಯಕ್ರಮದ ಎಲ್ಲಾ ಸರ್ಕಾರಿ, ಖಾಸಗಿ ಶಾಲೆಗಳ 5, 8 ಮತ್ತು 9ನೇ ತರಗತಿ ಮತ್ತು ಪಿಯು ಕಾಲೇಜುಗಳ 11ನೇ ತರಗತಿ ವಿದ್ಯಾರ್ಥಿಗಳಿಗೆ ಈ ಸಲ ಬೋರ್ಡ್ ಪರೀಕ್ಷೆ ಇರುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವುದನ್ನು ಖಾಸಗಿ ಶಾಲಾ ಸಂಘಟನೆಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಹಾಗಾಗಿ ಸುಪ್ರೀಂಕೋರ್ಟ್ ಕೂಡ ಬೋರ್ಡ್ ಪರೀಕ್ಷೆ ನಡೆಸದಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷದ ಫಲಿತಾಂಶ ಕೂಡ ತಡೆಹಿಡಿದಿದ್ದೇವೆ. ಬೋರ್ಡ್ ಪರೀಕ್ಷೆ ಆದೇಶ ಕೂಡ ವಾಪಸ್ ಪಡೆದಿದ್ದೇವೆ ಎಂದಿದ್ದಾರೆ.
ಅದರಂತೆ ಈ ವರ್ಷ ಕೂಡ ಬೋರ್ಡ್ ಪರೀಕ್ಷೆ ಇರೋದಿಲ್ಲ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮರಾ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸುಪ್ರೀಂಕೋರ್ಟ್‌ನ ಅಂತಿಮ ಆದೇಶಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.
ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಹೆಚ್ಚಿಸುವ ಉದ್ದೇಶದಿಂದ ಶಿಕ್ಷಣ ಕೋಪೈಲಟ್ ಆ್ಯಪ್ ರಚಿಸಲಾಗಿದ್ದು, ಶಿಕ್ಷಕರಿಗೆ ಅಗತ್ಯವಾಗಿರುವ ಪಠ್ಯಕ್ರಮ, ಭಾಷೆ, ಸಂದರ್ಭಕ್ಕೆ ಅನುಸಾರವಾಗಿ ಸಮಗ್ರ ಬೋಧನಾ ಸಂಪನ್ಮೂಲ, ಕಲಿಕಾ ಅನುಭವಗಳನ್ನು ಸೃಷ್ಟಿಸಲು ಈ ಆ್ಯಪ್ ಸಹಕಾರಿಯಾಗಲಿದೆ ಎಂದು ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.












Click it and Unblock the Notifications