ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಮೂವರು ಬಿಜೆಪಿ ನಾಯಕರು ದಿಢೀರ್ ದೆಹಲಿಗೆ : ಕಾರಣವೇನು?
ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷಕ್ಕೆ ಬಿಸಿ ತುಪ್ಪವಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮೂವರು ನಾಯಕರು ದಿಢೀರ್ ಎಂದು ದೆಹಲಿಗೆ ತೆರಳಿದ್ದಾರೆ. ಕೊಪ್ಪಳ ಸಂಸದ ಸಂಗಣ್ಣ ಕರಡಿ ಹಾಗೂ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಜೊತೆ ಯತ್ನಾಳ್ ಒಂದೇ ವಿಮಾದಲ್ಲಿ ಹುಬ್ಬಳ್ಳಿಯಿಂದ ದೆಹಲಿಗೆ ಹಾರಿದ್ದಾರೆ.
ಕರ್ನಾಟಕ ರಾಜ್ಯ ಬಿಜೆಪಿಗೆ ಯತ್ನಾಳ್ ಮಗ್ಗುಲ ಮುಳ್ಳಾಗಿದ್ದಾರೆ. ತಮ್ಮದೇ ಪಕ್ಷದ ಹಿರಿಯ, ಕಿರಿಯ ನಾಯಕರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡುವ ಮೂಲಕ ಪಕ್ಷಕ್ಕೆ ಮುಜುಗರ ತಂದಿದ್ದಾರೆ. ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಸ್ಥಾನ ತಪ್ಪಿದ್ದ ಬಳಿಕ ಯತ್ನಾಳ ಕೆಂಡಾಮಂಡಲವಾಗಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದಲ್ಲದೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹಿರಿಯ ನಾಯಕರ ಸೋಲಿಗೆ ವಿಜಯೇಂದ್ರ ಸಂಚು ರೂಪಿಸಿದ್ದರು ಎನ್ನುವ ಆರೋಪ ಕೂಡ ಮಾಡಿದ್ದರು. ಆರ್. ಅಶೋಕ ವಿಪಕ್ಷ ನಾಯಕಾರಿದ್ದರೂ, ಯತ್ನಾಳ್ ಮಾತ್ರ ನಾನೇ ನಿಜವಾದ ವಿಪಕ್ಷ ನಾಯಕ ಎಂದು ಹೇಳಿದ್ದರು.
ಯತ್ನಾಳ್‌ಗೆ ಹೈಕಮಾಂಡ್ ಎಚ್ಚರಿಕೆ?
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಕಾರಣ ಯತ್ನಾಳ್ ಇದೇ ರೀತಿ ಹೇಳಿಕೆ ನೀಡುತ್ತಿದ್ದರೆ, ಬಿಜೆಪಿಗೆ ದೊಡ್ಡ ಹೊಡೆತ ಬೀಳುತ್ತದೆ ಎನ್ನುವದನ್ನು ಅರಿತ ಬಿಜೆಪಿ ಹೈಕಮಾಂಡ್ ಯತ್ನಾಳ್‌ರನ್ನು ದೆಹಲಿಗೆ ಕರೆಸಿಕೊಂಡಿದ್ದು, ಇನ್ನು ಮುಂದೆ ಬಹಿರಂಗವಾಗಿ ಮಾತನಾಡಬಾರದು ಎಂಬ ತಾಕೀತು ಮಾಡುವುದು ಯಾವುದೇ ಕಾರಣಕ್ಕೂ ಪಕ್ಷದ ಆಂತರಿಕ ವಿಚಾರ ಬಹಿರಂಗವಾಗಿ ಮಾತನಾಡಿರುವ ವಿಚಾರವನ್ನ ಚರ್ಚೆ ಮಾಡಬಾರದು ಎಂಬ ತಾಕೀತು ಮಾಡುವ ಸಾಧ್ಯತೆ ಇದೆ.
ರಾಷ್ಟ್ರ ರಾಜಕಾರಣಕ್ಕೆ ಯತ್ನಾಳ್?
ಇನ್ನು ರಾಜ್ಯದಲ್ಲಿ ಸರಿಯಾದ ಸ್ಥಾನ ಮಾನ ಸಿಗದ ಕಾರಣ ಬಂಡಾಯ ಎದ್ದಿರುವ ಯತ್ನಾಳ್ ಅವರಿಗೆ ರಾಷ್ಟ್ರ ರಾಜಕಾರಣಕ್ಕೆ ಆಹ್ವಾನ ಸಿಗಲಿದೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯತ್ನಾಳ್ ಅವರಿಗೆ ಟಿಕೆಟ್ ನೀಡುವ ಮೂಲಕ ಅವರ ಕೋಪವನ್ನು ತಣ್ಣಗಾಗಿಸಲು ಹೈಕಮಾಂಡ್ ಯೋಜಿಸಿದೆ ಎನ್ನುವ ಮಾತುಗಳು ಕೂಡ ರಾಜಕೀಯ ವಲಯದಲ್ಲಿ ಕೇಳಿಬಂದಿವೆ.
ಟಿಕೆಟ್‌ಗಾಗಿ ಉಳಿದ ಇಬ್ಬರ ಪ್ರಯತ್ನ
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹಲವು ಹಿರಿಯ ನಾಯಕರಿಗೆ ಟಿಕೆಟ್ ಕೊಡದಿರಲು ಬಿಜೆಪಿ ನಿರ್ಧರಿಸಿದೆ ಎನ್ನುವ ಸುದ್ದಿಯ ನಡುವೆ, ಟಿಕೆಟ್ ತಪ್ಪುವ ಭೀತಿಯಲ್ಲಿರುವ ಸಂಗಣ್ಣ ಕರಡಿ, ಅನಂತಕುಮಾರ ಹೆಗಡೆ ದೆಹಲಿಗೆ ಪ್ರಯಾಣ ಮಾಡಿದ್ದಾರೆ ಎನ್ನಲಾಗಿದೆ.
ಸೋಮವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಗೃಹ ಸಚಿವ ಅಮಿತಾ ಶಾ ಭೇಟಿಯಾಗಲಿರುವ ನಾಯಕರು ರಾಜ್ಯದ ಭಾರತೀಯ ಜನತಾ ಪಕ್ಷದ ವಿದ್ಯಮಾನಗಳ ಬಗ್ಗೆ ಸಹ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.












Click it and Unblock the Notifications