Bigg Boss Hanumantha: ಶಿಗ್ಗಾವಿ ಉಪ ಚುನಾವಣೆಯಲ್ಲಿ ಮತದಾನ ಮಾಡದ ಚುನಾವಣೆ ರಾಯಭಾರಿ ಹನುಮಂತ!
ಬೆಂಗಳೂರು, ನವೆಂಬರ್ 13: ಕನ್ನಡದ ಬಿಗ್ ಬಾಸ್ ಸೀಸನ್ 11ರ ಸ್ಫರ್ಧಿಯಾಗಿರುವ ಹನುಮಂತ ಲಮಾಣಿ (Bigg Boss Hanumantu Lamani) ಯಾರಿಗೇತಾನೆ ಗೊತ್ತಿಲ್ಲ ಹೇಳಿ. ಕಳೆದ ಸಾಲಿನ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಚುನಾವಣೆ ರಾಯಭಾರಿ ಆಗಿದ್ದರು. ಉಪ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಮತದಾನ ಮಾಡದೇ ಗೈರಾಗಿದ್ದಾರೆ. ಯಾಕೆ ಹೀಗೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಕುರಿಗಾಹಿ, ಗಾಯಕ ಹನುಮಂತ ಲಮಾಣಿ ಅವರು 'ಸ.ರಿ.ಗ.ಮ.ಪ.ಸೀಸನ್ 15'ರ ಆವೃತ್ತಿಯಲ್ಲಿ ಹಾಡಿ ಜನಮನ ಸೆಳೆದವರಲ್ಲಿ ಪ್ರಮುಖರು. ಇವರು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಚಿಲ್ಲೂರ್‌ಬಡ್ನಿ ತಾಂಡಾದ ನಿವಾಸಿ. ಅವರು ಇತ್ತೀಚೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಕನ್ನಡ ಬಿಗ್ ಬಾಸ್ ಸ್ಪರ್ಧಿಯಾಗಿದ್ದಾರೆ. ನೇರ ನುಡಿ, ಮುಗ್ಧ ಮಾತುಗಳು, ಹಾಡಿನಿಂದಲೇ ಅಲ್ಲಿ ಸಹ ಹವಾ ಎಬ್ಬಿಸಿದ್ದಾರೆ.

ಸದ್ಯ ನಡೆಯುತ್ತಿರುವ ಶಿಗ್ಗಾವಿ ಉಪ ಚುನಾವಣೆ 2024ರಲ್ಲಿ ಅವರು ಭಾಗವಹಿಸಿಲ್ಲ. ಚುನಾವಣೆ ರಾಯಭಾರಿಯಾಗಿ ಕಳೆದ ಬಾರಿ ಮತದಾನ ಮಹತ್ವ ಸಾರಿದ್ದ, ಎಲ್ಲರೂ ಮತದಾನ ಮಾಡಬೇಕು ಎಂದು ಜಾಗೃತಿ ಮೂಡಿಸಿದ್ದರು. ಆದರೆ ಈ ಬಾರಿ ಅವರು ಬಿಗ್ ಬಾಸ್ ಮನೆಯಲ್ಲಿ ಇರುವ ಕಾರಣ ಮತದಾನ ಮಾಡಲು ಶಿಗ್ಗಾವಿಗೆ ಬರಲಾಗಿಲ್ಲ.
ಹನುಮಂತ ಲಮಾಣಿ ಅವರ ಮತದಾನ ಹಕ್ಕು ಶಿಗ್ಗಾವಿ ತಾಲೂಕಿನ ಚಿಲ್ಲೂರ್ ಬಡ್ನಿ ತಾಂಡಾದ ಸರ್ಕಾರಿ ಶಾಲೆಯ ಮತಗಟ್ಟೆ 117ರಲ್ಲಿದೆ. ಮಗ ಬಾರದಿದ್ದರೇನಂತೆ ನಾವು ಕ್ಷೇತ್ರದಲ್ಲಿಯೇ ಇದ್ದೇವೆ ಎಂದ ಹನುಮಂತನ ತಂದೆ ಮೇಘಪ್ಪ ಹಾಗೂ ತಾಯಿ ಶೀಲವ್ವ ಅವರು ಮತದಾನ ಮಾಡಿದ್ದಾರೆ.
'ಮಗ ಬಿಗ್ ಬಾಸ್ ಮನೆಲ್ಲಿದ್ದಾನ. ಹೀಗಾಗಿ ಅವಂಗ ಬರಾಕ ಆಗಿಲ್ಲ. ನಮಗೂ ಸಂಪರ್ಕಕ್ಕೂ ಸಿಕ್ಕಿಲ್ಲ. ನಾವ್ ಅಷ್ಟ ಬಂದು ಮತದಾನ ಮಾಡೇವಿ' ಎಂದು ಹನುಮಂತ ಅವರ ತಂದೆ ಮೇಘಪ್ಪ ಲಮಾಣಿ ಅವರು ಮಾತನಾಡಿದ್ದಾರೆ.
ಮತ್ತೊಂದೆಡೆ ಹನುಮಂತನ ಅನುಪಸ್ಥಿತಿ ಕಾಡುತ್ತಿರುವ ಊರಿನವರು, ಹನುಮಂತನ ಸ್ನೇಹಿತರ ಕಳೆದ ಬಾರಿ ಚುನಾವಣೆ ಜಾಗೃತಿ ಮೂಡಿಸಿದ್ದ. ಈ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದಾನೆ. ಚುನಾವಣಾಧಿಕಾರಿಗಳು ಉಪ ಚುನಾವಣೆ ಸಂಬಂಧ ಹನುಮಂತನನ್ನು ಕರೆಯಿಸಿ ಮತದಾನ ಮಾಡಿಸಿ, ಮತದಾನ ಮಹತ್ವ ಸಾರಬೇಕಿತ್ತು ಎಂದು ಆಗ್ರಹಿಸಿದ್ದಾರೆ.
ಕುರಿ ಕಾಯುತ್ತಿದ್ದ ಹಳಿಯ ಪ್ರತಿಭೆ ಹನುಮಂತ ಅವರ ಇಂದು ಸರಿಗಮಪ, ಬಿಗ್ ರಿಯಾಲಿಟಿ ಶೋ ದಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಡು ಹಾಡುವುದರಲ್ಲಿ ಅಪಾರ ಆಸಕ್ತಿ ಹೊಂದಿರುವ ಹನುಮಂತ ಇದೀಗ ರಿಯಾಲಿಟಿ ಶೋಗಳಲ್ಲಿ ನಟಿಸುತ್ತಿದ್ದಾರೆ. ಅವರ ಈ ಸಾಧನೆ ಗ್ರಾಮಸ್ಥರಿಗೆ, ಕುಟುಂಬಸ್ಥರಿಗೆ ಹೆಮ್ಮ ತಂದಿದೆ.












Click it and Unblock the Notifications