Bengaluru Rain: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವರುಣಾರ್ಭಟ, ಇನ್ನು ಶುರುವಾಯ್ತು ಪೀಕಲಾಟ
ಬೆಂಗಳೂರು, ಮೇ, 30: ಈಗಾಗಲೇ ರಾಜ್ಯದ ಹಲವೆಡೆ ವರುಣನ ಆರ್ಭಟ ಮುಂದುವರೆದಿದೆ. ಅದೇ ರೀತಿ ಇದೀಗ ರಾಜ್ಯ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರಿನ ಶಾಂತಿನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಆಂರಭವಾಗಿದೆ. ಇನ್ನು ನಗರದಲ್ಲಿ ಸಂಜೆ ಮತ್ತಷ್ಟು ಮಳೆಯ ಪ್ರಮಾಣ ಹೆಚ್ಚಿರಲಿದೆ ಅಂತಲೂ ಹವಾಮಾನ ಇಲಾಖೆ ಈಗಾಗಲೇ ಮಾಹಿತಿ ನೀಡಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಬೆಳಗ್ಗೆಯಿಂದ ಸಂಜೆವರೆಗೆ ಬರೀ ಮೋಡ ಕವಿದ ವಾತಾವರಣ ಮುಂದಿವರೆಯುತಿದ್ದು, ರಾತ್ರಿ ಆಗುತ್ತಿದ್ದಂತೆ ಜಿನುಗು ಮಳೆ ಪ್ರಾರಂಭ ಆಗುತ್ತಿತ್ತು. ಆದರೆ ಇಂದು ನಗರದಲ್ಲಿ ಮುಂಜಾನೆಯಿಂದಲೂ ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಧ್ಯಾಹ್ನದ ವೇಳೆಗೆ ಮಳೆರಾಯ ಆರ್ಭಟಿಸಿದ್ದಾನೆ. ಕೆಲವು ಕಡೆ ರಸ್ತೆಗಳು ಕರೆಯಂತಾಗಿ ವಾಹನ ಸವಾರರು ಪರದಾಡಿದ ಘಟನೆಯೂ ನಡೆಯಿತು.

ಇನ್ನು ಸಂಜೆ ವೇಳೆಗೆ ಬೆಂಗಳೂರಿನಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯೆತೆ ಇದೆ ಅಂತಲೂ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಬೆಂಗಳೂರಿನ ಹಲವೆಡೆ ಮಳೆ
ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಗುಡುಗು ಸಹಿತ ಭಾರೀ ಮಳೆ ಜನ ಸಾಮಾನ್ಯರು ಮತ್ತು ವಾಹನ ಸವಾರರು ಪರದಾಡುವಂತೆ ಮಾಡಿದೆ. ಮೆಜೆಸ್ಟಿಕ್, ಕೋರಮಂಗಲ, ಶೇಶಾದ್ರಿಪುರಂ, ಯಶವಂತಪುರ, ಹೆಬ್ಬಾಳ, ಆರ್.ಟಿ.ನಗರ, ಎಂಜಿ ರಸ್ತೆ, ಶಿವಾಜಿನಗರ, ಕೆ.ಆರ್. ಸರ್ಕಲ್, ವಿಧಾನಸೌಧ, ಕೆ.ಆರ್. ಮಾರುಕಟ್ಟೆ, ಶಾಂತಿನಗರ ಸೇರಿದಂತೆ ನಗರದ ಹಲವೆಡೆ ಮಳೆರಾಯ ಆರ್ಭಟ ಶುರು ಮಾಡಿದ್ದಾನೆ.
ಇನ್ನೇನು ಮುಂಗಾರು ಆರಂಭಕ್ಕೆ ದಿನಗಣನೆ ಆರಂವಾಗಿದೆ. ಇದಕ್ಕೂ ಮುನ್ನವೇ ಮುಂಗಾರು ಪೂರ್ವ ಮಳೆ ಆರ್ಭಟ ಶರು ಮಾಡಿದೆ. ಇಂದು ಮತ್ತು ನಾಳೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಸಂಜೆ ಇಲ್ಲ ಅಂದರೆ ರಾತ್ರಿ ವೇಳೆ ಗುಡುಗು ಸಹಿತ ಭಾರೀ ಮಳೆ ಬೀಳುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿತ್ತು. ನಗರದಲ್ಲಿ ಗಾಳಿಯ ವೇಗವು ಗಂಟೆಗೆ 40 - 50 ಕಿ.ಮೀ. ಇರುವ ಸಾಧ್ಯತೆ ಇರಲಿದೆ ಅಂತಲೂ ತಿಳಿಸಿತ್ತು
ಕಳೆದ ಕೆಲವು ದಿನಗಳಿಂದ ಸುರಿದ ಮಳೆ ರಾಜ್ಯ ರಾಜಧಾನಿ ಸೇರಿದಂತೆ ಹಲವೆಡೆ ಭಾರಿ ಅವಾಂತರವನ್ನು ಸೃಷ್ಟಿ ಮಾಡಿತ್ತು. ಬೆಂಗಳೂರಿನಲ್ಲಿ ಕೆಲವೆಡೆ ಬೃಹತ್ ಮರಗಳು ಧರೆಗುರುಳಿದರೆ, ಮತ್ತೊಂದೆಡೆ ರಸ್ತೆಗಳೆಲ್ಲ ಕೆರೆಯಂತಾಗಿ ವಾಹನ ಸವಾರರು ಪರದಾಡುವಂತೆ ಆಗಿತ್ತು. ಇನ್ನು ಕೆಲವು ಜಿಲ್ಲೆಗಳಲ್ಲಿ ಪೂರ್ವ ಮುಂಗಾರು ಮಳೆಯಿಂದ ಸಾಕಷ್ಟು ಹಾನಿಯಾಗಿರುವ ಬಗ್ಗೆಯೂ ಈಗಾಗಲೇ ವರದಿಯಾಗಿದೆ.
ಅದರಲ್ಲೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಾಮರಾಜನಗರ, ಕೋಲಾರ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗಿನಲ್ಲಿ ಭಾರೀ ಮಳೆ ಬೀಳುವ ಮುನ್ಸೂಚನೆ ನೀಡಿದ್ದು, ಈ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಸಹ ಘೋಷಣೆ ಮಾಡಲಾಗಿದೆ.












Click it and Unblock the Notifications