ಗುಲ್ಬರ್ಗ : ಆಟೋ ಚಾಲಕರಿಂದ ಅತ್ಯಾಚಾರಕ್ಕೆ ಯತ್ನ
ಗುಲ್ಬರ್ಗ, ಜು. 16 : ಮುಂಬೈನಿಂದ ಬಂದಿದ್ದ ಮಹಿಳೆ ಮೇಲೆ ಇಬ್ಬರು ಆಟೋ ಚಾಲಕರು ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಗುಲ್ಬರ್ಗದಲ್ಲಿ ನಡೆದಿದೆ. ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಚಾಲಕರು 50 ಸಾವಿರ ಹಣ, ಒಡವೆ ದೋಚಿ ಪರಾರಿಯಾಗಿದ್ದಾರೆ.
ಮಂಗಳವಾರ ಸಂಜೆ ಮುಂಬೈನಿಂದ ಗುಲ್ಬರ್ಗಕ್ಕೆ ಮಹಿಳೆ ರೈಲಿನಲ್ಲಿ ಆಗಮಿಸಿದ್ದರು. ನಂತರ ಗಂಜ್ ಪ್ರದೇಶಕ್ಕೆ ತೆರಳಲು ಆಟೋ ಏರಿದ್ದರು. ಆದರೆ, ಆಟೋ ಚಾಲಕ ನಿಗದಿತ ಸ್ಥಳಕ್ಕೆ ಮಹಿಳೆಯನ್ನು ಕರೆದೊಯ್ಯದೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮತ್ತೊಬ್ಬನ ಜೊತೆ ಸೇರಿ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ.

ಪ್ರತಿರೋಧ ತೋರಿದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಇಬ್ಬರು, ಮಹಿಳೆ ಬಳಿ ಇದ್ದ 50 ಸಾವಿರ ರೂ. ಹಣ ಮತ್ತು ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಮಹಿಳೆಯನ್ನು ಗಮನಿಸಿದ ಸ್ಥಳೀಯರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. [ಬೆಂಗಳೂರು : ಅತ್ಯಾಚಾರಕ್ಕೊಳಗಾದ ಯುವತಿ ದೂರಿನಲ್ಲೇನಿದೆ?]
ಮಹಿಳೆಯ ತಲೆ, ಭುಜದ ಭಾಗದಲ್ಲಿ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಯಿಂದಾಗಿ ರಕ್ತ ಸೋರಿಕೆಯಾಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎಂದು ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಆಟೋ ಚಾಲಕರಿಗಾಗಿ ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ. ಮಹಿಳೆ ಚೇತರಿಸಿಕೊಂಡ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ.












Click it and Unblock the Notifications