'ಯತ್ನಾಳ್‌ಗೆ ಏಪ್ರಿಲ್ 15ನೇ ತಾರೀಕು ಫೈನಲ್ ಡೇ' - ಯತ್ನಾಳ್ ಕೊಲೆ ಸಂಚು ಆಡಿಯೋ ವೈರಲ್
ವಿಜಯಪುರ ಏಪ್ರಿಲ್ 11: ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೇಲೆ ಕೊಲೆ ಸಂಚು ರೂಪಿಸಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಪ್ರವಾದಿ ಮಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಬೆನ್ನಲ್ಲೆ ಈ ಆಡಿಯೋ ವೈರಲ್ ಆಗಿದೆ. 'ಏಪ್ರಿಲ್ 15ನೇ ತಾರೀಕು ಯತ್ನಾಳ್‌ಗೆ ಫೈನಲ್ ಡೇ' ಎಂದು ಆಡಿಯೋದಲ್ಲಿ ಹೇಳಲಾಗಿದ್ದು ವಿಜಯಪುರದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ.
ಆಡಿಯೋದಲ್ಲಿ 'ಈ ಬಾರಿ ಯತ್ನಾಳ್‌ಗೆ ಫೈನಲ್ ಡೇ. ಅರೆಸ್ಟ್ ಆಗಬೇಕು ಇಲ್ಲ ತಲೆ ಕತ್ತರಿಸಬೇಕು. ಏಪ್ರಿಲ್ 15ನೇ ತಾರೀಕು ಯತ್ನಾಳ್‌ಗೆ ಫೈನಲ್ ಡೇ. ಅಂದು ಯತ್ನಾಳ್ ನೇರವಾಗಿ ಜನ್ನತ್‌ಗೆ ಹೋಗುತ್ತಾನೆ. ಯತ್ನಾಳ್ ದಿ ಎಂಡ್' ಎನ್ನುವ ಯುವಕನೋರ್ವನ ಆಡಿಯೋ ವೈರಲ್ ಆಗಿದೆ. ವಿಜಯಪುರದಲ್ಲಿ ಈ ಆಡಿಯೋ ಸಂಚಲವನ್ನು ಸೃಷ್ಟಿ ಮಾಡಿದೆ. ಹಾಗಾದರೆ ವೈರಲ್ ಆಡಿಯೋದಲ್ಲಿ ಏನಿದೆ?

'ವಿಜಯಪುರದ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇರುವ ಆಲಂಗೀರ್ ಹಾಲ್‌ನಲ್ಲಿ ಮುಸ್ಲೀಂ ಮುಖಂಡರು ಸಭೆ ಮಾಡಲಾಗಿತ್ತು. ಇಲ್ಲಿ ಎಂಎಂಸಿ ಸದಸ್ಯರು ಸೇರಿದಂತೆ ಅನೇಕ ಮುಸ್ಲಿಂ ಮುಖಂಡರು, ದಿಗ್ಗಜ ಮುಸ್ಲಿಂ ಮುಖಂಡರು ಸೇರಿದ್ದರು. ಈ ಸಭೆಯಲ್ಲಿ ಇದೇ 15ನೇ ತಾರೀಕು ಬೃಹತ್ ಆದ ಹೋರಾಟವನ್ನು ಅಂಬೇಡ್ಕರ್ ವೃತ್ತದಲ್ಲಿ ನಡೆಸಲು ನಿರ್ಧಾರ ಮಾಡಲಾಗಿದೆ. ಅಂಬೇಡ್ಕರ್ ವೃತ್ತದಲ್ಲಿ ಎಲ್ಲರೂ ಕೂಡ ಬೆಳಗ್ಗೆ 10 ಗಂಟೆ ಸುಮಾರಿಗೆ ಸೇರಬೇಕು. ಅದರ ಜೊತೆಗೆ ಯತ್ನಾಳ್ ಅರೆಸ್ಟ್ ಆಗಬೇಕು. ಇಲ್ಲವಾದಲ್ಲಿ ಯತ್ನಾಳ್ ಮನೆಗೆ ಮುತ್ತಿಗೆ ಹಾಕೋಣ. ಇದಕ್ಕಾಗಿ ನಿಮ್ಮ ಎಲ್ಲಾ ಸಹೋದರ ಸಹೋದರಿಯರು ಸೇರಿದಂತೆ ನಿಮ್ಮ ಅಕ್ಕಪಕ್ಕದ ಊರುಗಳಲ್ಲಿ ಇರುವ ಸಹೋದರ ಸಹೋದರಿಯನ್ನ ಕರೆದುಕೊಂಡು ಸೇರಬೇಕು' ಎಂದು ಆಡಿಯೋದಲ್ಲಿ ಹೇಳಲಾಗಿದೆ.
ಅಲ್ಲದೇ ಇದೇ ಆಡಿಯೋದಲ್ಲಿ 'ಈ ಬಾರಿ ಯತ್ನಾಳ್‌ಗೆ ಫೈನಲ್ ಡೇ. ಅರೆಸ್ಟ್ ಆಗಬೇಕು ಇಲ್ಲ ತಲೆ ಕತ್ತರಿಸಬೇಕು. ಸರ್ ತನ್ ಸೇ ಜುದಾ.. ತಲೆ ತೆಗೀಬೇಕು. ಏಪ್ರಿಲ್ 15ನೇ ತಾರೀಕು ಯತ್ನಾಳ್‌ಗೆ ಫೈನಲ್ ಡೇ. ಅಂದು ಯತ್ನಾಳ್ ನೇರವಾಗಿ ಜನ್ನತ್‌ಗೆ ಹೋಗುತ್ತಾನೆ. ಯತ್ನಾಳ್ ದಿ ಎಂಡ್' ಎಂದು ಹೇಳಲಾಗಿದೆ.

ಆಡಿಯೋದಲ್ಲಿ ಹೇಳಿದಂತೆ ಆಲಂಗೀರ್ ಹಾಲ್‌ನಲ್ಲಿ ಮುಸ್ಲೀಂ ಮುಖಂಡರು ಸಭೆಯಲ್ಲಿ ಯತ್ನಾಳ್ ಹತ್ಯೆಯ ಪ್ಲಾನ್ ಆಗಿದಿಯಾ ಅನ್ನೋ ನಿಖರತೆ ಇಲ್ಲ.
ಏಪ್ರಿಲ್ 7 ರಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಯತ್ನಾಳ್ ಅವರು, ''ಪ್ರವಾದಿ ಮುಹಮ್ಮದ್ ಬಾಳಾ ಸಾಹೇಬ್ ಠಾಕ್ರೆ ಅವರ ಮನೆಯಲ್ಲಿ ಜನಿಸಿದರು" ಎಂದು ಆಧಾರರಹಿತ ಮತ್ತು ಆಕ್ಷೇಪಾರ್ಹ ಹೇಳಿಕೆ ನೀಡಿ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಆಘಾತ ಉಂಟು ಮಾಡಿದ್ದರು. ಇದರಿಂದಾಗಿ ಮುಸ್ಲೀಂ ಸಮುದಾಯ ಯತ್ನಾಳ್ ವಿರುದ್ಧ ಹೋರಾಟಕ್ಕೆ ಸಜ್ಜಾಗಿದೆ.
ಪ್ರವಾದಿ ವಿರುದ್ಧ ಮಾತನಾಡಿದ್ದಕ್ಕೆ ಯತ್ನಾಳ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹುಬ್ಬಳ್ಳಿಯಲ್ಲಿ ಮಾಡಿದ್ದಾರೆ ಎನ್ನಲಾದ ವಿವಾದಾತ್ಮಕ ಭಾಷಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಹನ್ನಾನ್ ಎಂಬುವರು ವಿಜಯಪುರ ನಗರದ ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆದರೆ ಈ ರೀತಿಯ ಆಡಿಯೋ ಸಂಭಾಷಣೆ ವಿಜಯಪುರದಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಇದರಿಂದಾಗಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುತ್ತಾ ಅಥವಾ ಯಾವ ರೀತಿ ಈ ಸಂದರ್ಭವನ್ನು ನಿಭಾಯಿಸುತ್ತದೆ ಎಂದು ಕಾದು ನೋಡಬೇಕಿದೆ.













Click it and Unblock the Notifications