ಮೂಢನಂಬಿಕೆ ವಿರೋಧಿ ಸಿಎಂ ಸಿದ್ದು ನಿನ್ನೆ ಮಾಡಿದ್ದೇನು?

ನಿನ್ನೆ ಚಿಕ್ಕಬಳ್ಳಾಪುರದಲ್ಲಿ ಚಿಕ್ಕಬಳ್ಳಾಪುರ-ಕೋಲಾರ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಾಡಿನ ಮುಖ್ಯಮಂತ್ರಿ ಮೂಢನಂಬಿಕೆ ವಿರುದ್ಧ ಹೈಸ್ಪೀಡಿನಲ್ಲಿದ್ದಾರೆ. ಜತೆಗೆ ಅವರಿಗೆ ಕಂದಾಚಾರಗಳು ಆಗಿಬರುವುದಿಲ್ಲ ಎಂಬುದನ್ನು ತಿಳಿದುಕೊಂಡ ರೈಲ್ವೆ ಅಧಿಕಾರಿಗಳು ಕಾರ್ಯಕ್ರಮವನ್ನು ರಾಹುಕಾಲದಲ್ಲಿಯೇ ನಿಗದಿಪಡಿಸಿ ಯಾವುದೋ ಕಾಲವಾಗಿತ್ತು.
ಆದರೆ ಕೊನೆ ಘಳಿಗೆಯಲ್ಲಿ ಎಚ್ಚೆತ್ತ ಸಿಎಂ ಸಿಬ್ಬಂದಿ ರಾಹುಕಾಲದಲ್ಲಿ ಉದ್ಘಾಟನೆ ಸಮಾರಂಭ ಬೇಡವೇ ಬೇಡ. ತಡವಾದರೂ ಪರವಾಗಿಲ್ಲ ಎಂದು ಸಿದ್ದರಾಮಯ್ಯ ಅವರನ್ನು 90 ನಿಮಿಷ ಕಾಲ ಕಾಯುವಂತೆ ಮಾಡಿ, ರಾಹುಕಾಲ ಮುಗಿದ ನಂತರ ಕಾರ್ಯಕ್ರಮ ಶುರು ಹಚ್ಚಿಕೊಂಡರು. ಗಮನಾರ್ಹವೆಂದರೆ ಸಿಎಂ ಸಿದ್ದು ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ತನ್ಮೂಲಕ ತಾವೂ ಮೂಢನಂಬಿಕೆಗೆ ಆತೀತರಲ್ಲ ಎಂಬುದನ್ನು ಸಾರಿ ಹೇಳಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ನಂದಿ ರಂಗಮಂದಿರದಲ್ಲಿ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಮಧ್ಯಾಹ್ನ 12 ಗಂಟೆ ಆದ ನಂತರ ರೈಲಿಗೆ ಹಸಿರು ನಿಶಾನೆ ತೋರಿಸಲಾಯಿತು.
ಕಾರ್ಯಕ್ರಮದದಲ್ಲಿ ಪಾಲ್ಗೊಂಡಿದ್ದ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವರಾದ ಕೆಎಚ್ ಮುನಿಯಪ್ಪ, ವೀರಪ್ಪ ಮೊಯ್ಲಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆಯ ಉಪಸಭಾಪತಿ ಎನ್ ಎಚ್ ಶಿವಶಂಕರ ರೆಡ್ಡಿ, ಸ್ಥಳೀಯ ಶಾಸಕರು ಸೇರಿದಂತೆ ಹಲವಾರು ಗಣ್ಯರು ಈ ಪ್ರಹಸನಕ್ಕೆ ಸಾಕ್ಷಿಯಾದರು.
ಆನಂತರ ನಡೆದಿದ್ದು ಇನ್ನೂ ದೊಡ್ಡ ನಾಟಕ!:
ರಾಹುಕಾಲ ಮುಗಿಯುತ್ತಿದ್ದಂತೆ ರೈಲಿಗೆ ಚಾಲನೆ ನೀಡಿ, ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದರು. ಅರ್ಧ ಗಂಟೆಯೂ ಕಳೆದಿತ್ತು. ಆದರೆ 12.33ಕ್ಕೆ ಸರಿಯಾಗಿ ಇದ್ದಕ್ಕಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣ ನಿಲ್ಲಿಸಿ, ಅತ್ತ-ಇತ್ತ ನೋಡುತ್ತಾ ಹಾಗೇ ನಿಂತುಬಿಟ್ಟರು.
ಏನಪ್ಪಾ ಮತ್ತೆ ಯಾವ ಕಾಲ ಎದುರಾಯಿತು. ಏನು ವಿಘ್ನ ಕಾದಿದೆಯೋ ಎಂದು ಜನ ಗುಸುಗುಸು ಮಾತನಾಡಿಕೊಳ್ಳತೊಡಗಿದರು. ಆದರೆ ಮೌಢ್ಯಮೀರಿ ನಿಂತಿರುವ ಸಿಎಂ ಸಿದ್ದು ಹಾಗೆ ಸಭಿಕರ ಎದುರು ತುಟಿಕಿಟಿಕ್ಕೆನ್ನದೆ ನಿಲ್ಲುವುದಕ್ಕೂ ಒಂದು ಕಾರಣವಿತ್ತು.
ಏನಪ್ಪಾ ಅಂದರೆ ಕಾರ್ಯಕ್ರಮ ನಡೆಯುತ್ತಿದ್ದ ರಂಗಮಂದಿರದ ಪಕ್ಕದಲ್ಲಿಯೇ ಮಸೀದಿ ಇದೆ. ನಿನ್ನೆ ಹೇಳಿಕೇಳಿ ಶುಕ್ರವಾರ ಬೇರೆ. ಮಧ್ಯಾಹ್ನ 12.33ಕ್ಕೆ ವಿಶೇಷ ಆಜಾನ್ ನಡೆಯುವ ಕಾಲ. ಹಾಗಾಗಿ ಮುಸ್ಲಿಂ ಬಾಂಧವರ ವಿಶೇಷ ಪ್ರಾರ್ಥನೆ ಸಿಎಂ ಸಿದ್ದರಾಮಯ್ಯ ಅವರ ಕಿವಿಗೆ ಬೀಳುತ್ತಿದ್ದಂತೆ ಸಾಹೇಬರು ತಟಸ್ಥಾಗಿಬಿಟ್ಟರು.
ಸ್ಥಳದಲ್ಲಿಯೇ ಇದ್ದ ದಢೂತಿ ದೇಹದ ಪೊಲೀಸಪ್ಪನನ್ನು (ಎಸ್ಪಿ ಶಿವಪ್ರಸಾದ್) ಕಣ್ಣಲ್ಲೇ ಮಾತನಾಡಿಸಿದರು. 'ಅಲ್ಲಾಗೆ ಪ್ರಾರ್ಥಿಸುವಾಗ ಭಾಷಣ ಮಾಡಿ ತೊಂದರೆಯನ್ನುಂಟು ಮಾಡುವುದು ಬೇಡ' ಎಂದು ಭಾವಿಸಿ ಸುಮ್ಮನಾದ ಸಿಎಂ ಸಿದ್ದು ನಂತರ ತಮ್ಮ ಭಾಷಣವನ್ನು ಮುಂದುವರಿಸಿದರು ಅನ್ನಿ. ಆದರೆ ಆ ವೇಳೆಗೆ ಸಿದ್ದರಾಮಯ್ಯನವರ ಮೌಢ್ಯತೆ ಜಗಜ್ಜಾಹೀರಾಗಿ ಹರಾಜು ಆಗಿತ್ತು.












Click it and Unblock the Notifications