ಕಾಂಗ್ರೆಸ್‌ಗೆ ಮತ್ತೊಂದು ಶಾಕ್: ಬಿ.ನಾಗೇಂದ್ರ ಮಾಸ್ಟರ್ ಮೈಂಡ್, "20 ಕೋಟಿ ಲೋಕ ಚುನಾವಣೆಗೆ!
Maharshi Valmiki Corporation Scam: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವು ಇದೀಗ ಗಂಭೀರ ತಿರುಪಡೆದುಕೊಂಡಿದೆ. ಪ್ರಕರಣದಲ್ಲಿನ ಹೊಸ ಬೆಳವಣಿಗೆಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದೇ ಹೇಳಬಹುದು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರು ಮುಖ್ಯಪಾತ್ರಧಾರಿ ಎಂದು ಜಾರಿ ನಿರ್ದೇಶನಾಲಯ(ಇಡಿ) ಬುಧವಾರ ಹೇಳಿದೆ. ಅಲ್ಲದೇ ಮೊಬೈಲ್ ನಾಶ ಮಾಡಿದ್ದರ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಹಗರಣದಲ್ಲಿ ಮಾಜಿ ಸಚಿವ ಬಿ. ನಾಗೇಂದ್ರ ಅವರೇ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಪ್ರಾಥಮಿಕ ಆರೋಪಿ ಮತ್ತು ಹಗರಣದ ಮಾಸ್ಟರ್‌ಮೈಂಡ್ ಎಂದೇ ಇ.ಡಿ ಹೇಳಿದೆ. ಅಲ್ಲದೇ ಈ ನಿಗಮದ ಹಣವನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಿಗಾಗಿ ಬಳಸಲಾಗಿದೆ ಎನ್ನುವ ಗಂಭೀರ ಅಂಶವನ್ನೂ ಉಲ್ಲೇಖಿಸಲಾಗಿದೆ. ಇದರೊಂದಿಗೆ ಹಲವು ಗಂಭೀರ ಹಾಗೂ ಶಾಕಿಂಗ್ ಅಂಶಗಳನ್ನು ಇ.ಡಿ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವು ಬರೋಬ್ಬರಿ ಸುಮಾರು 89.62 ಕೋಟಿಗೆ ಸಂಬಂಧಿಸಿದೆ. ಇಷ್ಟು ಮೊತ್ತದ ಹಣವನ್ನು ನಿಗಮದ ಖಾತೆಗಳ ಖಾತೆಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿದೆ. ನಂತರ ಶೆಲ್ ಘಟಕಗಳ ಮೂಲಕ ಲಾಂಡರಿಂಗ್ ಮಾಡಲಾಗಿದೆ. 2024ರ ಮೇ ತಿಂಗಳಲ್ಲಿ ನಿಗಮದ ಉದ್ಯೋಗಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ನಂತರ ಈ ಹಗರಣ ಬೆಳಕಿಗೆ ಬಂದಿದೆ ಎಂದು ಇಡಿ ಪ್ರಕಟಣೆ ತಿಳಿಸಿದೆ.
ಬಿ.ನಾಗೇಂದ್ರ ಅವರ ಪ್ರಭಾವದಿಂದ ನಿಗಮದ ಯಾವುದೇ ಅನುಮತಿಯಿಲ್ಲದೆ ಎಂ.ಜಿ ರಸ್ತೆಯ ಶಾಖೆಗೆ ಹಣ ವರ್ಗಾಯಿಸಲಾಗಿದೆ.
187 ಕೋಟಿ ರೂ. ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯ ಖಜಾನೆಯಿಂದ 43.33 ಕೋಟಿ ರೂ.ಗಳನ್ನು ಯಾವುದೇ ನಿಯಮವನ್ನು ಪಾಲಿಸದೆ ಮತ್ತು ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಠೇವಣಿ ಮಾಡಲಾಗಿದೆ. ಈ ಹಣವನ್ನು ನಂತರ ಅನೇಕ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದ್ದು, ನಗದಾಗಿಯೂ ಪರಿವರ್ತನೆ ಮಾಡಲಾಗಿದೆ.
ಬಳ್ಳಾರಿ ಅಭ್ಯರ್ಥಿಗೆ 20 ಕೋಟಿ ಹಣ: ಇಡಿ ತನಿಖೆಯಲ್ಲಿ ಮತ್ತೊಂದು ಗಂಭೀರವಾದ ಅಂಶವನ್ನೂ ದಾಖಲಿಸಲಾಗಿದೆ. ಅದರಲ್ಲಿ 20.19 ಕೋಟಿ ರೂಪಾಯಿ ಹಣವನ್ನು ಬಳ್ಳಾರಿ ಕ್ಷೇತ್ರದಿಂದ 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗೆ ಬೆಂಬಲಿಸಲು ಹಾಗೂ ಬಿ.ನಾಗೇಂದ್ರ ಅವರ ವೈಯಕ್ತಿಕ ವೆಚ್ಚಕ್ಕೆ ಬಳಸಲಾಗಿದೆ ಎಂದು ಇಡಿ ಹೇಳಿದೆ. ಅಲ್ಲದೇ ಈ ಎಲ್ಲ ಅಂಶಗಳು ತನಿಖೆಯಲ್ಲಿ ದೃಢಪಟ್ಟಿವೆ. ಹೇಳಿಕೆಗಳನ್ನು ದೃಢೀಕರಿಸಲಾಗಿದೆ (ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ) ಎಂದಿದೆ.
ಬಿ.ನಾಗೇಂದ್ರರಿಂದ ಮೊಬೈಲ್ ನಾಶ, ತನಿಖೆಗೆ ಅಡ್ಡಿ: ಇನ್ನು ಹಗರಣ ಬೆಳಕಿಗೆ ಬಂದ ನಂತರ ರಾಜೀನಾಮೆ ನೀಡಿದ್ದ ಬಿ.ನಾಗೇಂದ್ರ ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ನಾಶಪಡಿಸುವ ಮೂಲಕ ತನಿಖೆಗೆ ಅಡ್ಡಿಪಡಿಸಿರುವ ಆರೋಪ ಇದೆ. ಅಲ್ಲದೇ ಪ್ರಕರಣಕ್ಕೆ ಅಡ್ಡಿಪಡಿಸಿರುವುದು ಹಾಗೂ ಇತರರಿಗೆ ಮೌನವಾಗಿರಲು ಸೂಚಿಸಿದ್ದರು ಎಂದೂ ಹೇಳಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ. ನಾಗೇಂದ್ರ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಪ್ರಕರಣ ತನಿಖಾ ಹಂತದಲ್ಲಿದೆ ಎಂದು ಇ.ಡಿ ಹೇಳಿದೆ.












Click it and Unblock the Notifications