ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಎಎಪಿ ಆಗ್ರಹ, ಪ್ರತಿಭಟನೆ
ಮೈಸೂರು, ಆಗಸ್ಟ್ 23: ಕರ್ನಾಟಕದಲ್ಲಿ ಮುಂಗಾರು ಅಭಾವವಾಗಿ ಮಳೆ ಅಭಾವ ಎದುರಾಗಿ ಬರಗಾಲ ಎದುರಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಈ ತಕ್ಷಣವೇ ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜೊತೆಗೂಡಿ ಮೈಸೂರಿನ ಗನ್ ಹೌಸ್ ಸರ್ಕಲ್‌ನಲ್ಲಿ ಬುಧವಾರ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದರು. ಇದೇ ಸಮಯದಲ್ಲಿ ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವಪಕ್ಷಗಳ ಸಭೆಗೆ ರಾಷ್ಟ್ರೀಯ ಪಕ್ಷವಾದ ಆಮ್ ಆದ್ಮಿ ಪಕ್ಷವನ್ನು ಕರೆಯದೆ ದುರಹಂಕಾರವನ್ನು ಮೆರೆದಿದ್ದಾರೆ. ಕಾವೇರಿ ನೀರಿನ ಸಮಸ್ಯೆಗೆ ಸಾಕಷ್ಟು ಹೋರಾಟ ಮಾಡಿರುವ ವಕೀಲರ ತಂಡ ನಮ್ಮ ಪಕ್ಷದಲ್ಲಿ ಇದ್ದರೂ ಸಹ ರಾಜ್ಯ ಸರ್ಕಾರ ಉದ್ದಟತನವನ್ನು ತೋರಿಸುತ್ತಿದೆ.
ನಾಡಿನ ಪರಿಸ್ಥಿತಿ ಮನವರಿಕೆ ಮಾಡುವಲ್ಲಿ ಸರ್ಕಾರ ವಿಫಲ
ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದರೂ ಸಹ ಮುಂಜಾಗ್ರತೆಯಿಂದ ಮೊದಲೇ ಸರ್ವೋಚ್ಚ ನ್ಯಾಯಾಲಯಕ್ಕೆ ಸಂಕಷ್ಟ ಕಾಲದಲ್ಲಿ ನೀರನ್ನು ಬಿಡಲು ಸಾಧ್ಯವಾಗುವುದಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಲು ರಾಜ್ಯ ಸರ್ಕಾರ ವೈಫಲ್ಯಗೊಂಡಿದೆ. ರಾಜ್ಯದ ರೈತರ ನೆಲ, ಜಲ ವಿಚಾರದಲ್ಲಿ ಸರ್ಕಾರವು ತಾತ್ಸಾರ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಸರ್ಕಾರದ ನಡೆಯನ್ನು ಅವರು ಖಂಡಿಸಿದರು.

ಈ ವೇಳೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹವಾನಿ, ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕುಶಲ ಸ್ವಾಮಿ,ಯುವ ಘಟಕದ ಉಪಾಧ್ಯಕ್ಷ ಗಿರೀಶ್ ನಾಯ್ಡು ಸೇರಿದಂತೆ ಮಾಳವಿಕ, ಧರ್ಮಶ್ರೀ, ಸೋಸಲೆ ಸಿದ್ದರಾಜು, ವಿಶ್ವನಾಥ್, ಜ್ಯೋತಿಶ್ ಕುಮಾರ್ , ವೆಂಕಟೇಶ್ ಹಾಗೂ ಅನೇಕ ಮುಖಂಡರುಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.
ರೈತರ ಸಂಘಟನೆಗಳು ಒಕ್ಕೂದ ಮುಖಂಡರು, ಕಾರ್ಯಕರ್ತರು ತಲೆಮೇಲೆ ಬಿಂದಿಗೆ ಹೊತ್ತು ಮೆರವಣಿಗೆ ಮಾಡಿ ಪ್ರತಿಭಟಿಸಿದರು. ಇದರಲ್ಲಿ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ತಮಿಳುನಾಡು ಅರ್ಜಿ ವಿಚಾರಣೆಗೆ ತ್ರಿಸದಸ್ಯ ಪೀಠ ರಚನೆ
ತಾವು ಬೆಳೆದ ಬೆಳೆಗೆ ತುರ್ತು ನೀರಿನ ಅಗತ್ಯತೆ ಇದ್ದು, ಕೂಡಲೇ ಕರ್ನಾಟಕ ಸರ್ಕಾರಕ್ಕೆ ನೀರು ಬಿಡಲು ನಿರ್ದೇಶಿಸುವಂತೆ ಕೋರಿ ತಮಿಳುನಾಡು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ರಚನೆ ಮಾಡಿದ್ದು, ಶುಕ್ರವಾರ ಅರ್ಜಿ ವಿಚಾರಣೆ ನಡೆಯಲಿದೆ.
ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಅರ್ಜಿ ಹಾಕುತ್ತಿದ್ದಂತೆ ಕಾಂಗ್ರೆಸ್ ಸರ್ಕಾರ ನೀರು ಹರಿಸಿದ್ದರ ವಿರುದ್ಧ ಬಿಜೆಪಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ರೈತರ ಹಿತ ಕಾಯದೇ ನಮ್ಮ ನೀರಿನ ಹಕ್ಕನ್ನು ಬಿಟ್ಟು ಕೊಟ್ಟಿದ್ದಾರೆ. ಗಟ್ಟಿ ಧ್ವನಿಯಲ್ಲಿ ರಾಜ್ಯದ ಹಕ್ಕಿನ ಕುರಿತು ಸಭೆಯಲ್ಲಿ ನಮ್ಮ ಅಧಿಕಾರಿಗಳು ಸಹ ಮಾತನಾಡಿಲ್ಲ ಎಂದು ಅವರು ಕಿಡಿ ಕಾರಿದ್ದರು. ಅದರ ಬೆನ್ನಲ್ಲೆ ಎಎಪಿ ಬೃಹತ್ ಪ್ರತಿಭಟನೆ ನಡೆಸಿದೆ.












Click it and Unblock the Notifications