ಆಯುಧ ಪೂಜೆಯಂದೇ ಎಚ್‌ಡಿಕೆ-ನಿಖಿಲ್‌ಗೆ ಶಾಕ್, ದಾಖಲಾಯ್ತು ಮತ್ತೊಂದು ಕೇಸ್!
ಇಂದು ಆಯುಧಪೂಜೆಯ ಸಂಭ್ರಮದಲ್ಲಿದ್ದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಕಹಿಸುದ್ದಿಯೊಂದು ಹೊರಬಿದ್ದಿದೆ. ಈಗಾಗಲೇ ಕುಮಾರಸ್ವಾಮಿ ಅವರ ವಿರುದ್ಧ ಒಂದು ಕೇಸ್ ದಾಖಲಾಗಿದ್ದು, ಇಂದು ಮತ್ತು ಕೇಸ್ ದಾಖಲಾಗಿದೆ. ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್ ಅವರು ಎಚ್‌ಡಿಕೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಎಡಿಜಿಪಿ ಎಂ.ಚಂದ್ರಶೇಖರ್ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ವಾಗ್ಯುದ್ಧ ಜೋರಾಗಿಯೇ ನಡೆಯುತ್ತಿತ್ತು. ಇದೀಗ ಇದು ಮತ್ತೆ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ನನಗೆ ಹಾಗೂ ನನ್ನ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಹಾಗೂ ಬೆದರಿಕೆಯೂ ಹಾಕಿದ್ದಾರೆ ಎಂದು ಎಡಿಜಿಪಿ ಎಂ.ಚಂದ್ರಶೇಖರ್ ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನ ಸಂಜಯ ನಗರ ಪೊಲೀಸ್ ಠಾಣೆಗೆ ತೆರಳಿ, ಸಚಿವ ಎಚ್.ಡಿ.ಕುಮಾರಸ್ವಾಮಿ, ಅವರ ಮಗ ನಿಖಿಲ್ ಕುಮಾರಸ್ವಾಮಿ ಹಾಗೂ ಸುರೇಶ್ ಬಾಬು ಎಂಬುವವರ ವಿರುದ್ಧ ದೂರು ಕೊಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಕುಮಾರಸ್ವಾಮಿ ಅವರು ನನ್ನ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ, ಬೆದರಿಕೆಯೂ ಹಾಕಿದ್ದಾರೆ. ನನ್ನ ಹುದ್ದೆಯ ವಿಚಾರವಾಗಿ ಅವರ ಸುಳ್ಳು ಮೆಡಿಕಲ್ ದಾಖಲೆ ಪಡೆದು ಕರ್ನಾಟಕ ಕೇಡರ್‌ನಲ್ಲಿ ಮುಂದುವರಿದ್ದೇನೆ ಹಾಗೂ ಲಂಚ ಪಡೆದಿದ್ದೇನೆ ಎಂದೆಲ್ಲ ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕುಮಾರಸ್ವಾಮಿ ಆಪ್ತ ಎನ್ನಲಾದ ಸುರೇಶ್ ಬಾಬು ಕೂಡ ನನ್ನ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದು, ನನ್ನ ಮೇಲೆ ಕ್ರಮಕ್ಕೆ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದ ಪತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಬೆದರಿಸಿದ್ದಾರೆ. ಈ ಮೂವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ಎಚ್‌ಡಿ ಕುಮಾರಸ್ವಾಮಿ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ಕೋರಿದ್ದ ಪತ್ರ ಸೋರಿಕೆಯಾಗಿತ್ತು ಎಂಬ ಆರೋಪವಿತ್ತು. ಇದಕ್ಕೆ ಸಂಬಂಧಿಸಿದಂತೆ ರಾಜಭವನದ ಅಧಿಕಾರಿಗಳ ತನಿಖೆಗೆ ಎಡಿಜಿಪಿ ಚಂದ್ರಶೇಖರ್ ಅನುಮತಿ ಕೋರಿದ್ದರು. ಈ ವಿಚಾರವಾಗಿ ಎಚ್‌ಡಿಕೆ ಚಂದ್ರಶೇಖರ್ ಅವರ ವಿರುದ್ಧ ಕೆಂಡಾಮಂಡಲವಾಗಿದ್ದರು. ಬಳಿಕ ಇಬ್ಬರ ನಡುವೆ ವಾಗ್ದಾಳಿಯೂ ನಡೆದಿತ್ತು.
ಇನ್ನು ಎಡಿಜಿಪಿ ಎಂ.ಚಂದ್ರಶೇಖರ್ ಅವರ ದೂರು ಆಧರಿಸಿ, ಸಂಜಯನಗರ ಪೊಲೀಸ್ ಕೇಸ್ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ಒಂದು ಕೇಸ್‌ನಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದ್ದು, ಈಗ ಮತ್ತೊಂದು ಕೇಸ್‌ನಲ್ಲಿ ಎಚ್‌ಡಿಕೆ ಹಾಗೂ ಪುತ್ರ ನಿಖಿಲ್‌ಗೂ ಕಂಟಕ ಎದುರಾಗಿದೆ.
ಮೊದಲ ಕೇಸ್ ಏನು?: ಚನ್ನಪಟ್ಟಣ ಚುನಾವಣೆಗೆ 50 ಕೋಟಿ ರೂಪಾಯಿಗಾಗಿ ತನಗೆ ಬೆದರಿಕೆ ಹಾಕಿರುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರ ವಿರುದ್ಧ ಉದ್ಯಮಿ ವಿಜಯ್ ತಾತಾ ದೂರು ನೀಡಿದ್ದರು. ಈ ಸಂಬಂಧ ಎಫ್‌ಐಆರ್ ಕೂಡ ದಾಖಲಾಗಿದ್ದು, ಈ ಪ್ರಕರಣವನ್ನು ನಿಸ್ಪಕ್ಷಪಾತವಾಗಿ, ಪಾರದರ್ಶಕವಾಗಿ ತನಿಖೆ ನಡೆಸಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಬಿ.ದಯಾನಂದ್ ಹೇಳಿದ್ದರು.












Click it and Unblock the Notifications