Good News : ಸಾರಿಗೆ ನಿಗಮಗಳಲ್ಲಿ 9 ಸಾವಿರ ಚಾಲಕರ ನೇಮಕ
ಬೆಳಗಾವಿ, ಡಿಸೆಂಬರ್ 19: ಕರ್ನಾಟಕ ಸರ್ಕಾರ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದೆ. ಈಗಾಗಲೇ ನಾಲ್ಕು ಸಾರಿಗೆ ನಿಗಮಗಳಲ್ಲಿ 9,000 ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ನಾಲ್ಕೂ ಸಾರಿಗೆ ನಿಗಮಗಳಲ್ಲಿ 9000 ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರ ಅನುಮತಿ ನೀಡಿದೆ. ಈ ಪೈಕಿ ಈಗಾಗಲೇ ಅಂದಾಜು 4000 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಬಾಕಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು ಎಂದು ಸಚಿವರು ವಿಧಾನ ಪರಿಷತ್ತನಲ್ಲಿ ಸದಸ್ಯರಾದ ಎಸ್ ವಿ ಸಂಕನೂರ ಅವರ ಕೇಳಿದ ಪ್ರಶ್ನೆಗೆ ಸಾರಿಗೆ ಮತ್ತು ಮುಜರಾಯಿ ಸಚಿವರ ಪರವಾಗಿ ಉತ್ತರಿಸಿದರು.

ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಸಮರ್ಪಕ ಅನುಷ್ಠಾನ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕಾಗಿ ಈ ಹಿಂದೆ 16 ತಿಂಗಳಲ್ಲಿ ಅಂದಾಜು 4294 ಬಸ್ ಗಳನ್ನು ಖರೀದಿಸಿದ್ದು, ಬರುವ ಮಾರ್ಚ ಅಂತ್ಯದೊಳಗೆ ಮತ್ತಷ್ಟು ಬಸ್ ಗಳನ್ನು ಖರೀದಿಸಲಾಗುವುದು. ಶಕ್ತಿ ಯೋಜನೆಯು ಜಾರಿಯಾದ ಬಳಿಕ ವಿಶೇಷವಾಗಿ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗದಲ್ಲಿ ತೊಡಗಿಕೊಂಡು ಆರ್ಥಿಕ ಅಭಿವೃದ್ದಿ ಸಾಧ್ಯವಾಗಿದೆ ಎಂದು ಸಚಿವರಾದ ಸಂತೋಷ್ ಲಾಡ್ ಅವರು ಹೇಳಿದರು.
ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ವಿಧೇಯಕ ಅಂಗೀಕಾರ
ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿರುವ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ವಿಧೇಯಕ 2024ಕ್ಕೆ ವಿಧಾನ ಪರಿಷತ್ತಿನಲ್ಲಿ ಡಿ.18ರಂದು ಅಂಗೀಕಾರ ದೊರೆಯಿತು.
ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರ ಪರವಾಗಿ ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಅವರು ವಿಧೇಯಕದ ಪರ್ಯಾಲೋಚನೆಗೆ ಕೋರಿದರು.
ವಿಧೇಯಕದ ಮೇಲೆ ಸದಸ್ಯರಾದ ಐವನ್ ಡಿ'ಸೋಜಾ, ನಾಗರಾಜ ಯಾದವ್, ಭಾರತಿ ಶೆಟ್ಟಿ, ಎನ್ ರವಿಕುಮಾರ ಹಾಗೂ ಇತರರು ಮಾತನಾಡಿದರು. ಸಚಿವರಾದ ಸಂತೋಷ ಲಾಡ್ ಅವರು ವಿಧೇಯಕದ ಬಗ್ಗೆ ವಿವರಿಸಿ, ವಿಧೇಯಕಕ್ಕೆ ಅನುಮೋದನೆ ನೀಡಿ, ಅಂಗೀಕರಿಸಬೇಕು ಎಂದು ಕೋರಿದರು. ಬಳಿಕ ಧ್ವನಿಮತದ ಮೂಲಕ ಸದನವು ವಿಧೇಯಕವನ್ನು ಅಂಗೀಕರಿಸಿತು.
ಸಿವಿಲ್ ಪ್ರಕ್ರಿಯಾ ಸಂಹಿತೆ ವಿಧೇಯಕ ಅಂಗೀಕಾರ
ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್.ಕೆ.ಪಾಟೀಲ ಅವರು ಪರ್ಯಾಲೋಚನೆಗೆ ಇಟ್ಟ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ 2024ಕ್ಕೆ ವಿಧಾನ ಪರಿಷತ್ತಿನಲ್ಲಿ ಡಿ.18ರಂದು ಅಂಗೀಕಾರ ದೊರೆಯಿತು.
ಸಚಿವರ ಕೋರಿಕೆಯ ಮೇರೆಗೆ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧೇಯಕ ಮೇಲೆ ಮಾತನಾಡಲು ಅವಕಾಶ ನೀಡಿದರು.ಸದಸ್ಯರಾದ ಪಿ ಎಚ್ ಪೂಜಾರ, ಕೇಶವ ಪ್ರಸಾದ್, ಪ್ರತಾಪಸಿಂಹ ನಾಯಕ ಕೆ., ಹಾಗೂ ತಿಪ್ಪೇಸ್ವಾಮಿ ಕೆ.ಎ ಹಾಗೂ ಇನ್ನೀತರರು ವಿಧೇಯಕದ ಮೇಲೆ ಮಾತನಾಡಿ, ಈ ವಿಧೇಯಕದಲ್ಲಿ ಅಳವಡಿಸಿರುವ ನಿಯಮಗಳು ವ್ಯಾಜ್ಯಗಳ ತ್ವರಿತ ವಿಲೇಗೆ ಪೂರಕವಾಗಿವೆ. ಕೋರ್ಟಿನ ವ್ಯವಸ್ಥೆಗೆ ಮತ್ತು ಜನರ ವಿಶ್ವಾಸಕ್ಕೆ ವಿಧೇಯಕವು ಪೂರಕವಾಗಿದೆ ಎಂದು ಸದಸ್ಯರು ಸಲಹೆ ಮಾಡಿ ವಿಧೇಯಕವನ್ನು ಬೆಂಬಲಿಸಿದರು.
ಕಾಲ ಬದಲಾದಂತೆ ನ್ಯಾಯಾದಾನ ವ್ಯವಸ್ಥೆಯಲ್ಲಿ ಸಹ ಆಮೂಲಾಗ್ರ ಬದಲಾವಣೆ ತರಬೇಕು ಎನ್ನುವ ಯೋಚನೆಯೊಂದಿಗೆ, ಬಾಕಿ ಇರುವ ಲಕ್ಷಾಂತರ ಸಂಖ್ಯೆಯ ಸಿವಿಲ್ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇ ಮಾಡಲು ಅನುಕೂಲವಾಗುವಂತೆ ವಿಧೇಯಕ ಜಾರಿಗೆ ಸರ್ಕಾರವು ಮುಂದಾಗಿದೆ ಎಂದು ಸಚಿವರಾದ ಹೆಚ್ ಕೆ ಪಾಟೀಲ ಅವರು ತಿಳಿಸಿ, ಸದನದಲ್ಲಿ ಮಂಡಿಸಿದ ವಿಧೇಯಕಕ್ಕೆ ಅನುಮೋದನೆ ನೀಡಿ, ಅಂಗೀಕರಿಸಬೇಕು ಎಂದು ಕೋರಿದರು. ಬಳಿಕ ಧ್ವನಿಮತದ ಮೂಲಕ ಸದನವು ವಿಧೇಯಕವನ್ನು ಅಂಗೀಕರಿಸಿತು.












Click it and Unblock the Notifications