7th Pay Commission: ಮಹಿಳಾ ನೌಕರರು, ಪಿಂಚಣಿದಾರರ ಪಿಂಚಣಿ ನಿಯಮದಲ್ಲಿ ಹೊಸ ಬದಲಾವಣೆ
ಬೆಂಗಳೂರು, ಮಾರ್ಚ್ 17: ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ನೇತೃತ್ವದ 7ನೇ ವೇತನ ಆಯೋಗವು ಲೋಕಸಭೆ ಮಾದರಿ ನೀತಿ ಸಂಹಿತೆ ಜಾರಿಯಾಗುವ ಕೆಲವೇ ಗಂಟೆಗಳ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿದೆ. ಬಹುನಿರೀಕ್ಷಿತ 7ನೇ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ ಮೂಲ ವೇತನದಲ್ಲಿ 27.5% ಹೆಚ್ಚಳ ಮಾಡುವುದರ ಜೊತೆಗೆ ಅವರ ಕನಿಷ್ಠ ವೇತನವನ್ನು ತಿಂಗಳಿಗೆ 17,000 ರೂ.ನಿಂದ 27,000 ರೂ.ಗೆ ಹೆಚ್ಚಿಸುವಂತೆ ಶಿಫಾರಸು ಮಾಡಿದೆ.
ವೇತನ ಆಯೋಗದ ವರದಿಯನ್ನು ಹಣಕಾಸು ಇಲಾಖೆಯ ಅನುಮೋದನೆಗೆ ಕಳುಹಿಸಲಾಗುವುದು. ಹಣಕಾಸು ಇಲಾಖೆಯ ಸಲಹೆಗಳನ್ನು ಆಧರಿಸಿ ಸರ್ಕಾರವು ಆಯೋಗದ ವರದಿ ಜಾರಿ ಬಗ್ಗೆ ನಿರ್ಧರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇ ವೇಳೆ ವೇತನ ಆಯೋಗ ಮಹಿಳಾ ಸರ್ಕಾರಿ ನೌಕರರು ಮತ್ತು ಮಹಿಳಾ ಪಿಂಚಣಿದಾರರ ಪಿಂಚಣಿ ನಿಯಮಗಳ ಬಗ್ಗೆ ಹೊಸ ನಿಯಮಗಳನ್ನು ಸೂಚಿಸಿದೆ. ಅವುಗಳು ಏನು ಎಂಬುದನ್ನು ಇಲ್ಲಿ ನೋಡೋಣ.

ಪತಿಯ ಬದಲು ಮಕ್ಕಳ ನಾಮ ನಿರ್ದೇಶನ!
ಮಹಿಳಾ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಂದ ಕುಟುಂಬ ಪಿಂಚಣಿಗಾಗಿ ತಮ್ಮ ಪತಿಯ ಬದಲು ಮಕ್ಕಳ ನಾಮ ನಿರ್ದೇಶನ ಮಾಡುವುದನ್ನು ಏಳನೇ ವೇತನ ಆಯೋಗದ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ಸರ್ಕಾರವು, ಕೇಂದ್ರ ನಾಗರಿಕ ಸೇವೆಗಳು (ಪಿಂಚಣಿ) ನಿಯಮಾವಳಿಗಳು, 2021ರ ನಿಯಮ 50ಕ್ಕೆ ತಿದ್ದುಪಡಿ ಮಾಡಿರುವುದನ್ನು 7ನೇ ವೇತನ ಆಯೋಗವು ಸಂಕ್ಷಿಪ್ತವಾಗಿ ಚರ್ಚಿಸಲು ಬಯಸಿದೆ. ಹಿಂದೆ, ಈ ನಿಯಮವು ಸರ್ಕಾರಿ ನೌಕರರ ನಿಧನರಾದಲ್ಲಿ, ಆತ ಅಥವಾ ಆಕೆಯ ಪತಿ ಅಥವಾ ಪತ್ನಿಗೆ (spouse) ಕುಟುಂಬ ನಿವೃತ್ತಿ ವೇತನವನ್ನು ಪಾವತಿಸಲಾಗುತ್ತಿತ್ತು. ಪತಿ / ಪತ್ನಿ ನಿಧನ ಹೊಂದಿದಲ್ಲಿ ಅಥವಾ ಅನರ್ಹರಾದಲ್ಲಿ, ಅವರ ಮಕ್ಕಳು ಕುಟುಂಬ ನಿವೃತ್ತಿ ವೇತನ ಪಡೆಯಲು ಅರ್ಹರಾಗುತ್ತಿದ್ದರು.
ಆದರೆ, ಪ್ರಸ್ತಾವಿತ ತಿದ್ದುಪಡಿಯು ಮಹಿಳಾ ಸರ್ಕಾರಿ ನೌಕರರು "ಸಕ್ಷಮ ನ್ಯಾಯಾಲಯದಲ್ಲಿ ವಿಚ್ಚೇದನ ಪ್ರಕ್ರಿಯೆ ಬಾಕಿಯಿರುವಾಗ ಅಥವಾ ಸರ್ಕಾರಿ ನೌಕರರು ಅಥವಾ ಮಹಿಳಾ ಪಿಂಚಣಿದಾರರು ಕೌಟುಂಬಿಕ ದೌರ್ಜನ್ಯ ತಡ ಕಾಯ್ದೆ ಅಥವಾ ವರದಕ್ಷಿಣೆ ನಿಷೇಧ ಕಾಯ್ದೆ ಅಥವಾ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ತನ್ನ ಗಂಡನ ವಿರುದ್ಧ ಪ್ರಕರಣವನ್ನು ದಾಖಲು ಮಾಡಿದ್ದಲ್ಲಿ, ಕುಟುಂಬ ಪಿಂಚಣಿಯನ್ನು ಪಡೆಯುವುದಕ್ಕಾಗಿ ಆಕೆಯು ತನ್ನ ಮಗುವನ್ನು / ಮಕ್ಕಳನ್ನು ನಾಮ ನಿರ್ದೇಶನ ಮಾಡಬಹುದಾಗಿದೆ ಎಂದು ಸೂಚಿಸುತ್ತದೆ.

ಮಹಿಳಾ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗಾಗಿ ಇದೊಂದು ಪ್ರಗತಿಪರ ಹೆಜ್ಜೆಯಾಗಿದ್ದು, ರಾಜ್ಯ ಸರ್ಕಾರವು ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚಣಿ) ನಿಯಮಗಳು, 2002ಕ್ಕೆ ತತ್ಸಮಾನ ಅವಕಾಶವನ್ನು ಕಲ್ಪಿಸಬೇಕೆಂದು ಏಳನೇ ವೇತನ ಆಯೋಗವು ಶಿಫಾರಸ್ಸು ಮಾಡಿದೆ.
ಇನ್ನು, ಏಳನೇ ವೇತನ ಆಯೋಗದ ವರದಿ ಸಲ್ಲಿಕೆ ಬೆನ್ನಲ್ಲೇ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ. ಸುಧಾಕರ್ ರಾವ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟು ದಿನಗಳ ಕಾಲ ವೇತನ ಆಯೋಗದ ವರದಿ ಅನುಷ್ಠಾನದ ಕುರಿತು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದ ಸರ್ಕಾರಿ ನೌಕರರು ಈಗ ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಈಗ ನೀತಿ ಸಂಹಿತೆ ಜಾರಿಯಿರುವ ಕಾರಣ ಜಾರಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications