ಲಾಕ್‌ಡೌನ್ ವೇಳೆ 5 ಕೋಟಿ ಟೆಂಡರ್ ಕಾರ್ಯಾದೇಶ; ಹೈಕೋರ್ಟ್ ಅಚ್ಚರಿ
ಬೆಂಗಳೂರು, ಮಾರ್ಚ್ 31; ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿದ್ದ ಸಮಯದಲ್ಲಿ ಕೇವಲ 3 ದಿನಗಳಲ್ಲಿ ಟೆಂಡರ್ ಕರೆಯದೆ 5 ಕೋಟಿ ರೂ.ಗಳ ಚರಂಡಿ ದುರಸ್ತಿ ಕಾರ್ಯಾದೇಶ ನೀಡಲು ಸಾಧ್ಯವೇ? ಎಂದು ಕರ್ನಾಟಕ ಹೈಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಅಲ್ಲದೇ, ಆ ರೀತಿ ಕಾರ್ಯಾದೇಶ ನೀಡಿ ಹಣ ಬಿಡುಗಡೆ ಮಾಡಿರುವ ಕಾರ್ಯನಿರ್ವಾಹಕ ಇಂಜಿನಿಯರ್ ವಿರುದ್ಧ ತನಿಖೆ ನಡೆಸಲು ಅನುಮತಿ ನಿರಾಕರಿಸಿರುವ ಸಂಬಂಧ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.
ಹೇಮಾವತಿ ಎಡದಂಡೆ ನಾಲೆ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೆ. ಶ್ರೀನಿವಾಸ್ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ಖಾಸಗಿ ದೂರು ದಾಖಲಿಸಿದ್ದ ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆಯ ನಾಗೇಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಅರ್ಜಿ ವಿಚಾರಣೆ ನಡೆಸಿತು. ಈ ಪ್ರಕರಣದಲ್ಲಿ ಆರೋಪಿ ಹಾಗೂ ಆರೋಪಿ ವಿರುದ್ಧದ ತನಿಖೆಗೆ ಅನುಮತಿ ನಿರಾಕರಿಸಿರುವ ಅಧಿಕಾರಿಗೆ ಸೇರಿದ ಯಾವುದೇ ಹಣ ವೆಚ್ಚವಾಗಿಲ್ಲ. ಬದಲಾಗಿ ಸಾರ್ವಜನಿಕ ತೆರಿಗೆ ಹಣ ವೆಚ್ಚಮಾಡಲಾಗಿದೆ. ಹಾಗಾಗಿ ತನಿಖೆಗೆ ಅನುಮತಿ ನಿರಾಕರಿಸಿರುವ ಸಂಬಂಧದ ಸಂಪೂರ್ಣ ದಾಖಲೆಗಳನ್ನು ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಮಧ್ಯಂತರ ನಿರ್ದೇಶನ ನೀಡಿದೆ.

ಆಘಾತಕಾರಿ ಬೆಳವಣಿಗೆ: ದಾಖಲೆಗಳನ್ನು ಪರಿಶೀಲಿಸಿ ನ್ಯಾಯಪೀಠ 2020ರ ಮಾರ್ಚ್ 24ರಿಂದ ಇಡೀ ದೇಶವು ಸಂಪೂರ್ಣ ಲಾಕ್‌ಡೌನ್‌ನಲ್ಲಿತ್ತು. ದೇಶದಲ್ಲಿ ಯಾವುದೇ ಕಾಮಗಾರಿಗಳ್ನು ಕೈಗೆತ್ತಿಕೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಈ ನಡುವೆ ಮೂರು ದಿನಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸುಮಾರು 5.07 ಕೋಟಿ ರೂ.ಗಳ ಬಿಲ್ ಸಲ್ಲಿಸಿದ್ದು, ಕಾರ್ಯಪಾಲಕ ಇಂಜಿನಿಯರ್ ಅವರಿಂದ ಅನುಮೋದನೆ ಪಡೆದು ಬಿಲ್‌ಗಳನ್ನು ಮಂಜೂರು ಮಾಡಿಕೊಂಡಿದ್ದಾರೆ. ಜತೆಗೆ, ಆದರೂ ಸಕ್ಷಮ ಪ್ರಾಧಿಕಾರ ಅನುಮತಿ ನೀಡದಿರುವುದು ಆಘಾತಕಾರಿ ಬೆಳವಣಿಗೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಕೆ. ಶಿವರಾಮ್, ಹೇಮಾವತಿ ಎಡದಂಡೆ ನಾಲೆ ಘಟಕದ ಆಗಿನ ಕಾರ್ಯಪಾಲಕ ಎಂಜಿನಿಯರ್ (ಪ್ರಸ್ತುತ ನಿವೃತ್ತ) ಆಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ಸಂಗ್ರಹಣೆಯಲ್ಲಿ ಪಾರದರ್ಶಕ ಕಾಯಿದೆಯಲ್ಲಿ (ಕೆಟಿಪಿಪಿ) ವಿನಾಯ್ತ ಪಡೆದು ಸುಮಾರು 5,7 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ತಡೆ ಗೋಡೆ ನಿರ್ಮಿಸುವುದಕ್ಕಾಗಿ 2020ರ ಮಾರ್ಚ್ 27ರಂದು ಕಾರ್ಯದೇಶ ನೀಡಿದ್ದಾರೆ.

ಅಲ್ಲದೆ, ಮೂರೇ ದಿನದಲ್ಲಿ ಕಾಮಗಾರಿ ಮುಗಿಸಿರುವುದಾಗಿ ಗುತ್ತಿಗೆದಾರರು ತಿಳಿಸಿದ್ದು, ಬಳಿಕ ಬಿಲ್‌ಗಳನ್ನು ಪಾಸ್ ಮಾಡಿದ್ದಾರೆ ಎಂದು ಅರ್ಜಿದಾರರ ನಾಗೇಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ದೂರನ್ನು ಪರಿಶೀಲನೆ ನಡೆಸಿದ್ದ ಲೋಕಾಯುಕ್ತರು, ಕಾಯಿದೆಯ ಸೆಕ್ಷನ್ 4(ಜಿ)ಯಲ್ಲಿ ವಿನಾಯತ್ತಿ ಪಡೆದು ಕಾಮಗಾರಿ ನಡೆಸಿದ್ದಾರೆ. ಇದರಲ್ಲಿ ಯಾವುದೇ ಉಲ್ಲಂಘನೆಯಾಗಿಲ್ಲ ಎಂಬುದಾಗಿ ತಿಳಿಸಿ ದೂರನ್ನು ಮುಕ್ತಾಯಗೊಳಿಸಿದ್ದರು. ಈ ನಡುವೆ ಅರ್ಜಿದಾರರ ನಾಗೇಗೌಡ ಅವರು ವಿಚಾರಣಾ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿ, ಪ್ರಕರಣ ಸಂಬಂಧ ತನಿಖೆಗೆ ಮನವಿ ಮಾಡಿದ್ದರು. ದೂರನ್ನು ಪರಿಗಣಿಸಿದ್ದ ನ್ಯಾಯಾಲಯದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಸೂಚನೆ ನೀಡಿತ್ತು.
ಲೋಕಾಯುಕ್ತ ಅಧಿಕಾರಿಗಳು ಆರೋಪಿ ವಿರುದ್ಧ ತನಿಖೆ ನಡೆಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಕ್ಷಮ ಪ್ರಾಧಿಕಾರ, ಇದೇ ರೀತಿಯ ಪ್ರಕರಣ ಲೋಕಾಯುಕ್ತದಲ್ಲಿ ಬಾಕಿಯಿದೆ ಎಂದು ತಿಳಿಸಿ ಅನುಮತಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ನಾಗೇಗೌಡ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.












Click it and Unblock the Notifications