ಭಾರೀ ನಷ್ಟದಲ್ಲಿರುವ 34 ಕರ್ನಾಟಕ ಸರ್ಕಾರಿ ಸಂಸ್ಥೆಗಳು: ಬೆಸ್ಕಾಂ, ಕೆಎಸ್‌ಆರ್‌ಟಿಸಿ ಸೇರಿ ವಿವಿಧ ಸಂಸ್ಥೆಗಳ ಕುರಿತ ಮಹತ್ವದ ವರದಿ
ಬೆಂಗಳೂರು, ಜುಲೈ 11: ಕರ್ನಾಟಕ ಸರ್ಕಾರದ ಅಡಿಯಲ್ಲಿ ಬರುವ ಒಟ್ಟು 34 ಸಾರ್ವಜನಿಕ ವಲಯದ ಸಂಸ್ಥೆಗಳು (ಪಿಎಸ್‌ಇ) ಭಾರೀ ನಷ್ಟದಲ್ಲಿ ಇವೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಹೇಳಿದೆ. ಮಂಗಳವಾರ ವಿಧಾನಸಭೆಯಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಈ ಮಹತ್ವದ ಮಾಹಿತಿಯನ್ನು ಬಹಿರಂಗಗೊಳಿಸಿದೆ.
34 ಪಿಎಸ್‌ಇಗಳ ನಿವ್ವಳ ಮೌಲ್ಯವು 'ಶೂನ್ಯ ಅಥವಾ ಋಣಾತ್ಮಕ' ಎಂದು ಸಿಎಜಿ ವರದಿ ನೀಡಿದೆ. ಮಾರ್ಚ್ 2022 ಕ್ಕೆ ಕೊನೆಗೊಂಡ ಹಣಕಾಸು ವರ್ಷದ ಲೆಕ್ಕಪರಿಶೋಧನಾ ವರದಿಯಲ್ಲಿ ಇದನ್ನು ಬಿಚ್ಚಿಟ್ಟಿದೆ.
34 ಪಿಎಸ್‌ಇಗಳಲ್ಲಿ ನಾಲ್ಕು ಎಸ್ಕಾಮ್‌ಗಳು (ಬೆಸ್ಕಾಂ, ಹೆಸ್ಕಾಂ, ಸಿಇಎಸ್‌ಸಿ ಮತ್ತು ಗೆಸ್ಕಾಂ), ನಾಲ್ಕು ಸಾರಿಗೆ ಸಂಸ್ಥೆಗಳು (ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ ಮತ್ತು ಕೆಕೆಆರ್‌ಟಿಸಿ), ಲಿಡ್ಕರ್, ಮೈಶುಗರ್, ಕರ್ನಾಟಕ ಪಲ್ಪ್‌ವುಡ್ ಲಿಮಿಟೆಡ್, ಕೆಎಸ್‌ಟಿಡಿಸಿ ಸೇರಿವೆ.

ಕರ್ನಾಟಕವು 125 ಪಿಎಸ್‌ಇಗಳನ್ನು ಹೊಂದಿದೆ. ಇದರಲ್ಲಿ ಆರು ಶಾಸನಬದ್ಧ ನಿಗಮಗಳಿವೆ. 119 ಸರ್ಕಾರಿ ಸಂಸ್ಥೆಗಳಿವೆ. ಇದರಲ್ಲಿ 13 ಸಂಸ್ಥೆಗಳು ನಿಷ್ಕ್ರಿಯಗೊಂಡಿವೆ.
ಸಿಎಜಿ ವರದಿ ಪ್ರಕಾರ, ಮಾರ್ಚ್ 2022 ರ ಹೊತ್ತಿಗೆ, 54 ಪಿಎಸ್‌ಇಗಳು ಭಾರೀ ನಷ್ಟವನ್ನು ಅನುಭವಿಸುತ್ತಿವೆ. ಇತ್ತೀಚಿಗೆ ಅಂತಿಮಗೊಳಿಸಿದ ಖಾತೆಗಳ ಪ್ರಕಾರ, ಇವುಗಳು ಒಟ್ಟಾರೆಯಾಗಿ 37,893.24 ಕೋಟಿ ರೂಪಾಯಿಗಳಷ್ಟು ನಷ್ಟವನ್ನು ಹೊಂದಿವೆ. ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕ ಸ್ಟೇಟ್ ವೆನಿಯರ್ಸ್ ಲಿಮಿಟೆಡ್ ಮತ್ತು ಮೈಸೂರು ಕಾಸ್ಮೆಟಿಕ್ಸ್ ಲಿಮಿಟೆಡ್ ದಿವಾಳಿ ಹಂತದಲ್ಲಿವೆ ಎಂದು ವರದಿಯು ಹೇಳಿದೆ.
'34 ಪಿಎಸ್‌ಇಗಳಲ್ಲಿ 26 ರಲ್ಲಿ ಬಂಡವಾಳವು ಹೆಚ್ಚುಕಮ್ಮಿ ಖಾಲಿಯಾಗಿದೆ. ಮಾರ್ಚ್ 2022 ಕೊನೆಗೊಂಡಂತೆ ಬಾಕಿ ಉಳಿದಿರುವ ಸರ್ಕಾರಿ ಸಾಲಗಳು 42,567.68 ಕೋಟಿ ರೂಪಾಯಿಗಳಾಗಿವೆ' ಎಂದು ಆಡಿಟ್ ವರದಿ ನೀಡಿದೆ.

13 ನಿಷ್ಕ್ರಿಯ ಸರ್ಕಾರಿ ಕಂಪನಿಗಳು ರೂ. 160.21 ಕೋಟಿ ಬಂಡವಾಳ ಹೊಂದಿದೆ. ಇವುಗಳು ರೂ. 447.57 ಕೋಟಿ ದೀರ್ಘಾವಧಿ ಸಾಲ ಹೊಂದಿದೆ. ಒಟ್ಟಾರೆಯಾಗಿ 607.78 ಕೋಟಿ ರೂಪಾಯಿ ಹೂಡಿಕೆಯನ್ನು ಇವುಗಳು ಹೊಂದಿವೆ ಎಂದು ಸಿಎಜಿ ಮಾಹಿತಿ ನೀಡಿದೆ. ಸಕ್ರಿಯ ಪಿಎಸ್‌ಯುಗಳಲ್ಲಿನ ಹೂಡಿಕೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುತ್ತಿಲ್ಲವೆಂದು ಸಿಎಜಿ ಹೇಳಿದೆ.
ಲಾಭ ಗಳಿಸುವ ಪಿಎಸ್‌ಇಗಳ ಸಂಖ್ಯೆಯು 2021-22ರಲ್ಲಿ 55 ಆಗಿತ್ತು. ಅದಕ್ಕಿಂತ ಹಿಂದಿನ ವರ್ಷದಲ್ಲಿ 50 ಇತ್ತು. ಗಳಿಸಿದ ಲಾಭವು 2020-21 ರಲ್ಲಿ 2,987 ಕೋಟಿ ಆಗಿತ್ತು. 2021-22 ರಲ್ಲಿ 2,608.22 ಕೋಟಿಗೆ ಇಳಿದಿದೆ ಎಂದು ವರದಿ ತಿಳಿಸಿದೆ.
ಕಂಪನಿಗಳ ಕಾಯಿದೆಯ ಪ್ರಕಾರ, ಪಿಎಸ್‌ಇಗಳು ತಮ್ಮ ಹಣಕಾಸು ಹೇಳಿಕೆಗಳನ್ನು ಸಲ್ಲಿಸಲು ನಿಗದಿತ ಸಮಯಾವಧಿಯನ್ನು ಅನುಸರಿಸುತ್ತಿಲ್ಲ ಎಂದು ಸಿಎಜಿ ಹೇಳಿದೆ.
ಇದರಿಂದಾಗಿ 86 ಸರ್ಕಾರಿ ಕಂಪನಿಗಳ 204 ಖಾತೆಗಳು ಸಾಲದಲ್ಲಿವೆ. ಅಲ್ಲದೆ, ನಾಲ್ಕು ಶಾಸನಬದ್ಧ ನಿಗಮಗಳ ಆರು ಖಾತೆಗಳು ಸಾಲವನ್ನು ಉಳಿಸಿಕೊಂಡಿವೆ ಎಂದು ವರದಿ ತಿಳಿಸಿದೆ.












Click it and Unblock the Notifications