ಟಿಕೆಟ್ ರಹಿತ ಪ್ರಯಾಣ, ಬರೋಬ್ಬರಿ 3,208 ಪ್ರಯಾಣಿಕರಿಗೆ ದಂಡ
ಬೆಂಗಳೂರು, ಸೆಪ್ಟೆಂಬರ್ 13: ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದಿದ್ದು, ದಿನೇ ದಿನೇ ಪ್ರಯಾಣಿಕರ ಸಂಖ್ಯೆ ಹೆಚ್ಚುತಲೇ ಇದೆ. ಈ ನಡುವೆ ಟಿಕೆಟ್ ಇಲ್ಲದೇ ಪ್ರಯಾಣಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇಂತವರ ಮೇಲೆ ನಿಗಾ ಇರಿಸಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಟಿಕೆಟ್ ಇಲ್ಲದೇ ಪ್ರಯಾಣಿಸಿವವರನ್ನು ಹಿಡಿದು ದಂಡ ವಿಧಿಸುತ್ತಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಕೆಎಸ್ಆರ್‌ಟಿಸಿ ನಿಗಮವು 3,208 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಿದೆ. ಟಿಕೆಟ್ ಇಲ್ಲದೇ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಸಾರಿಗೆ ತನ್ನ ತನಿಖಾ ತಂಡಗಳಿಂದ ತಪಾಸಣಾ ಕಾರ್ಯವನ್ನು ಚುರುಕುಗೊಳಿಸಿದೆ. ಅಧಿಕಾರಿಗಳು ನಿಗಮದ ವ್ಯಾಪ್ತಿಯಲ್ಲಿ ಸಂಚರಿಸುವ 44,416 ವಾಹನಗಳನ್ನು ತನಿಖೆಗೊಳಪಡಿಸಿದ್ದಾರೆ. ಈ ಪೈಕಿ 3,020 ಪ್ರಕರಣಗಳನ್ನು ಪತ್ತೆ ಹಚ್ಚಿ 3,208 ಪ್ರಯಾಣಿಕರಿಂದ 4,70,801/-ರೂ ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ.

ನಿಗಮದ ಆದಾಯದಲ್ಲಿ ಸೋರಿಕೆ ಆಗುತ್ತಿದ್ದ 69,335/-ರೂ ಗಳನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತಪ್ಪಿತಸ್ಥರ ವಿರುದ್ಧ ಇಲಾಖಾ ರೀತಿಯ ಸೂಕ್ತ ಶಿಸ್ತಿನ ಕ್ರಮವನ್ನು ಜರುಗಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರು, ಬಸ್ಸಿನಲ್ಲಿ ಪ್ರಯಾಣಿಸುವಾಗ ಸರಿಯಾದ ಟಿಕೆಟ್ ಅಥವಾ ಪಾಸ್ ಪಡೆದು ಪ್ರಯಾಣ ಮಾಡುವಂತೆ, ಕೆಎಸ್‌ಆರ್‌ಟಿಸಿ ನಿಗಮವು ಪ್ರಕಟಣೆಯಲ್ಲಿ ಮನವಿ ಮಾಡಿದೆ.
ಮೂರು ತಿಂಗಳು ಪೂರೈಸಿದ ಶಕ್ತಿ ಯೋಜನೆ
ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಶಕ್ತಿ ಯೋಜನೆ ಮೂರು ತಿಂಗಳು ಪೂರೈಸಿದೆ. ಇದುವರೆಗೆ ಮಹಿಳೆಯರು 13.20 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದುಕೊಂಡು ಉಚಿತ ಸಂಚಾರ ಮಾಡಿದ್ದು ಶೂನ್ಯ ಟಿಕೆಟ್ ಪ್ರಯಾಣದ ಮೊತ್ತ ರೂ. 332.77 ಕೋಟಿಗಳಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಶೂನ್ಯ ಟಿಕೆಟ್‌ಗಳ ಸಂಖ್ಯೆ 13,20,53,266 ಗಳಾಗಿದೆ. ಉಚಿತ ಪ್ರಯಾಣದ ಟಿಕೆಟ್ ಮೊತ್ತ ರೂ. 332,77,03,789 ಗಳಾಗಿದೆ.
ಜೂನ್ 11 ರಿಂದ 30 ರವೆರೆಗೆ 2.55 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 65.15 ಕೋಟಿಗಳಾಗಿದೆ.
ಜುಲೈ ತಿಂಗಳಲ್ಲಿ 4.48 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 111.78 ಕೋಟಿಗಳಾಗಿದೆ.
ಆಗಸ್ಟ್ ತಿಂಗಳಲ್ಲಿ 4.61 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 115.42 ಕೋಟಿಗಳಾಗಿದೆ.
ಸಪ್ಟೆಂಬರ್ 1ರಿಂದ 10 ರವೆರೆಗೆ 1.56 ಕೋಟಿ ಶೂನ್ಯ ಟಿಕೆಟ್‌ಗಳನ್ನು ಪಡೆದು ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಮೊತ್ತ ರೂ. 40.42 ಕೋಟಿಗಳಾಗಿದೆ ಎಂದು ತಿಳಿದು ಬಂದಿದೆ.












Click it and Unblock the Notifications