11,495 ಕೋಟಿ ರೂ. ಕೇಂದ್ರ ಸರ್ಕಾರದಿಂದ ಇನ್ನೂ ಕರ್ನಾಟಕಕ್ಕೆ ಬಂದಿಲ್ಲ: ಸಿಎಂ ಸಿದ್ದರಾಮಯ್ಯ!
4.5 ಲಕ್ಷ ಕೋಟಿ ರೂಪಾಯಿ ತೆರಿಗೆ ಪಾವತಿಯನ್ನು ಕರ್ನಾಟಕವು ಪ್ರತಿ ವರ್ಷವೂ ಕೇಂದ್ರಕ್ಕೆ ಮಾಡುತ್ತಿದೆ. ಆದರೆ, ನಾವು ಒಂದು ರೂಪಾತಿಯನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟರೆ 15 ಪೈಸೆ ನಮಗೆ ವಾಪಸ್ಸು ಬರುತ್ತದೆ. ಈ ಅನ್ಯಾಯ 16ನೇ ಹಣಕಾಸು ಆಯೋಗದಲ್ಲಿ ಆಗಬಾರದು. 14ನೇ ಹಣಕಾಸು ಆಯೋಗದಲ್ಲಿ ನಮ್ಮ ತೆರಿಗೆ ಪಾಲು 4.713% ಕ್ಕೆ ಹಾಗೂ 15 ನೇ ಹಣಕಾಸು ಆಯೋಗದಲ್ಲಿ ತೆರಿಗೆ ಪಾಲು 3.647%ಕ್ಕೆ ಇಳಿಕೆ ಮಾಡಿದ್ದರಿಂದ ತೆರಿಗೆ ಹಂಚಿಕೆಯಲ್ಲಿ ನಮ್ಮ ಪಾಲನ್ನು ಒಟ್ಟಾರೆ 23% ರಷ್ಟು ಇಳಿಕೆ ಕಂಡಿದೆ. 5 ವರ್ಷಗಳ ಅವಧಿಯಲ್ಲಿ ಒಟ್ಟು 68,275 ಕೋಟಿ ರೂ.ಗಳು ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
16ನೇ ಹಣಕಾಸು ಆಯೋಗಕ್ಕೆ ಹೆಚ್ಚುವರಿ ಮನವಿಯನ್ನು ಸಲ್ಲಿಸುವುದರ ಜೊತೆಜೊತೆಗೆ ಒಕ್ಕೂಟದ ವ್ಯವಸ್ಥೆಯನ್ನು ಬಲಪಡಿಸಿ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸಬೇಕು ಎಂದು ಹೇಳಲಾಗಿದೆ. 16 ನೇ ಹಣಕಾಸಿನ ಆಯೋಗದ ಅಧ್ಯಕ್ಷ ಅರವಿಂದ ಪನಗಾರಿಯಾ ಮತ್ತು ಸದಸ್ಯರನ್ನು ಭೇಟಿಯಾಗಿ ಹೆಚ್ಚುವರಿ ಜ್ಞಾಪನಾ ಪತ್ರವನ್ನು ಸಲ್ಲಿಸಲಾಗಿದೆ.

2011-2012 ರಲ್ಲಿ ಕರ್ನಾಟಕ ರಾಜ್ಯವು ಜಿಡಿಪಿಗೆ ಶೇ 7ರಷ್ಟು ಕೊಡುಗೆ ನೀಡಿದ್ದರೆ, 2024-25 ರಲ್ಲಿ ರಾಜ್ಯವು ದೇಶದ ಒಟ್ಟು ಜಿಡಿಪಿಗೆ ಸುಮಾರು ಶೇ.8.7ರಷ್ಟುಕೊಡುಗೆ ನೀಡುತ್ತಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ. ಒಟ್ಟು ಜನಸಂಖ್ಯೆಯಲ್ಲಿ ಶೇ.5 ರಷ್ಟಿದ್ದೇವೆ. 5 ವರ್ಷಗಳಿಗೊಮ್ಮೆ ಹಣಕಾಸಿನ ಆಯೋಗ ರಚನೆಯಾಗುತ್ತದೆ. ಸಂವಿಧಾನದ ಅನುಚ್ಛೇದ 180ರ ಪ್ರಕಾರ ತೆರಿಗೆ ಹಂಚಿಕೆಯಾಗಬೇಕೆಂದು ಹೇಳಲಾಗಿದ್ದು, ಯಾರಿಗೂ ಅನ್ಯಾಯವಾಗಬಾರದೆಂದು ಸ್ಪಷ್ಟಪಡಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರವು ಸೆಸ್ ಮತ್ತು ಸರ್ಜಾರ್ಜ್ ನಲ್ಲಿ ನಮಗೆ ಮಾತ್ರವಲ್ಲ ಯಾವ ರಾಜ್ಯಕ್ಕೂ ಪಾಲು ಕೊಡುತ್ತಿಲ್ಲ. ಕರ್ನಾಟಕದಿಂದ 2024-25ರಲ್ಲಿ ಒಟ್ಟು 5,41,709 ಕೋಟಿ ಸಂಗ್ರಹವಾಗಿದೆ. 8,084 ಕೋಟಿ ರೂಪಾಯಿಗಳು ಕರ್ನಾಟಕ್ಕೆ ನಷ್ಟವಾಗಿದೆ. ಇನ್ನು ಸೆಸ್ ಮತ್ತು ಸರ್ಚಾಜ್ ಶೇ.5 ರಷ್ಟು ಮೀರಬಾರದು. ಒಂದೊಮ್ಮೆ 5% ಮೀರಿದರೆ ರಾಜ್ಯಗಳ ತೆರಿಗೆ ಹಂಚಿಕೆಯ ಪಾಲಿನಲ್ಲಿ ಶೇ 50 ರಷ್ಟು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಲಾಗಿದೆ.
ಕರ್ನಾಟಕ ಆರ್ಥಿಕವಾಗಿ ಬೆಳವಣಿಗೆಯಾದರೆ ಕೇಂದ್ರ ಸರ್ಕಾರದ ಬೆಳವಣಿಗೆಯೂ ಆಗುತ್ತದೆ. ಹಾಗಾಗಿ ನ್ಯಾಯಯುತವಾಗಿ ತೆರಿಗೆ ಹಂಚಿಕೆಯಾಗಬೇಕು ಎಂದು ಕೋರಲಾಗಿದೆ ಅಂತ ಹೇಳಿದ್ದಾರೆ.
ಮುಂದುವರಿದು ರಾಜ್ಯದ ತಲಾದಾಯವು ಆರು ಜಿಲ್ಲೆಗಳನ್ನು ಹೊರತುಪಡಿಸಿ ಕಡಿಮೆಯಿದೆ. ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಕಡಿಮೆಯಿದ್ದು, ಇದು ರಾಜಸ್ಥಾನ, ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ಸರಿಸಮಾನವಾಗಿದೆ. ರಾಜಸ್ವ ಕೊರತೆ ಇರುವ ರಾಜ್ಯಗಳಿಗೆ ಈ ಕೊರತೆಯನ್ನು ತುಂಬಲು ಅನುದಾನವನ್ನು ನೀಡಲಾಗುತ್ತದೆ. ಆದರೆ ತೆರಿಗೆ ಹಂಚಿಕೆಯಲ್ಲಿ ನಮ್ಮಷ್ಟೇ ನಷ್ಟವಾಗಿರುವ ಕೇರಳಕ್ಕೆ ಕಳೆದ ವರ್ಷ 38,000 ಕೋಟಿಗಳನ್ನು ರಾಜಸ್ವ ಕೊರತೆ ತುಂಬಲು ಒದಗಿಸಲಾಗಿದೆ. ಕರ್ನಾಟಕಕ್ಕೆ ಯಾವುದೇ ರಾಜಸ್ವ ಕೊರತೆ ಅನುದಾನ ಬಂದಿಲ್ಲ ಎಂದಿದ್ದಾರೆ.
15ನೇ ಹಣಕಾಸಿನ ಆಯೋಗವು ರಾಜ್ಯಕ್ಕೆ 5,495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕರ್ನಾಟಕ, ತೆಲಂಗಾಣ ಮತ್ತು ಮಿಜೋರಾಂ ರಾಜ್ಯಗಳಿಗೆ ಒದಗಿಸಬೇಕೆಂದು ಶಿಫಾರಸ್ಸು ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ಅನುದಾನವನ್ನು ಒದಗಿಸಲು ನಿರಾಕರಿಸಿತು. ಇದರೊಂದಿಗೆ ಪೆರಿಫೆರಲ್ ರಿಂಗ್ ರಸ್ತೆಗೆ 3,000 ಕೋಟಿ ಹಾಗೂ ಕೆರೆಗಳ ಅಭಿವೃದ್ಧಿಗೆ 3,000 ಕೋಟಿ ರೂಪಾಯಿ ಕೊಡಬೇಕು ಎಂದು ಶಿಫಾರಸ್ಸು ಮಾಡಿತ್ತು. ಎರಡೂ ಸೇರಿ 11,495 ಕೋಟಿ ರೂ.ಗಳನ್ನು ಒದಗಿಸಬೇಕೆಂದು 15ನೇ ಹಣಕಾಸಿನ ಆಯೋಗವು ಶಿಫಾರಸ್ಸು ಮಾಡಿತ್ತು. ಈ ಹಣ ಬಂದಿಲ್ಲ ಎಂದಿದ್ದಾರೆ.












Click it and Unblock the Notifications