ಎಸ್.ಎಂ.ಕೃಷ್ಣ ಅಂತ್ಯಸಂಸ್ಕಾರಕ್ಕೆ 1,000 ಕೆ.ಜಿ ಗಂಧದ ಕಟ್ಟಿಗೆ ಬಳಕೆ, ಇದರ ಹಿಂದಿದೆ ದೊಡ್ಡ ಕಾರಣ
ಮಾಜಿ ಸಿಎಂ ಹಾಗೂ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರು ಒಂದು ಇಹಲೋಕ ತ್ಯಜಿಸಿದ್ದಾರೆ. ಗಣ್ಯರು ಕೃಷ್ಣ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಕೃಷ್ಣ ಅವರ ಹುಟ್ಟೂರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯಲ್ಲಿ ನಾಳೆ ನಡೆಯಲಿದೆ. ಇನ್ನು ಬರೋಬ್ಬರಿ 1,000 ಕೆ.ಜಿ ಗಂಧದ ಕಟ್ಟಿಗೆ ಬಳಸಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸ್ಥಳೀಯ ಶಾಸಕ ಗಣಿಗ ರವಿ, ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದ ಅವಧಿಯಲ್ಲಿ ರೈತರಿಗೆ ಗಂಧದ ಮರಗಳನ್ನು ಬೆಳೆಯಲು ಅನುವು ಮಾಡಿಕೊಟ್ಟಿದ್ದರು. ಇದರ ನೆನಪಾರ್ಥ ಬರೋಬ್ಬರಿ 1,000 ಕೆ.ಜಿ ಗಂಧದ ಕಟ್ಟಿಗೆ ಬಳಸಿ ಎಸ್.ಎಂ.ಕೃಷ್ಣ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದರ ಜೊತೆಗೆ ಮಂಡ್ಯದಲ್ಲಿರುವ ನೂತನ ಹೆರಿಗೆ ಆಸ್ಪತ್ರೆಗೆ ಎಸ್.ಎಂ.ಕೃಷ್ಣ ಅವರ ಹೆಸರನ್ನು ಇಡಲಾಗುವುದು. ಈ ಸಂಬಂಧ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮಂಡ್ಯದಲ್ಲಿರುವ ಒಂದು ಉದ್ಯಾನವನಕ್ಕೂ ಅವರ ಹೆಸರು ಇಡಲಾಗುವುದು ಎಂದು ಶಾಸಕ ರವಿ ಗಣಿಗ ಹೇಳಿದ್ದಾರೆ.
ಅಂತ್ಯಕ್ರಿಯೆ ಯಾವಾಗ?: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಪಾರ್ಥಿವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಹುಟ್ಟೂರು ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ (ನಾಳೆ) ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು ಎಂದು ಅವರ ಸಂಬಂಧಿಯೂ ಆದ ಡಿ.ಕೆ.ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಬುಧವಾರ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದಾದ್ಯಂತ ಮೂರು ದಿನ ಶೋಕಾಚಾರಣೆ ಮಾಡಲಾಗುವುದು. ಬುಧವಾರ ಬೆಳಿಗ್ಗೆ 8 ಗಂಟೆವರೆಗೂ ಎಸ್.ಎಂ. ಕೃಷ್ಣ ಅವರ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಎಸ್.ಎಂ.ಕೃಷ್ಣ ಅವರು ನನಗೆ ತಂದೆ ಸಮಾನರು. ನನ್ನ ಬದುಕಿನಲ್ಲಿ ಆಗಿರುವ ಬದಲಾವಣೆಗೆ ಅವರ ಮಾರ್ಗದರ್ಶನವೂ ಕಾರಣ. ನವಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ಎಸ್.ಎಂ.ಕೃಷ್ಣ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ, ಸ್ತ್ರೀಶಕ್ತಿ ಕಾರ್ಯಕ್ರಮ, ಯಶಸ್ವಿನಿ ಕಾರ್ಯಕ್ರಮ, ರೈತರ ಜಮೀನಿಗಾಗಿ ಭೂಮಿ ಆಪ್, ಬೆಂಗಳೂರನ್ನು ಐಟಿ ರಾಜಧಾನಿಯಾಗಿ ಮಾಡಿ ಬೆಂಗಳೂರನ್ನು ಜಾಗತಿಕ ಮಟ್ಟದಲ್ಲಿ ಮಿನುಗುವಂತೆ ಮಾಡಿದರು ಎಂದು ಡಿ.ಕೆ.ಶಿವಕುಮಾರ್ ಸ್ಮರಿಸಿದ್ದಾರೆ.
ದಕ್ಷ ಆಡಳಿತಕ್ಕೆ ಅವರು ಮಾದರಿಯಾಗಿದ್ದರು. ಬೆಂಗಳೂರು ಅಭಿವೃದ್ಧಿ, ಇಲ್ಲಿನ ಉದ್ಯೋಗ ಸೃಷ್ಟಿ ಸೇರಿದಂತೆ ಅವರ ಸಾಧನೆಗೆ ನಿಮ್ಮ ಕಣ್ಣುಗಳೇ ಸಾಕ್ಷಿ ಎಂದು ಶ್ಲಾಘಿಸಿದ್ದಾರೆ. ಇನ್ನು ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಯುವ ಸ್ಥಳವನ್ನು ಡಿ.ಕೆ.ಶಿವಕುಮಾರ್ ಪರಿಶೀಲನೆ ನಡೆಸಿದ್ದಾರೆ.
ಅಲ್ಲಿ ಅಂತ್ಯಕ್ರಿಯೆಗೆ ಆಗಬೇಕಾದ ವ್ಯವಸ್ಥೆಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಚಿವರಾದ ಚಲುವರಾಯಸ್ವಾಮಿ, ಶಾಸಕರಾದ ಉದಯ್ ಕದಲೂರು, ರವಿ ಗಣಿಗ, ರಮೇಶ್ ಬಂಡಿಸಿದ್ದೇಗೌಡ, ಎಂಎಲ್‌ಸಿ ದಿನೇಶ್ ಗೂಳಿಗೌಡ ಕೂಡ ಅಂತ್ಯಕ್ರಿಯೆ ಸ್ಥಳ ಪರಿಶೀಲಿಸಿ ಅಲ್ಲಿ ನಾಳೆಗೆ ಬೇಕಾದ ವ್ಯವಸ್ಥೆಗಳಿಗೆ ಸೂಚನೆ ನೀಡಿದ್ದಾರೆ.












Click it and Unblock the Notifications