ಕಲಬುರಗಿಯಲ್ಲಿ ಬಿಜೆಪಿಯ ಒಬಿಸಿ ಸಮಾವೇಶಕ್ಕೆ ವೇದಿಕೆ ಸಜ್ಜು, 4 ಸಾವಿರ ಬಸ್‌ಗಳ ವ್ಯವಸ್ಥೆ
ಕಲಬುರಗಿ, ಅಕ್ಟೋಬರ್, 29: ''ಕಲಬುರಗಿಯಲ್ಲಿ ಅಕ್ಟೋಬರ್ 30ರಂದು ಬಿಜೆಪಿ ಒಬಿಸಿ ಮೋರ್ಚಾ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಎರಡೂವರೆ ಲಕ್ಷ ಜನರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. 5 ರಿಂದ 6 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇವೆ. ಹಾಗೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜನರಿಗೆ 4 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ'' ಎಂದು ರಾಜ್ಯ ವಕ್ತಾರ ಮತ್ತು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ತಿಳಿಸಿದರು.
ಕಲಬುರಗಿಯಲ್ಲಿ ಮಾತನಾಡಿದ ಅವರು, ''ಸಮಾವೇಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು 3 ಸಾವಿರ ಕಾರ್ಯಕರ್ತರ ತಂಡವನ್ನು ನಿಯೋಜಿಸಲಾಗಿದೆ. 224 ವಿಧಾನಸಭಾ ಕ್ಷೇತ್ರಗಳ, 200ಕ್ಕೂ ಹೆಚ್ಚು ಜಾತಿಗಳ, ಒಬಿಸಿ ಸಮುದಾಯದ 5 ಲಕ್ಷಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು 4 ಸಾವಿರ ಬಸ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. 20 ಸಾವಿರ ಚತುಷ್ಚಕ್ರ ವಾಹನಗಳ ವ್ಯವಸ್ಥೆ ಮಾಡಿದ್ದೇವೆ. 200 ಹೆಕ್ಟೇರ್ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ, 50 ಕಲ್ಯಾಣಮಂಟಪದಲ್ಲಿ ಊಟ, ವಸತಿ, ಸ್ನಾನಕ್ಕೆ ವ್ಯವಸ್ಥೆ, ಜೇವರ್ಗಿ, ರಾಯಚೂರು ಸೇರಿ ಹತ್ತಿರದ ಪ್ರದೇಶಗಳಲ್ಲೂ ಅಗತ್ಯ ವ್ಯವಸ್ಥೆ ಮಾಡಿದ್ದೇವೆ'' ಎಂದು ತಿಳಿಸಿದರು.
ಸಮಾವೇಶಕ್ಕೆ ಸಜ್ಜಾದ ವೇದಿಕೆ
ಒಂದು ಸಾವಿರಕ್ಕೂ ಹೆಚ್ಚು ಜನ ಹಿಂದುಳಿದ ವರ್ಗಗಳ ನಾಯಕರು ಈಗಾಗಲೇ ಕಲಬುರಗಿಗೆ ಬಂದಿದ್ದು, ಅವರಿಗಾಗಿ ವಿವಿಧ ಹೋಟೆಲ್‍ಗಳಲ್ಲಿ ಒಂದು ಸಾವಿರ ಕೊಠಡಿ ವ್ಯವಸ್ಥೆ ಮಾಡಲಾಗಿದೆ. 8 ತಂಡಗಳು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ 1 ಸಾವಿರಕ್ಕೂ ಹೆಚ್ಚು ಸಭೆ ನಡೆಸಿ ಸಮಾವೇಶದ ಯಶಸ್ಸಿಗೆ ಶ್ರಮಿಸಿವೆ. 1 ಲಕ್ಷ ಬಿಜೆಪಿ ಧ್ವಜಗಳೊಂದಿಗೆ ನಗರದ ಅಲಂಕಾರ ನಡೆದಿದೆ. ಇದರಲ್ಲಿ ಕಲಬುರಗಿ ವಿಭಾಗದಿಂದ 2.5 ಲಕ್ಷ ಜನರು ಭಾಗವಹಿಸುತ್ತಾರೆ ಹಾಗೂ ರಾಜ್ಯದ ಇತರ ಭಾಗಗಳಿಂದ 2.5 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಲಿದ್ದಾರೆ ಎಂದರು.

ಅಕ್ಟೋಬರ್ 30ರಂದು ಒಬಿಸಿ ಸಮಾವೇಶ
ಅಕ್ಟೋಬರ್ 30ರಂದು ಒಬಿಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ಕೇಂದ್ರದ ಸಚಿವರು, ಹಿಂದುಳಿದ ವರ್ಗಗಳ ಸಚಿವರು, ಶಾಸಕರು, ಸಂಸದರು ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಹಾಗೂ 100ಕ್ಕೂ ಹೆಚ್ಚು ಜನ ಪ್ರಮುಖರು ವೇದಿಕೆಯಲ್ಲಿ ಇರುತ್ತಾರೆ ಎಂದರು.
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು ಅವರು ಈ ಬಗ್ಗೆ ಮಾತನಾಡಿ, ರಾಜ್ಯದ ಎಲ್ಲ 38 ಸಂಘಟನಾತ್ಮಕ ಜಿಲ್ಲೆಗಳು, ಎಲ್ಲ ಮಂಡಲಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿ ಸಮಾಜಕ್ಕೆ ಕೊಟ್ಟ ಕೊಡುಗೆ ಅನನ್ಯವಾಗಿದೆ. ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ, ಶಾಸಕ ಶಶಿಲ್ ನಮೋಶಿ ಅವರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಯನ್ನು ಗಮನಿಸಿ ಜನರು ಬಿಜೆಪಿಯತ್ತ ಇಲವು ತೋರಿಸುತ್ತಿದ್ದಾರೆ ಎಂದು.

ಈ ಸಂದರ್ಭದಲ್ಲಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಅವಿನಾಶ್ ಜಾಧವ್, ಮುಖಂಡರು ಸೇರಿದಂತೆ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.












Click it and Unblock the Notifications