Jayadeva hospital: 'ಕಲಬುರಗಿ ಜಯದೇವ ಆಸ್ಪತ್ರೆ ಯಡಿಯೂರಪ್ಪನವರ ಕನಸಿನ ಕೂಸು'
ಕಲಬುರಗಿಯಲ್ಲಿ 377 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಜಯದೇವ ಸರ್ಕಾರಿ ಹೃದ್ರೋಗ ಆಸ್ಪತ್ರೆ ಇಂದು ಉದ್ಘಾಟನೆಗೊಳ್ಳಲಿದೆ. ಕಲಬುರಗಿಯಲ್ಲಿ ವಿರಾಜಮಾನವಾಗಿ ತಲೆ ಎತ್ತಿರುವ ಜಯದೇವ ಹೃದ್ರೋಗ ಸಂಸ್ಥೆಯು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸು ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಕಲ್ಯಾಣ ಕರ್ನಾಟಕದ ಜನರು ಹೃದ್ರೋಗ ಸಂಬಂಧಿತ ಕಾಯಿಲೆಗಳ ಚಿಕಿತ್ಸೆಗೆ ದೂರದ ಬೆಂಗಳೂರಿಗೆ ಬರುವುದನ್ನು ತಪ್ಪಿಸಲು ಬಿ.ಎಸ್.ಯಡಿಯೂರಪ್ಪ ಅವರು ತಾವು ಮುಖ್ಯಮಂತ್ರಿ ಆಗಿದ್ದ ವೇಳೆ ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ಘಟಕ ಸ್ಥಾಪಿಸಲು ಅನುದಾನ ನೀಡಿ, ಶಂಕುಸ್ಥಾಪನೆಯನ್ನು ಸಹ ನೆರವೇರಿಸಿದ್ದರು ಎಂದು ಕಾಂಗ್ರೆಸ್ ಸರ್ಕಾರಕ್ಕೆ ತಿರುಗೇಟು ನೀಡಿದೆ.

ಆದರೆ ಇತರರ ಸಾಧನೆಯನ್ನು ತನ್ನ ಸಾಧನೆ ಎಂದು ಬಿಂಬಿಸಿಕೊಂಡು ಜನರಿಗೆ ಮಂಕುಬೂದಿ ಎರಚುವ ಕ್ರೆಡಿಟ್ ಕಳ್ಳ ಕಾಂಗ್ರೆಸ್ ಹಾಗೂ ಅದರ ನಾಯಕರು ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಸಂಸ್ಥೆ ಸ್ಥಾಪಿಸಿದ್ದು ತಮ್ಮ ಸಾಧನೆ ಎಂದು ಸುಳ್ಳಾಡುತ್ತಿದ್ದಾರೆ. ಟ್ರೋಲ್ ಮಿನಿಸ್ಟರ್ ಪ್ರಿಯಾಂಕಾ ಗಾಂಧಿ ಅವರೇ, ನಿಮ್ಮ ತಂದೆ ಮಲ್ಲಿಕಾರ್ಜುನ್ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು, ನೀವು 2016ರಲ್ಲಿ ಸಚಿವರಾದವರು. ಕಲ್ಬುರ್ಗಿಗೆ ತಮ್ಮಿಂದ ಏಕೆ ಇಂತಹ ಜನೋಪಯೋಗಿ ಯೋಜನೆಗಳು ಅನುಷ್ಠಾನವಾಗಿಲ್ಲ ಎಂಬುದರ ಫ್ಯಾಕ್ಟ್ ಚೆಕ್ ಮಾಡಿಸಿ? ಎಂದು ವ್ಯಂಗ್ಯ ಮಾಡಿದೆ.
ಆಸ್ಪತ್ರೆಯ ವಿಶೇಷತೆಗಳೇನು?: ಕಲಬುರಗಿಯಲ್ಲಿ 377 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಜಯದೇವ ಆಸ್ಪತ್ರೆಯನ್ನು ಇಂದು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ. ಹೈದರಾಬಾದ್-ಕರ್ನಾಟಕ ವಿಶೇಷ ಪ್ರಾತಿನಿಧ್ಯ 371J ದೊರೆತು ದಶಕ ಪೂರೈಸಿದ ನೆನಪಿಗಾಗಿ 7 ಐಸಿಯು ಕೊಠಡಿ, 4 ಜನರಲ್ ವಾರ್ಡ್, 13 ಸೆಮಿ ಸ್ಪೆಷಲ್ ವಾರ್ಡ್‌ಗಳನ್ನು ಒಳಗೊಂಡ 371 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದು ರಾಜ್ಯದ ಮೂರನೇ ಸರ್ಕಾರಿ ಹೃದ್ರೋಗ ಆಸ್ಪತ್ರೆಯಾಗಿ ಲೋಕಾರ್ಪಣೆಗೊಳ್ಳುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಲಕ್ಷಾಂತರ ಜನರಿಗೆ ಅನುಕೂಲವಾಗುವ ನಿರೀಕ್ಷೆಯಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೈದರಾಬಾದ್-ಕರ್ನಾಟಕ ವಿಶೇಷ ಸ್ಥಾನಮಾನ 371J ದೊರೆತು ದಶಕ ಪೂರೈಸಿದ ನೆನಪಿಗಾಗಿ ಈ ಹೃದ್ರೋಗ ಆಸ್ಪತ್ರೆಯು 371 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದೆ.
ನೂತನ ಜಯದೇವ ಆಸ್ಪತ್ರೆಯಲ್ಲಿ 3 ಕ್ಯಾಥಲ್ಯಾಬ್, ಮೂರು ಅಪರೇಷನ್ ಥಿಯೇಟರ್, ಒಂದು ಹೈಬ್ರಿಡ್ ಓ.ಟಿ ಇರಲಿದೆ. ಎಕ್ಸ್ರೇ, ಇ.ಎಂ.ಆರ್.ಐ., ಬ್ಲಡ್ ಬ್ಯಾಂಕ್ ಸೇವೆ ಲಭ್ಯವಿರಲಿದೆ. 105 ಐ.ಸಿ.ಯು ಬೆಡ್, 120 ಜನರಲ್ ಬೆಡ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯದೊಂದಿಗೆ ಬಿ.ಪಿ.ಎಲ್ ರೋಗಿಗಳಿಗೆ ಉಚಿತ ಮತ್ತು ಎ.ಪಿ.ಎಲ್. ರೋಗಿಗಳಿಗೆ ಶೇ.30ರ ರಿಯಾಯಿತಿ ದರದೊಂದಿಗೆ ಚಿಕಿತ್ಸೆ ಇಲ್ಲಿ ಸಿಗಲಿದೆ ಎಂದಿದ್ದಾರೆ.
ಬೆಂಗಳೂರು, ಮೈಸೂರು ಬಳಿಕ ರಾಜ್ಯದಲ್ಲಿ ಮೂರನೇ ಸ್ವಂತ ಕಟ್ಟಡವನ್ನು ಕಲಬುರಗಿಯಲ್ಲಿ ಈ ಆಸ್ಪತ್ರೆ ಹೊಂದಲಿದ್ದು, ಬೆಂಗಳೂರು ಬಿಟ್ಟರೆ ಕಲಬುರಗಿ ಆಸ್ಪತ್ರೆಯಲ್ಲಿ ವಸ್ಕುಲರ್ ಸರ್ಜರಿ ಸೇವೆ ನೀಡಲು ಉದ್ದೇಶಿಸಲಾಗಿದೆ. ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೊದಲನೇ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದು ಹೇಳಿದ್ದಾರೆ. ಕಲಬುರಗಿಯಲ್ಲಿ 377 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಜಯದೇವ ಹೃದ್ರೋಗ ಆಸ್ಪತ್ರೆಯು ಡಿಸೆಂಬರ್ 22 ಭಾನುವಾರದಂದು (ಇಂದು) ಲೋಕಾರ್ಪಣೆಗೊಳ್ಳಲಿದೆ.












Click it and Unblock the Notifications