Get Updates
Get notified of breaking news, exclusive insights, and must-see stories!

Jayanagar Elections : ಮತ್ತೆ ಬಿಜೆಪಿ ವಶವಾಗುತ್ತಾ ಬೆಂಗಳೂರಿನ ಜಯನಗರ ಕ್ಷೇತ್ರ?

ಬೆಂಗಳೂರು ನಗರದ ಯೋಜಿತವಾದ ಮತ್ತು ಪ್ರತಿಷ್ಠಿತ ಬಡಾವಣೆ ಜಯನಗರ. ನಗರದ ದಕ್ಷಿಣ ಭಾಗದಲ್ಲಿರುವ ವಿಧಾನಸಭಾ ಕ್ಷೇತ್ರ ಜಯನಗರ. ಕನ್ನಡಿಗರೇ ಬಹು ಸಂಖ್ಯಾತರಾಗಿರುವ ಈ ಕ್ಷೇತ್ರದಲ್ಲಿ ಆಸ್ಪತ್ರೆಗಳು, ವಿದ್ಯಾಸಂಸ್ಥೆಗಳು ಇವೆ. ಬೆಂಗಳೂರು ನಗರದಲ್ಲಿ ಶಾಪಿಂಗ್ ಮಾಡಲು ಇದು ಸಹ ಉತ್ತಮ ಜಾಗ. ನಮ್ಮ ಮೆಟ್ರೋ, ಬಿಎಂಟಿಸಿ ಬಸ್ ಮೂಲಕ ಸುಲಭವಾಗಿ ಜಯನಗರ ಸಂಪರ್ಕವನ್ನು ಹೊಂದಿದೆ. ವಿವಿಧ ಜಿಲ್ಲೆಗಳಿಗೆ ಸಂಚಾರ ನಡೆಸುವ ಕೆಎಸ್ಆರ್‌ಟಿಸಿ ಬಸ್‌ಗಳು ಸಹ ಜಯನಗರ ಟಿಟಿಎಂಸಿ ನಿಲ್ದಾಣದಿಂದ ಹೊರಡುತ್ತವೆ.

ಕ್ರೀಡೆ, ಚಿತ್ರರಂಗ, ಸಾಹಿತ್ಯ, ರಾಜಕೀಯ ಹೀಗೆ ವಿವಿಧ ಕ್ಷೇತ್ರದ ಗಣ್ಯರ ನಿವಾಸಗಳು ಜಯನಗರದ ವ್ಯಾಪ್ತಿಯಲ್ಲಿವೆ. ಚಿಕ್ಕ-ಚಿಕ್ಕ ರಸ್ತೆಗಳು, ಒಳಚರಂಡಿ ಸಮಸ್ಯೆ, ಆಗಾಗ ಕಾಡುವ ತ್ಯಾಜ್ಯ ವಿಲೇವಾರಿ ಸಮಸ್ಯೆ, ರಾಜಾಕಾಲುವೆ ಒತ್ತುವರಿ ಮುಂತಾದವುಗಳು ಇಲ್ಲಿನ ಸಮಸ್ಯೆಗಳು. ಚುನಾವಣೆ ಬಂದರೆ ಜಯನಗರದ ಲೆಕ್ಕಾಚಾರವೇ ಬೇರೆ. ಮೊದಲು ಕೈ ಭದ್ರಕೋಟೆಯಾಗಿದ್ದ ಜಯನಗರ ಮತ್ತೆ ಬಿಜೆಪಿ ಪಾಲಾಗಿತ್ತು. ಆದರೆ 2018ರಲ್ಲಿ ಮತ್ತೆ ಕ್ಷೇತ್ರವನ್ನು ಕಾಂಗ್ರೆಸ್ ವಶಕ್ಕೆ ಪಡೆದಿದೆ. ಹಾಲಿ ಶಾಸಕರು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿ.

jayanagar assembly constituency map

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಪಟ್ಟಾಭಿರಾಮನಗರ, ಬೈರಸಂದ್ರ, ಜಯನಗರ ಪೂರ್ವ, ಗುರಪ್ಪನಪಾಳ್ಯ, ಜೆಪಿ ನಗರ, ಸಾರಕ್ಕಿ, ಶಾಕಾಂಬರಿ ನಗರ ವಾರ್ಡ್‌ಗಳು ಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ಈ ವಾರ್ಡ್‌ಗಳ ಸದಸ್ಯರು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ವಿಧಾನಸಭೆ ಚುನಾವಣೆಯಲ್ಲಿಯೂ ಕಾರ್ಪೊರೇಟರ್‌ಗಳು ಟಿಕೆಟ್ ಆಕಾಂಕ್ಷಿಗಳು.

ಜಯನಗರ ರಾಜಕೀಯ ಚಿತ್ರಣ; 1989 ರಿಂದ 2008ರ ತನಕ ಜಯನಗರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪಾರುಪತ್ಯ ಸಾಧಿಸಿದ್ದರು ಅವರು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಹೋದರೂ ಜಯನಗರದ ಮೇಲೆ ಹಿಡಿತ ಉಳಿಸಿಕೊಂಡಿದ್ದಾರೆ. 2018ರ ಚುನಾವಣೆಯಲ್ಲಿ ಮೊದಲ ಪ್ರಯತ್ನದಲ್ಲೇ ಪುತ್ರಿ ಸೌಮ್ಯಾ ರೆಡ್ಡಿಯನ್ನು ಗೆಲ್ಲಿಸಿಕೊಂಡು ಬಂದಿದ್ದು ಇದಕ್ಕೆ ಉದಾಹರಣೆಯಾಗಿದೆ.

sowmya reddy mla

2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಮಲಿಂಗಾ ರೆಡ್ಡಿ 54,078 ಮತಗಳನ್ನು ಪಡೆದು ಜಯನಗರ ಕ್ಷೇತ್ರದಲ್ಲಿ ಗೆದ್ದಿದ್ದರು. 2008ರಲ್ಲಿ ಅವರು ಬಿಟಿಎಂ ಲೇಔಟ್‌ಗೆ ವಲಸೆ ಹೋದರು. ಸರಳ ವ್ಯಕ್ತಿತ್ವದ ಬಿಜೆಪಿಯ ದಿ. ವಿಜಯಕುಮಾರ್‌ 43,164 ಮತಗಳನ್ನು ಪಡೆದು ಜಯನಗರವನ್ನು ವಶಕ್ಕೆ ಪಡೆದರು. ಕಾಂಗ್ರೆಸ್‌ನ ಎಂ. ಸುರೇಶ್ 20,570 ಮತಗಳನ್ನು ಮಾತ್ರ ಪಡೆದರು. ಪಕ್ಷೇತರ ಅಭ್ಯರ್ಥಿಯಾಗಿದ್ದ ಕೆ. ಎಸ್. ಸಮೀವುಲ್ಲಾ 11,882 ಮತಗಳನ್ನು ಪಡೆದಿದ್ದರು. ಸುಮಾರು ಎರಡೂವರೆ ಲಕ್ಷ ಮತದಾರರು ಇರುವ ಜಯನಗರದಲ್ಲಿ ಮುಸ್ಲಿಮರು ಸುಮಾರು 65 ಸಾವಿರ ಇದ್ದಾರೆ. ಆದ್ದರಿಂದ ಅವರು ನಿರ್ಣಾಯಕರಾಗುತ್ತಾರೆ.

2013ರ ಚುನಾವಣೆಯಲ್ಲಿ ಬಿಜೆಪಿಯ ಬಿ. ಎನ್. ವಿಜಯಕುಮಾರ್ ಮತ್ತೆ 43,990 ಮತಗಳನ್ನು ಪಡೆದು ಗೆದ್ದರು. ಈ ಮೂಲಕ ಸತತ ಎರಡು ಸಲ ಜಯನಗರದಲ್ಲಿ ಬಿಜೆಪಿ ಬಾವುಟ ಹಾರಿಸಿದರು. ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಎಂ. ಸಿ. ವೇಣುಗೋಪಾಲ್ 31,678 ಮತಗಳನ್ನು ಪಡೆದು ಸೋಲು ಕಂಡರು. ಜೆಡಿಎಸ್‌ನ ಕೆ. ಎಸ್. ಸಮೀವುಲ್ಲಾ 12,097 ಮತ ಪಡೆದು ಮೂರನೇ ಸ್ಥಾನ ಪಡೆದರು.

2018ರ ಚುನಾವಣೆಯಲ್ಲಿಯೂ ಬಿಜೆಪಿ ಬಿ. ಎನ್. ವಿಜಯಕುಮಾರ್‌ಗೆ ಟಿಕೆಟ್ ನೀಡಿತು. ಚುನಾವಣಾ ಪ್ರಚಾರದಲ್ಲಿಯೂ ಅವರು ತೊಡಗಿದ್ದರು. ಆದರೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಹೃದಯಾಘಾತದಿಂದ ಸಾವನ್ನಪ್ಪಿದರು. ಚುನಾವಣಾ ಆಯೋಗ ಚುನಾವಣೆಯನ್ನು ಒಂದು ತಿಂಗಳು ಮುಂದೂಡಿತು. ಅಷ್ಟರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತ್ತು. ಬಿಜೆಪಿ ವಿಜಯಕುಮಾರ್ ಸಹೋದರ ಪ್ರಹ್ಲಾದ್‌ಗೆ ಟಿಕೆಟ್ ನೀಡಿ, ಅನುಕಂಪದ ದಾಳ ಉರುಳಿಸಿತು. ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರೂ ಆಗಿದ್ದ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ ರೆಡ್ಡಿಗೆ ಟಿಕೆಟ್ ಕೊಡಿಸಿದರು. ಜೆಡಿಎಸ್‌ ಅಭ್ಯರ್ಥಿಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ನೋಡಿಕೊಂಡರು. ಪರಿಣಾಮ ಸೌಮ್ಯಾರೆಡ್ಡಿ 54,458 ಮತಗಳನ್ನು ಪಡೆದು ಗೆದ್ದರು. ಬಿಜೆಪಿಯ ಬಿ. ಎನ್. ಪ್ರಹ್ಲಾದ್ 51,571 ಮತಗಳನ್ನು ಪಡೆದು ಸೋತರು. ಜಯನಗರ ಮತ್ತೆ ಕಾಂಗ್ರೆಸ್ ವಶಕ್ಕೆ ಬಂದಿತು.

Jayanagar Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಸೌಮ್ಯಾ ರೆಡ್ಡಿ (ಕಾಂಗ್ರೆಸ್) 54,458 ಬಿ. ಎನ್. ಪ್ರಹ್ಲಾದ್ (ಬಿಜೆಪಿ) 51,571
2013 ಬಿ. ಎನ್. ವಿಜಯಕುಮಾರ್ (ಬಿಜೆಪಿ) 43,990 ಎಂ. ಸಿ. ವೇಣುಗೋಪಾಲ್ (ಕಾಂಗ್ರೆಸ್) 31,678
2008 ಬಿ. ಎನ್. ವಿಜಯಕುಮಾರ್ (ಬಿಜೆಪಿ) 43,164 ಎಂ. ಸುರೇಶ್ (ಕಾಂಗ್ರೆಸ್) 20,570

ಈ ಬಾರಿಯ ಚುನಾವಣೆಗೆ ಕಾಂಗ್ರೆಸ್ ಮಾರ್ಚ್ 25ರಂದು 124 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದೆ. ಜಯನಗರ ಕ್ಷೇತ್ರಕ್ಕೆ ಹಾಲಿ ಶಾಸಕಿ ಸೌಮ್ಯಾ ರೆಡ್ಡಿಗೆ ಟಿಕೆಟ್ ನೀಡಲಾಗಿದೆ. ಆದರೆ ಈ ಬಾರಿ ಜೆಡಿಎಸ್‌ ಬೆಂಬಲ ಸಿಗುವುದಿಲ್ಲ. ಪಕ್ಷ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಆದರೆ ಕಗ್ಗಂಟಾಗಿರುವುದು ಬಿಜೆಪಿ ಟಿಕೆಟ್. ಕಳೆದ ಚುನಾವಣೆಯಲ್ಲಿ ಸೋತ ಬಿ. ಎನ್. ಪ್ರಹ್ಲಾದ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಅವರೊಬ್ಬರೇ ಅಲ್ಲ, ಬಿಬಿಎಂಪಿಯ ಮಾಜಿ ಕಾರ್ಪೊರೇಟರ್‌ಗಳು ಟಿಕೆಟ್ ಬಯಸಿದ್ದಾರೆ. ಸಿ. ಕೆ. ರಾಮಮೂರ್ತಿ, ಎನ್. ಆರ್. ರಮೇಶ್, ಎಸ್. ಕೆ. ನಟರಾಜ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕಂದಾಯ ಸಚಿವ ಆರ್. ಅಶೋಕ ಪ್ರಭಾವ ಇಲ್ಲಿ ಕೆಲಸ ಮಾಡುತ್ತದೆ. ಅವರು ಹೇಳುವ ಅಭ್ಯರ್ಥಿಗೆ ಟಿಕೆಟ್ ಸಿಗಲಿದೆ ಎಂಬುದು ಪಕ್ಷದೊಳಗಿನ ಮಾತು. ಆದರೆ ಅಭ್ಯರ್ಥಿ ಯಾರು? ಎಂದು ತಿಳಿಯಲು ಪಟ್ಟಿ ಬಿಡುಗಡೆ ಆಗುವ ತನಕ ಕಾಯಬೇಕಿದೆ.

ಇನ್ನು ಜೆಡಿಎಸ್ ವಿಚಾರಕ್ಕೆ ಬರುವುದಾದರೆ ಕಾಳೇಗೌಡ ಕಳೆದ ಬಾರಿ ಪಕ್ಷದ ಅಭ್ಯರ್ಥಿಯಾಗಿದ್ದರು. ಪ್ರಚಾರವನ್ನು ಆರಂಭಿಸಿದ್ದರು, ಆದರೆ ವರಿಷ್ಠರ ತೀರ್ಮಾನದಂತೆ ಅಂತಿಮವಾಗಿ ಸೌಮ್ಯಾ ರೆಡ್ಡಿಗೆ ಬೆಂಬಲ ಘೋಷಣೆ ಮಾಡಿದರು. 2013ರಲ್ಲಿ ಕೆ. ಎಸ್. ಸಮೀವುಲ್ಲಾ 12,097 ಮತ ಪಡೆದಿದ್ದರು. 2008ರಲ್ಲಿ ನಾರಾಯಣ ರಾಜು ಕೆ. 10,444 ಮತಗಳನ್ನು ಪಡೆದಿದ್ದರು. ಈ ಬಾರಿ ಜೆಡಿಎಸ್‌ ಯಾರಿಗೂ ಬೆಂಬಲ ಕೊಡುವುದಿಲ್ಲ. ಆದರೆ ಅಭ್ಯರ್ಥಿ ಯಾರು?. ಈಗಾಗಲೇ ಚುನಾವಣೆಗೆ 93 ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಪಕ್ಷ ಜಯನಗರಕ್ಕೆ ಅಭ್ಯರ್ಥಿ ಹೆಸರಿಸಿಲ್ಲ. ಉಳಿದಂತೆ ಕೆಆರ್‌ಎಸ್ ಪಕ್ಷದ ರವಿಕೃಷ್ಣಾ ರೆಡ್ಡಿ, ಆಮ್ ಆದ್ಮಿ ಪಕ್ಷ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಗಳು ಜಯನಗರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯುವ ನಿರೀಕ್ಷೆ ಇದೆ.

ಜಯನಗರ ಕ್ಷೇತ್ರದ ಒಟ್ಟು ಮತದಾರರು

ಕ್ಷೇತ್ರದ ಒಟ್ಟು ಮತದಾರರು 2,01,625
ಪುರುಷ ಮತದಾರರು 1,01,537
ಮಹಿಳಾ ಮತದಾರರು 1,00,073

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+