ಹೊಸ ಜಾಗತಿಕ ಮಧ್ಯಸ್ಥಿಕೆದಾರನ ಉಗಮ: ಬ್ರಿಕ್ಸ್ ಮತ್ತು ಜಿ7 ಹಿತಾಸಕ್ತಿಗಳ ನಡುವೆ ಸಮತೋಲನ ತರುತ್ತಿರುವ ಭಾರತ
ಬ್ರಿಕ್ಸ್ ಒಕ್ಕೂಟದಲ್ಲಿ ಭಾರತ ನಿರ್ವಹಿಸುತ್ತಿರುವ ಪಾತ್ರ ಭೌಗೋಳಿಕ ರಾಜಕಾರಣದಲ್ಲಿ ಅದರ ಪಾತ್ರದ ಮಹತ್ವವನ್ನು ತೋರಿದೆ. ಭಾರತ ಅತ್ಯಂತ ಕೌಶಲಯುತವಾಗಿ ಚೀನಾ, ರಷ್ಯಾ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ದೇಶಗಳೊಡನೆ ಉತ್ತಮ ಸಂಬಂಧವನ್ನು ನಿರ್ವಹಿಸುತ್ತಿದ್ದು, ಇದೇ ಸಂದರ್ಭದಲ್ಲಿ ಶಕ್ತಿಶಾಲಿ ಪಾಶ್ಚಾತ್ಯ ರಾಷ್ಟ್ರಗಳು, ಕೆನಡಾ ಹೊರತುಪಡಿಸಿ ಇತರ ಜಿ7 ರಾಷ್ಟ್ರಗಳ ಜೊತೆಗೆ ಉತ್ತಮ ಬಾಂಧವ್ಯವನ್ನು ಸಾಧಿಸಿದೆ. ಪಾಶ್ಚಾತ್ಯ ದೇಶಗಳಿಂದ ಹೆಚ್ಚಿನ ಟೀಕೆಯನ್ನು ಎದುರಿಸದೆಯೇ ಚೀನಾ, ರಷ್ಯಾದಂತಹ ದೇಶಗಳೊಡನೆ ವ್ಯವಹರಿಸುವ ಭಾರತದ ಸಾಮರ್ಥ್ಯವೇ ಭೌಗೋಳಿಕವಾಗಿ ಭಾರತ ಎದ್ದುಕಾಣುವಂತೆ ಮಾಡಿದೆ. ಇದರ ಪರಿಣಾಮವಾಗಿ, ಭಾರತ ಜಾಗತಿಕ ರಾಜತಾಂತ್ರಿಕತೆಯ ವಿಭಿನ್ನ ಶಕ್ತಿಗಳ ನಡುವೆ ಸೇತುವೆಯಾಗಿ ರೂಪು ತಳೆದಿದೆ.
ಇತ್ತೀಚೆಗೆ ರಷ್ಯಾದ ಕಜಾ಼ನ್‌ನಲ್ಲಿ ನಡೆದ ಬ್ರಿಕ್ಸ್ ಸಮಾವೇಶ ಜಾಗತಿಕ ರಾಜಕಾರಣದಲ್ಲಿ ಭಾರತದ ವಿಶಿಷ್ಟ ಪಾತ್ರಕ್ಕೆ ಸಾಕ್ಷಿಯಾಯಿತು. ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಇತರ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಜಾಗತಿಕ ಶಾಂತಿ ಮತ್ತು ಸ್ಥಿರತೆ ಕಾಪಾಡುವಲ್ಲಿ ಭಾರತದ ನಿರಂತರ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಪ್ರಸಿದ್ಧ ಭೌಗೋಳಿಕ ರಾಜಕಾರಣದ ತಜ್ಞರಾದ ಇಯಾನ್ ಬ್ರೆಮ್ಮರ್ ಅವರು ಗ್ಲೋಬಲ್ ಸೌತ್‌ನಲ್ಲಿ ಭಾರತದ ನಾಯಕತ್ವ ಮತ್ತು ಚೀನಾದೊಡನೆ ಸ್ಥಿರ ಸಂಬಂಧ ನಿರ್ವಹಿಸುವ ಭಾರತದ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಜಾಗತಿಕ ನಾಯಕರೊಡನೆ ಪ್ರಮುಖ ವಿಚಾರಗಳ ಕುರಿತು ಸಮಾಲೋಚನೆ ನಡೆಸಿದ್ದು, ಇದು ಭಾರತದ ರಾಜತಾಂತ್ರಿಕ ಪ್ರಯತ್ನಗಳನ್ನು ತೆರೆದಿಟ್ಟಿತು. ಚೀನಾದೊಡನೆ ಕಳೆದ ನಾಲ್ಕು ವರ್ಷಗಳಿಂದ ಭಾರತದ ಸಂಬಂಧ ಹದಗೆಟ್ಟಿತ್ತು. ಆದ್ದರಿಂದ, ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಡನೆ ಮೋದಿ ನಡೆಸಿದ ಮಾತುಕತೆ ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು. ಇದು ಜಾಗತಿಕ ಮಟ್ಟದಲ್ಲಿ, ಅದರಲ್ಲೂ ಚೀನಾದಂತಹ ಪ್ರಮುಖ ಶಕ್ತಿಯೊಡನೆ ತನ್ನ ಸಂಬಂಧವನ್ನು ಸಮರ್ಥವಾಗಿ ನಿರ್ವಹಿಸುವ ಭಾರತದ ಇಚ್ಛೆಯನ್ನು ಪ್ರಕಟಿಸಿತು.
ಭಾರತ ಮತ್ತು ಚೀನಾಗಳ ನಡುವಿನ ಮಿಲಿಟರಿ ಉದ್ವಿಗ್ನತೆಯನ್ನು ಶಮನಗೊಳಿಸಲು ಈಗಾಗಲೇ ಮಿಲಿಟರಿ ಕಮಾಂಡರ್‌ಗಳ ಮಟ್ಟದಲ್ಲಿ 30 ಸುತ್ತಿನ ಮಾತುಕತೆಗಳು ನಡೆದಿದ್ದವು. ಇಂತಹ ಸನ್ನಿವೇಶದಲ್ಲಿ ಉಭಯ ರಾಷ್ಟ್ರಗಳ ನಾಯಕರ ನಡುವೆ ಸಮಾಲೋಚನೆ ನಡೆದಿದೆ. ಇದು ಜಾಗತಿಕ ಮಧ್ಯಸ್ಥಿಕೆದಾರನ ಪಾತ್ರ ನಿರ್ವಹಿಸುತ್ತಲೇ, ತನ್ನ ಉತ್ತರದ ನೆರೆ ರಾಷ್ಟ್ರದೊಡನೆ ಉದ್ವಿಗ್ನತೆ ಶಮನಗೊಳಿಸಲು ಭಾರತದ ಪ್ರಯತ್ನಕ್ಕೆ ಬೆಳಕು ಚೆಲ್ಲಿದೆ.
ರಷ್ಯಾ ಪರ ಮತ್ತು ಉಕ್ರೇನ್ ಪರ ಶಕ್ತಿಗಳು ಪ್ರಸ್ತುತ ಯುದ್ಧಕ್ಕೆ ಒಂದು ಪರಿಹಾರ ಕಂಡುಕೊಳ್ಳಲು ಭಾರತದತ್ತ ಮುಖ ಮಾಡಿವೆ. ಇದೇ ವೇಳೆ ಭಾರತ ತನ್ನ ರಾಜತಾಂತ್ರಿಕ ಜವಾಬ್ದಾರಿಗಳನ್ನು ಸಮತೋಲನದಿಂದ ನಿರ್ವಹಿಸುತ್ತಿದೆ. ಬಹುಶಃ ರಷ್ಯಾ ಮತ್ತು ಉಕ್ರೇನ್ ಎರಡೂ ದೇಶಗಳಲ್ಲೂ ಸಮಾನ ಗೌರವ ಮತ್ತು ಮಹತ್ವದ ಸ್ವಾಗತ ಪಡೆದ ಏಕೈಕ ಜಾಗತಿಕ ನಾಯಕ ನರೇಂದ್ರ ಮೋದಿ ಎನ್ನಬಹುದೇನೋ.
ಬ್ರಿಕ್ಸ್ ಶೃಂಗಸಭೆಯಲ್ಲಿ ಮೋದಿಯವರು ಇರಾನ್ ಅಧ್ಯಕ್ಷರಾದ ಮಸೂದ್ ಪೆಜೆಶ್ಕಿಯಾನ್ ಅವರನ್ನೂ ಭೇಟಿಯಾಗಿ, ಜಾಗತಿಕ ಶಾಂತಿ ಸ್ಥಾಪನೆಗೆ ಭಾರತದ ಬದ್ಧತೆಯನ್ನು ತಿಳಿಸಿದರು. ಪಾಕಿಸ್ತಾನಕ್ಕೆ ಚೀನಾ ಬೆಂಬಲ ನೀಡುತ್ತಿರುವುದನ್ನು ಉದ್ದೇಶಿಸಿಯೇ ಮಾತನಾಡಿದಂತೆ ಕಂಡ ಮೋದಿಯವರು, ಭಯೋತ್ಪಾದನೆಗೆ ಸಂಬಂಧಿಸಿದಂತೆ ದ್ವಂದ್ವದ ನಿಲುವುಗಳನ್ನು ನಿಲ್ಲಿಸಬೇಕು ಎಂದು ಕರೆ ನೀಡಿದರು. ಭಯೋತ್ಪಾದಕರನ್ನು ಬೆಂಬಲಿಸುವ, ಭಯೋತ್ಪಾದಕರ ರಫ್ತು ನಡೆಸುತ್ತಿರುವ, ಆ ಮೂಲಕ ಭಾರತಕ್ಕೆ ಅಪಾಯ ತಂದೊಡ್ಡುತ್ತಿರುವ ಪಾಕಿಸ್ತಾನವನ್ನು ಬೆಂಬಲಿಸುವ, ಸಮರ್ಥಿಸುವ ದೇಶಗಳನ್ನು ಟೀಕಿಸಲೂ ಮೋದಿಯವರು ಮರೆಯಲಿಲ್ಲ.
2024ರ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತ ಸಕ್ರಿಯ ಪಾತ್ರ ವಹಿಸಿರುವುದು ಭಾರತವನ್ನು ಜಾಗತಿಕ ಆರ್ಥಿಕ ಮತ್ತು ರಾಜಕೀಯ ಬೆಳವಣಿಗೆಗಳ ಮೇಲೆ ಪ್ರಭಾವ ಬೀರುವ ಸ್ಥಾನದಲ್ಲಿ ಇರಿಸಿದೆ. ಈ ಮೂಲಕ, ಭಾರತ ಅಂತಾರಾಷ್ಟ್ರೀಯ ಸಂಬಂಧಗಳು ಮತ್ತು ಜಾಗತಿಕ ಆರ್ಥಿಕತೆಯನ್ನು ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿರುವಂತೆ ತೋರುತ್ತಿದೆ. ಬ್ರಿಕ್ಸ್ ಒಕ್ಕೂಟದಲ್ಲಿ ಅತ್ಯಂತ ಕ್ಷಿಪ್ರವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತ, ತನ್ನ ಶಕ್ತಿಗಳಾದ ಡಿಜಿಟಲ್ ತಂತ್ರಜ್ಞಾನ, ಸುಸ್ಥಿರ ಅಭಿವೃದ್ಧಿ, ಹಾಗೂ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಗಳನ್ನು ಬಳಸಿ ನಾಯಕತ್ವ ವಹಿಸಲು ತಾನು ಸಿದ್ಧ ಎಂದು ಸ್ಪಷ್ಟವಾಗಿ ಸೂಚಿಸಿದೆ.
ಇದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಪರಿಣಾಮ ಬೀರಲು ನೆರವಾಗಲಿದೆ. ಈ ಬಾರಿಯ ಶೃಂಗಸಭೆಯನ್ನು 'ಜಾಗತಿಕ ಅಭಿವೃದ್ಧಿ ಮತ್ತು ಭದ್ರತೆಗಾಗಿ ಬಹುಪಕ್ಷೀಯತೆಯನ್ನು ಬಲಪಡಿಸುವುದು' ಎಂಬ ಧ್ಯೇಯದಡಿ ನಡೆಸಲಾಗಿದ್ದು, ಇದು ಭಾರತದ ವಿದೇಶಾಂಗ ನೀತಿಗೂ ಮುಖ್ಯವಾಗಿದೆ. ಇದು ಭಾರತಕ್ಕೆ ರಷ್ತಾದೊಡನೆ ತನ್ನ ಸಂಬಂಧವನ್ನು ಬಲಪಡಿಸಿ, ಚೀನಾದೊಡನೆ ಮಾತುಕತೆಯಲ್ಲಿ ತೊಡಗಿ, ಜಾಗತಿಕ ಆಡಳಿತ ಸುಧಾರಣೆಯಲ್ಲಿ ಪಾತ್ರ ನಿರ್ವಹಿಸಲು ಅನುಕೂಲ ಕಲ್ಪಿಸಲಿದೆ. ಭಾರತ ಹೊಂದಿರುವ ಅಲಿಪ್ತ ನೀತಿ ಭಾರತಕ್ಕೆ ರಷ್ಯಾದ ಜೊತೆಗೂ, ಪಾಶ್ಚಾತ್ಯ ದೇಶಗಳ ಜೊತೆಗೂ ಉತ್ತಮ ಬಾಂಧವ್ಯ ಹೊಂದಲು ಪೂರಕವಾಗಿದ್ದು, ಜಾಗತಿಕ ಬಿಕ್ಕಟ್ಟುಗಳಲ್ಲಿ ಮಧ್ಯಸ್ಥಿಕೆದಾರನಾಗಲೂ ಅನುವು ಮಾಡಿಕೊಟ್ಟಿದೆ.
ಉಕ್ರೇನ್‌ನಲ್ಲಿ ರಷ್ಯಾದ ಯುದ್ಧ ಇನ್ನೂ ಮುಂದುವರಿದಿದ್ದು, ಜಾಗತಿಕ ಶಕ್ತಿಗಳು ತಮ್ಮ ಮೈತ್ರಿಕೂಟದ ಕುರಿತು ಮರು ಆಲೋಚನೆ ನಡೆಸುತ್ತಿವೆ. ರಾಜತಾಂತ್ರಿಕತೆ ಮತ್ತು ಮುಕ್ತ ಮಾತುಕತೆಗಳ ಕುರಿತು ಗಮನ ಹರಿದಿರುವುದರಿಂದ, ಪ್ರಸ್ತುತ ಯುದ್ಧಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಭಾರತದ ಪಾತ್ರದ ಕುರಿತು ಜಗತ್ತಿನ ಗಮನ ಸೆಳೆದಿದೆ.
ರಷ್ಯಾದ ಸಂಪನ್ಮೂಲ ಭರಿತವಾದ ಆರ್ಕ್‌ಟಿಕ್ ಮತ್ತು ನಾರ್ದನ್ ಸೀ ರೂಟ್ (ಎನ್ಎಸ್ಆರ್) ನಲ್ಲಿ ಭಾರತದ ಪಾಲ್ಗೊಳ್ಳುವಿಕೆಯೂ ಮುಖ್ಯ ಮಾತುಕತೆಯ ವಿಚಾರವಾಗಿದೆ. ಎನ್ಎಸ್ಆರ್ ಮೂಲಕ ಭಾರತ - ರಷ್ಯಾದ ಸರಕು ಸಾಗಾಣಿಕೆ, ಆರ್ಕ್‌ಟಿಕ್ ಹಡಗುಗಳ ಜಂಟಿ ನಿರ್ಮಾಣ, ಮತ್ತು ಧ್ರುವ ಪ್ರದೇಶಗಳ ನೀರಿನಲ್ಲಿ ಸಂಚರಿಸುವ ಕುರಿತು ಭಾರತೀಯ ನಾವಿಕರಿಗೆ ತರಬೇತಿ ನೀಡುವಂತಹ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಭಾರತ - ರಷ್ಯಾ ಜಂಟಿ ಕ್ರಿಯಾತ್ಮಕ ತಂಡವನ್ನು ರಚಿಸಲಾಗಿದೆ.
ಬ್ರಿಕ್ಸ್ ಸಮಾವೇಶದಲ್ಲಿ ನಡೆದ ಭದ್ರತಾ ಮಾತುಕತೆಗಳು ಭಯೋತ್ಪಾದನಾ ನಿಗ್ರಹ ಮತ್ತು ಪ್ರಾದೇಶಿಕ ಸ್ಥಿರತೆಯತ್ತ ಗಮನ ಹರಿಸಿದ್ದವು. ಹೆಚ್ಚಿನ ಅಂತಾರಾಷ್ಟ್ರೀಯ ಸಹಕಾರ ಸಾಧಿಸುವ ನಿಟ್ಟಿನಲ್ಲಿ ಭಾರತ ಬ್ರಿಕ್ಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತ ಮತ್ತು ಏಷ್ಯಾಗೆ ಮಾರಕವಾಗಿರುವ ಭಯೋತ್ಪಾದನೆಯ ನಿಗ್ರಹಕ್ಕೆ, ಅದರಲ್ಲೂ ಗಡಿಯಾಚೆಗಿನ ಭಯೋತ್ಪಾದನೆ ತಡೆಯುವ ನಿಟ್ಟಿನಲ್ಲಿ ಮೋದಿಯವರು ಉತ್ತಮ ಗುಪ್ತಚರ ಹಂಚಿಕೆಯ ವ್ಯವಸ್ಥೆ ಜಾರಿಗೆ ತರಬೇಕು ಎಂದು ಕರೆ ನೀಡಿದ್ದಾರೆ.
ಬ್ರಿಕ್ಸ್ 2024ರಲ್ಲಿ ಭಾರತದ ನಾಯಕತ್ವ ಪೂರ್ವ ಮತ್ತು ಪಶ್ಚಿಮದ ನಡುವೆ ಒಂದು ಪ್ರಮುಖ ಕೊಂಡಿಯಾಗುವ ಸಾಧ್ಯತೆಗಳನ್ನು ತೋರಿದೆ. ತನ್ನ ಭೌಗೋಳಿಕ ರಾಜಕಾರಣದ ಸ್ಥಾನ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಮೂಲಕ, ಭಾರತ ಜಾಗತಿಕ ಸಹಕಾರ ಮತ್ತು ಮಾತುಕತೆಯನ್ನು ಉತ್ತೇಜಿಸುತ್ತಿದೆ. ಕೆನಡಾವನ್ನು ಹೊರತುಪಡಿಸಿ, ಇತರ ಎಲ್ಲ ಜಿ7 ರಾಷ್ಟ್ರಗಳೊಡನೆ ಭಾರತ ಉತ್ತಮ ಬಾಂಧವ್ಯ ಹೊಂದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಪ್ರಾದೇಶಿಕ ಸ್ಥಿರತೆ, ಭದ್ರತಾ ಸಹಯೋಗ, ಉಗ್ರ ನಿಗ್ರಹ ಮತ್ತು ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಭದ್ರತೆಯಂತಹ ವಿಚಾರಗಳಲ್ಲಿ ಭಾರತದ ಕಾರ್ಯತಂತ್ರದ ಗುರಿಗಳು ಜಿ7ರ ಗುರಿಗಳಿಗೆ ಪೂರಕವಾಗಿವೆ.
ಕೆನಡಾದಲ್ಲಿದ್ದ ಖಲಿಸ್ತಾನಿ ಭಯೋತ್ಪಾದಕ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಆರೋಪ ಹೊರಿಸಿದ ಬಳಿಕ ಎರಡು ದೇಶಗಳ ನಡುವಿನ ಸಂಬಂಧ ಹಳಸತೊಡಗಿತ್ತು. ಈ ರಾಜತಾಂತ್ರಿಕ ಬಿಕ್ಕಟ್ಟು ವಿದ್ಯಾರ್ಥಿಗಳ ವಲಸೆ ಮತ್ತು ಉಭಯ ದೇಶಗಳ ನಡುವಿನ ವ್ಯಾಪಾರಕ್ಕೂ ಘಾಸಿ ಉಂಟುಮಾಡಿದೆ. ಇತರ ಪಾಶ್ಚಾತ್ಯ ದೇಶಗಳಿಂದ ಯಾವುದೇ ಅಡ್ಡಿ ಎದುರಾಗದಿರುವ ಕಾರಣ, ಭಾರತ ಇತರ ಜಿ7 ದೇಶಗಳೊಡನೆ ಉತ್ತಮ ಸಂಬಂಧ ಮುಂದುವರಿಸಿದೆ.
ಅಕ್ಟೋಬರ್ 7, 2023ರಿಂದ ಆರಂಭಗೊಂಡ ಗಾಜಾ ಕದನದಂತಹ ಜಾಗತಿಕ ಚಕಮಕಿಗಳನ್ನು ಭಾರತ ಜಾಗರೂಕವಾಗಿ, ಮತ್ತು ಸಮತೋಲನದಿಂದ ನಿರ್ವಹಿಸುತ್ತಿರುವುದು ಭಾರತದ ರಾಜತಾಂತ್ರಿಕ ನಿಲುವನ್ನು ಪ್ರತಿನಿಧಿಸಿದೆ. ಎರಡೂ ಬದಿಗಳು ಸಂಯಮ ವಹಿಸಬೇಕು ಮತ್ತು ಮಾತುಕತೆಗಳ ಮೂಲಕ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸುತ್ತಿರುವ ಭಾರತದ ನಿಲುವುಗಳು ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಹೆಚ್ಚುತ್ತಿರುವ ಭಾರತದ ಪಾತ್ರ ಮತ್ತು ಬೆಳೆಯುತ್ತಿರುವ ಭಾರತದ ವಿದೇಶಾಂಗ ನೀತಿಯನ್ನು ತೋರಿವೆ. ಪ್ಯಾಲೆಸ್ತೀನಿಗೆ ತನ್ನ ದೀರ್ಘಕಾಲೀನ ಬೆಂಬಲವನ್ನು ಮುಂದುವರಿಸುತ್ತಾ, ಅದೇ ವೇಳೆ ಇಸ್ರೇಲ್ ಜೊತೆಗೂ ಬಲವಾದ ಬಾಂಧವ್ಯ ಸಾಧಿಸುವ ಮೂಲಕ ಭಾರತ ತಾನು ಸಂಕೀರ್ಣ ಭೌಗೋಳಿಕ ರಾಜಕಾರಣದ ಸನ್ನಿವೇಶವನ್ನು ಹೇಗೆ ನಿಭಾಯಿಸಬಲ್ಲೆ ಎಂದು ಸಾಬೀತುಪಡಿಸಿದೆ. ಇಂತಹ ಕ್ರಮಗಳು ಸೂಕ್ಷ್ಮ ಅಂತಾರಾಷ್ಟ್ರೀಯ ಸಂಬಂಧಗಳನ್ನು ನಿಭಾಯಿಸುವ ಭಾರತದ ಕೌಶಲಗಳನ್ನು ತೋರಿವೆ.
ಒಟ್ಟಾರೆಯಾಗಿ, ಬ್ರಿಕ್ಸ್ 2024ರಲ್ಲಿ ಭಾರತದ ನಾಯಕತ್ವ ತನ್ನ ವಿಶಿಷ್ಟವಾದ ಭೌಗೋಳಿಕ ರಾಜಕಾರಣದ ಪಾತ್ರವನ್ನು ಪ್ರಕಟಪಡಿಸಿದೆ. ಭಾರತ ಅತ್ಯಂತ ಕುಶಲವಾಗಿ ಚೀನಾ, ರಷ್ಯಾ ಮತ್ತು ಗ್ಲೋಬಲ್ ಸೌತ್ ಜೊತೆಗೆ ತನ್ನ ಸಂಬಂಧವನ್ನು ನಿಭಾಯಿಸುತ್ತಾ, ಇದೇ ವೇಳೆ ಕೆನಡಾವನ್ನು ಹೊರತುಪಡಿಸಿ, ಜಿ7 ಜೊತೆಗೆ ಉತ್ತಮ ಬಾಂಧವ್ಯವನ್ನು ಸಾಧಿಸಿದೆ. ಪಾಶ್ಚಾತ್ಯ ದೇಶಗಳಿಂದ ಹೆಚ್ಚಿನ ವಿರೋಧವಿಲ್ಲದೆ, ಜಾಗತಿಕವಾಗಿ ತೊಡಗಿಸಿಕೊಳ್ಳುವ ಭಾರತದ ಸಾಮರ್ಥ್ಯ ಪೂರ್ವ ಮತ್ತು ಪಶ್ಚಿಮದ ರಾಷ್ಟ್ರಗಳ ನಡುವೆ ಭಾರತ ಸೇತುವೆಯಾಗುವ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಭಾರತ ಸಂಕೀರ್ಣವಾದ ಭೌಗೋಳಿಕ ರಾಜಕಾರಣದ ವಿಚಾರಗಳನ್ನು ನಿರ್ವಹಿಸುತ್ತಾ, ಬಲವಾದ ಆರ್ಥಿಕ ಸಹಯೋಗಗಳು ಮತ್ತು ಸಾಂಸ್ಕೃತಿಕ ಸಂಬಂಧಗಳನ್ನೂ ಉತ್ತೇಜಿಸುತ್ತಿದೆ. ಆ ಮೂಲಕ ಬ್ರಿಕ್ಸ್ ಗುಂಪಿನ ಒಳಗೆ ಮತ್ತು ಜಾಗತಿಕ ವೇದಿಕೆಯಲ್ಲಿ ಭಾರತ ಒಂದು ನಾಯಕನಾಗಿ ಹೊರಹೊಮ್ಮುತ್ತಿದೆ












Click it and Unblock the Notifications