ಪಾಕಿಸ್ತಾನಕ್ಕೆ ಜನ ಸತ್ತರೂ ಬುದ್ಧಿ ಬಂದಿಲ್ಲ, ಯಾಕೆ ಗೊತ್ತಾ?
ಪಾಕಿಸ್ತಾನ ಪಾಪಿ ಉಗ್ರರನ್ನ ಬೆಳೆಸುತ್ತಾ ಅವರಿಂದಲೇ ನಾಶವಾಗುತ್ತಿದೆ ಅನ್ನೋ ಆರೋಪ ಇದೆ. ಅದೇ ಉಗ್ರರು ಇದೀಗ ಪಾಕಿಸ್ತಾನವನ್ನ ಬಲಿ ಪಡೆಯುತ್ತಿದ್ದಾರೆ. ಶುಕ್ರವಾರವೂ ಇದೇ ರೀತಿ ಪಾಕ್‌ನಲ್ಲಿ ಭೀಕರ ಉಗ್ರ ದಾಳಿ ನಡೆದು, ಸೂಸೈಡ್ ಬಾಂಬರ್ ತನ್ನನ್ನ ಸ್ಫೋಟಿಸಿಕೊಂಡ ಕಾರಣ ಸಾವಿನ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಅಸಲಿ ವಿಷಯ ಇದಲ್ಲ ಪಾಕ್‌ನಲ್ಲಿ ನಡೆದ ಉಗ್ರರ ದಾಳಿಗೆ ಭಾರತ ಕಾರಣ ಅಂತಾ ಈಗ ಪಾಪಿ ಪಾಕಿಸ್ತಾನ ಆರೋಪ ಮಾಡಿದೆ.
ಹೌದು, ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪ್ರವಾದಿ ಮುಹಮ್ಮದ್ ಅವರ ಜನ್ಮದಿನದ ಹಿನ್ನೆಲೆ ಮೆರವಣಿಗೆ ನಡೆಸಲಾಗಿತ್ತು. ಆದ್ರೆ ಇದೇ ಮೆರವಣಿಗೆ ಟಾರ್ಗೆಟ್ ಮಾಡಿದ್ದ ಉಗ್ರರ ಗ್ಯಾಂಗ್ ಭೀಕರ ಆತ್ಮಾಹುತಿ ದಾಳಿ ಮಾಡಿತ್ತು. ಹೀಗೆ ಸೂಸೈಡ್ ಬಾಂಬರ್ ಒಬ್ಬ ತನ್ನನ್ನ ತಾನು ಸ್ಫೋಟಿಸಿಕೊಂಡ ಕಾರಣ ಮೆರವಣಿಗೆ ವೇಳೆ ರಕ್ತಪಾತವಾಗಿದೆ. ಆಗ ತಕ್ಷಣ 50ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಆದರೆ ಈಗ ಸಾವಿನ ಸಂಖ್ಯೆ 60ಕ್ಕೆ ಏರಿಕೆಯಾಗಿದ್ದು, ಹೀಗೆ ಸಾವಿನ ವಿಚಾರದಲ್ಲೂ ಪಾಕಿಸ್ತಾನದ ರಾಜಕೀಯ ನಾಯಕರು ಆಟ ಶುರುಮಾಡಿದ್ದಾರೆ.

'ಬಾಂಬ್ ಸ್ಫೋಟದಲ್ಲಿ ಭಾರತದ ಕೈವಾಡ...'
ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ಸರ್ಫರಾಜ್ ಬುಗ್ತಿ ಮಾಡಿರುವ ಆರೋಪ ಈಗ ಪಾಕ್ ಮತ್ತು ಭಾರತದ ನಡುವೆ ಮತ್ತೆ ಕಿಚ್ಚು ಹೊತ್ತಿಸಿದೆ. ತನ್ನ ದೇಶದಲ್ಲಿ ಸೂಕ್ತ ಭದ್ರತೆ ಕೊಡಲು ಯೋಗ್ಯತೆ ಇಲ್ಲದ ಪಾಕಿಸ್ತಾನ, ಇದೀಗ ಪಾಕಿಸ್ತಾನ ನೆಲದಲ್ಲಿ ನಡೆದ ಸೂಸೈಡ್ ಬಾಂಬ್ ದಾಳಿಗೆ ಭಾರತ ಕಾರಣ ಅಂತಿದೆ. ಈ ಬಗ್ಗೆ ಪಾಕಿಸ್ತಾನ ಆಂತರಿಕ ವ್ಯವಹಾರಗಳ ಸಚಿವ ಸರ್ಫರಾಜ್ ಬುಗ್ತಿ ಆರೋಪ ಮಾಡಿದ್ದು, ಈ ಕೃತ್ಯದಲ್ಲಿ ಭಾರತದ ಗುಪ್ತಚರ ಸಂಸ್ಥೆ 'ರಾ' ಕೈವಾಡ ಇದೆ ಎಂದು ಆರೋಪಿಸಿದ್ದಾರೆ. ಆದರೆ ಆರೋಪ ಮಾಡುವಾಗ ಕನಿಷ್ಠ ಸಾಕ್ಷ್ಯ ಸರ್ಫರಾಜ್ ನೀಡಿಲ್ಲ. ಇದು ಪಾಕಿಸ್ತಾನದ ಬಣ್ಣ ಬಯಲಾಗುವಂತೆ ಮಾಡಿದೆ.
ಉಗ್ರರನ್ನು ಹಾಲುಣಿಸಿ ಬೆಳೆಸುತ್ತಿರುವ ಪಾಕ್
ಪಾಕ್ ಉಗ್ರರ ತವರು ಅನ್ನೋ ಮಾತು ಮತ್ತೆ ಮತ್ತೆ ಪ್ರೂವ್ ಆಗುತ್ತಿದ್ದು ಪಾಕಿಸ್ತಾನಿ ನಾಗರಿಕರು ನೆಮ್ಮದಿಯಾಗಿ ಬದಕಲು ಆಗುತ್ತಿಲ್ಲ. ಈಗ ಮತ್ತೆ ಪಾಕ್‌ನಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರಕ್ತಪಾತಕ್ಕೆ ಕಾರಣವಾಗಿದ್ದಾರೆ. ಪರಿಸ್ಥಿತಿ ಹೀಗೆ ಕೈಮೀರಿದ್ದು ಪಾಕ್ ನಾಗರಿಕರು ಅಲ್ಲಿನ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಹೀಗೆಲ್ಲಾ ಪರಿಸ್ಥಿತಿ ಕೈಮೀರಿ ಹೋಗಿರುವ ಸಂದರ್ಭದಲ್ಲಿ, ಉಗ್ರರನ್ನ ಬೆಳೆಸುವ ಪಾಕಿಸ್ತಾನ ಬಾಂಬ್ ಸ್ಫೋಟಕ್ಕೆ ಭಾರತದ ಮೇಲೆ ಆರೋಪ ಹೊರಿಸುತ್ತಿದೆ. ಹೀಗೆ ಕೆನಡಾ ಸರ್ಕಾರವು ಭಾರತದ ಜೊತೆ ಖಲಿಸ್ತಾನಿ ಉಗ್ರರ ವಿಚಾರದಲ್ಲಿ ಕಿರಿಕ್ ತೆಗೆದಂತೆ ತಾನು ಕೂಡ ಆರೋಪ ಹೊರಿಸಲು ಮುಂದಾಗಿದೆ ಪಾಕಿಸ್ತಾನ. ಈಗ ಕೆನಡಾ ರೀತಿಯೇ ಪಾಕಿಸ್ತಾನಕ್ಕೂ ಮುಖಭಂಗ ಗ್ಯಾರಂಟಿ ಅಂತಿದ್ದಾರೆ ಭಾರತೀಯರು.

ಒಟ್ನಲ್ಲಿ ಅದು ಕೆನಡಾದ ಖಲಿಸ್ತಾನಿಗಳೇ ಆಗಲಿ, ಪಾಕಿಸ್ತಾನದ ಉಗ್ರರೇ ಆಗಲಿ ಸಾಕ್ಷ್ಯಗಳೇ ಇಲ್ಲದೆ ಸುಖಾಸುಮ್ಮನೆ ಆರೋಪ ಮಾಡಿದರೆ ಅದೇ ಸತ್ಯ ಆಗುವುದಿಲ್ಲ. ಅದರಲ್ಲೂ ಇಡೀ ಪಾಕಿಸ್ತಾನ ಉಗ್ರರ ಕೈಯಲ್ಲಿ ಸಿಲುಕಿ ನಲುಗಿ ಹೋಗುತ್ತಿದೆ. ಈ ಸಮಯದಲ್ಲಿ ಉಗ್ರ ಪಡೆಗೆ ಬುದ್ಧಿ ಕಲಿಸುವ ಬದಲು, ಭಾರತದ ವಿರುದ್ಧವೇ ಪಾಕಿಸ್ತಾನ ಸುಳ್ಳು ಆರೋಪ ಮಾಡುತ್ತಾ ಸಮಯ ವ್ಯರ್ಥ ಮಾಡುತ್ತಿದೆ. ಹಾಗೇ ಈಗಾಗಲೇ ಛಿದ್ರವಾಗಿರುವ ಭಾರತ & ಪಾಕಿಸ್ತಾನದ ಸಬಂಧಕ್ಕೆ ಮತ್ತಷ್ಟು ಬೆಂಕಿ ಹಚ್ಚತ್ತಿದ್ದಾರೆ ಪಾಕ್ ರಾಜಕಾರಣಿಗಳು.
ಇದೆಲ್ಲ ಏನೇ ಇರಲಿ ಪಾಕಿಸ್ತಾನ ತನ್ನ ಭಾರತ ವಿರೋಧಿ ನಿಲುವು ತೊರೆಯದ ಹೊರತಾಗಿ ಉದ್ಧಾರ ಆಗಲ್ಲ. ಈ ವಿಚಾರ ಮತ್ತೆ ಮತ್ತೆ ಪ್ರೂವ್ ಆಗುತ್ತಿದ್ರೂ ಪಾಕಿಸ್ತಾನ ಮಾತ್ರ ತನ್ನ ಬುದ್ಧಿ ಬದಲಿಸಿಕೊಳ್ಳಲು ಯತ್ನಿಸುತ್ತಿಲ್ಲ. ಅದರಲ್ಲೂ ಪಾಕಿಸ್ತಾನದ ರಾಜಕೀಯ ಪಕ್ಷಗಳು ಎರಡೂ ಪಕ್ಷದ ಸಂಬಂಧಕ್ಕೆ ಕಿಡಿ ಹೊತ್ತಿಸುತ್ತಿರುವುದು ಬೇಸರದ ಸಂಗತಿ. ಹೀಗೆ ತಲೆಬುಡ ಇಲ್ಲದ ಆರೋಪಗಳ ಮೂಲಕ ಪಾಕಿಸ್ತಾನ ಮತ್ತೆ ಜಾಗತಿಕ ಮಟ್ಟದಲ್ಲಿ ತನ್ನ ಮಾನವನ್ನ ತಾನೇ ಕಳೆದುಕೊಳ್ಳುತ್ತಿದೆ.












Click it and Unblock the Notifications