ಪಾಕ್ ಸೇನಾ ಮುಖ್ಯಸ್ಥ ಅಸೀಂ ಮುನೀರ್‌ಗೆ ಅತ್ಯುನ್ನತ ಹುದ್ದೆ: ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತ ಫಿಕ್ಸ್!
ಪಾಕಿಸ್ತಾನದ ಸೇನೆ ಹಾಗೂ ಆಡಳಿತದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ಭಾರತದೊಂದಿಗೆ ಈಚೆಗೆ ಏರ್ಪಟ್ಟ ಸಂಘರ್ಷದ ನಂತರ ಪಾಕಿಸ್ತಾನದ ಸರ್ಕಾರ ತೆಗೆದುಕೊಳ್ಳುತ್ತಿರುವ ತೀರ್ಮಾನಗಳನ್ನು ಭಾರತವೂ ಸೇರಿದಂತೆ ಇಡೀ ವಿಶ್ವವೇ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಾಕಿಸ್ತಾನವು ಕಾಶ್ಮೀರ ವಿಚಾರ ಸೇರಿದಂತೆ ಎಲ್ಲಾ ರೀತಿಯ ಶಾಂತಿ ಒಪ್ಪಂದಕ್ಕೆ ಸಿದ್ಧವಾಗಿದೆ ಎಂದು ಹೇಳುತ್ತಿರುವಾಗಲೇ ಪಾಕಿಸ್ತಾನದ ಸೇನೆಯಲ್ಲಿ ಮಹತ್ವದ ಬದಲಾವಣೆ ಆಗುತ್ತಿರುವುದು ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತದ ಮುನ್ಸೂಚನೆ ಫಿಕ್ಸ್ ಎನ್ನಲಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಪಾಕಿಸ್ತಾನದಲ್ಲಿನ ಸೇನೆಯು ಕೇವಲ ಸೇನೆಯಾಗಿ ಮಾತ್ರ ಉಳಿದಿಲ್ಲ. ಅದು ಅಲ್ಲಿನ ಆಡಳಿತದಲ್ಲೂ ಹಸ್ತಕ್ಷೇಪವನ್ನು ಹೊಂದಿದೆ. ಇದೀಗ ಪಾಕಿಸ್ತಾನದ ಸೇನೆಯ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ಅವರಿಗೆ ಪ್ರಮೋಷನ್ ಕೊಡಲಾಗಿದೆ. ಸೇನಾ ಮುಖ್ಯಸ್ಥ ಹುದ್ದೆಯಿಂದ ಫೀಲ್ಡ್ ಮಾರ್ಷಲ್ ಆಗಿ ಬಡ್ತಿ ನೀಡಲಾಗಿದೆ.
ಇದು ಪಾಕಿಸ್ತಾನ ಸೇನೆಯ ಸುಪ್ರೀಂ ಹುದ್ದೆಯಾಗಿದೆ. ಈ ರೀತಿ ಪಾಕಿಸ್ತಾನ ಸೇನೆಯಲ್ಲಿ ಮಹತ್ವದ ಬದಲಾವಣೆ ಆಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಅಸೀಂ ಮುನೀರ್ ಪ್ರಸ್ತಾಪಿಸಿದಾಗೆಲ್ಲವೂ ಭಾರತದಲ್ಲಿ ಉಗ್ರರ ದಾಳಿಗಳು ನಡೆದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಸೇನೆ ಆಡಳಿತ ಶುರುವಾದರೆ, ಆಂತರಿಕ ಕಚ್ಚಾಟಗಳು ಹೆಚ್ಚಾಗಲಿವೆ. ಈಗಾಗಲೇ ಬಲೂಚಿಸ್ತಾನ್ ಆರ್ಮಿಯು ಪಾಕಿಸ್ತಾನದಿಂದ ಪ್ರತ್ಯೇಕವಾಗಿ ಬಲೂಚಿಸ್ತಾನ್ ರಾಷ್ಟ್ರ ನಿರ್ಮಾಣ ಮಾಡಿಕೊಳ್ಳುವ ಅವಸರದಲ್ಲಿದೆ. ಬಲೂಚಿಸ್ತಾನ್ ಆರ್ಮಿಯು ಬಲೂಚಿಸ್ತಾನ್ ಪ್ರದೇಶವನ್ನು ಪ್ರತ್ಯೇಕ ರಾಷ್ಟ್ರ ಎಂದು ಘೋಷಿಸಿಕೊಂಡಿದೆ.

ಅಸೀಂ ಮುನೀರ್‌ಗೆ ಪಾಕಿಸ್ತಾನ ಸೇನೆಯ ಅತ್ಯುನ್ನತ ಹುದ್ದೆಯನ್ನು ನೀಡಿರುವುದರ ಹಿಂದೆ ಸೇನೆಯ ಹಿಡಿತ ಇದೆ ಅಂತಲೇ ಹೇಳಲಾಗುತ್ತಿದೆ. ಆದರೆ, ಪಾಕಿಸ್ತಾನ ಸರ್ಕಾರವು ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ಸಂಘರ್ಷವನ್ನು ಅತ್ಯುತ್ತಮವಾಗಿ ನಿಭಾಯಿಸಿದ ಕಾರಣಕ್ಕೆ ಪ್ರಮೋಷನ್ ನೀಡಿರುವುದಾಗಿ ಹೇಳಿಕೊಂಡಿದೆ. ಅಸೀಂ ಮುನೀರ್‌ಗೆ ಈಗಾಗಲೇ ನಿವೃತ್ತಿ ನೀಡಬೇಕಿತ್ತು. ಆದರೂ ಆತನನ್ನು ಸೇನೆಯಲ್ಲೇ ಮುಂದುವರಿಸಲಾಗಿತ್ತು. ಇದೀಗ ಅತ್ಯುನ್ನತ ಹುದ್ದೆಯನ್ನು ಕರುಣಿಸಲಾಗಿದೆ.
ಭಾರತದೊಂದಿಗೆ ಈಚೆಗೆ ಏರ್ಪಟ್ಟಿದ್ದ ಅಘೋಷಿತ ಯುದ್ಧ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ ಕಾರಣಕ್ಕಾಗಿ ಈ ಪ್ರಮೋಷನ್ ನೀಡಿರುವುದಾಗಿ ಹೇಳಲಾಗಿದೆ. ಸೇನಾ ಮುಖ್ಯಸ್ಥನಾಗಿದ್ದ ಮುನೀರ್ ಇದೀಗ ಫೀಲ್ಡ್ ಮಾರ್ಷಲ್ ಹುದ್ದೆಗೆ ನೇಮಕವಾಗಿದ್ದು. ಪಾಕಿಸ್ತಾನದ ಇತಿಹಾಸದಲ್ಲೇ ಎರಡನೇ ಬಾರಿಗೆ ಮಿಲಿಟರಿ ಅಧಿಕಾರಿಯೊಬ್ಬರು ಈ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಅಡಗುತಾಣಗಳನ್ನು ಸರ್ವನಾಶ ಮಾಡುವುದಕ್ಕೆ ಭಾರತವು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪ್ರತಿಯಾಗಿ Operation Bunyan-um-Marsoos ಆಪರೇಷನ್ ಬನ್ಯನ್-ಉಮ್-ಮರ್ಸೂಸ್ ಎನ್ನುವ ಹೆಸರನ್ನು ಪಾಕ್ ಸೇನೆ ಇರಿಸಿಕೊಂಡಿತ್ತು (ಭಾರತದ ಮೇಲೆ ದಾಳಿ ಮಾಡಲು ಕೊಟ್ಟಿದ್ದ ಹೆಸರು). ಈ ಕಾರ್ಯಾಚರಣೆಯನ್ನು ಮುನೀರ್ ಅತ್ಯುತ್ತಮವಾಗಿ ನಿಭಾಯಿಸಿದ್ದಾರೆ ಎಂದು ಅಲ್ಲಿನ ಸರ್ಕಾರ ಹೇಳಿಕೊಂಡಿದ್ದು. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಅಲ್ಲಿನ ಸರ್ಕಾರ ಈ ನಿರ್ಧಾರವನ್ನು ಪ್ರಕಟಿಸಿದೆ.
ಸರ್ವಾಧಿಕಾರಿ & ಮಿಲಿಟರಿ ಆಡಳಿತದ ಆತಂಕ: ಇನ್ನು ಮುನೀರ್‌ಗೆ ಅತ್ಯುನ್ನತ ಹುದ್ದೆಯನ್ನು ಕೊಡುತ್ತಿದ್ದಂತೆಯೇ ಪಾಕಿಸ್ತಾನದಲ್ಲಿ ಸರ್ವಾಧಿಕಾರಿಯಾಗಿ ಮುನೀರ್ ಬದಲಾಗಬಹುದು ಇಲ್ಲವೇ ಶತ್ರು ದೇಶದಲ್ಲಿ ಮಿಲಿಟರಿ ಆಡಳಿತ ಜಾರಿಗೆ ಬರಬಹುದು ಎಂದೇ ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ಈ ರೀತಿಯ ಉದಾಹರಣೆಗಳು ಇವೆ.
1959ರಲ್ಲಿ ದೇಶದ ಮೊದಲ ಮಿಲಿಟರಿ ಸರ್ವಾಧಿಕಾರಿಯಾಗಿ ಅಯೂಬ್ ಖಾನ್ ತಮ್ಮನ್ನು ತಾವು ಫೀಲ್ಡ್ ಮಾರ್ಷಲ್ ಎಂದು ಘೋಷಿಸಿಕೊಂಡಿದ್ದರು. ಇದಾದ ಮೇಲೆ ಮುನೀರ್ ಈ ಹುದ್ದೆಗೇರಿದ ಮೊದಲ ಪಾಕಿಸ್ತಾನಿ ಮಿಲಿಟರಿ ಅಧಿಕಾರಿಯಾಗಿದ್ದಾರೆ. ಈ ಬಡ್ತಿಯಿಂದ ಮುನೀರ್ ಅವರ ಅಧಿಕಾರ ವಿಸ್ತರಿಸಲಿದ್ದು, ಅಲ್ಲಿನ ಸೇನೆ ಹಾಗೂ ಸರ್ಕಾರದಲ್ಲಿ ಹೆಚ್ಚಿನ ಹಿಡಿತವನ್ನು ಸಾಧಿಸಲಿದ್ದಾರೆ. ಅಲ್ಲದೇ ಮಿಲಿಟರಿ ಈಗಾಗಲೇ ವಿದೇಶಿ ಮತ್ತು ಭದ್ರತಾ ನೀತಿಗಳನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆಗಳು ಆಗಬಹುದು ಎನ್ನುವ ಚರ್ಚೆ ಹೆಚ್ಚಾಗಿದೆ. ಭಾರತ ಸರ್ಕಾರವು ಈ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹೇಳಲಾಗಿದೆ.












Click it and Unblock the Notifications