Myanmar Earthquake: ಮ್ಯಾನ್ಮಾರ್ ಭೂಕಂಪನಕ್ಕೆ 3,564 ಜನರು ಬಲಿ & 210 ನಾಗರಿಕರು ಇನ್ನೂ ನಾಪತ್ತೆ
ಮ್ಯಾನ್ಮಾರ್ ದೇಶವು ಭೀಕರ ಭೂಕಂಪನಕ್ಕೆ ಛಿದ್ರ ಛಿದ್ರವಾಗಿದ್ದು, ಎಲ್ಲೆಲ್ಲೂ ಬರೀ ಸಾವಿನ ಮನೆಗಳೇ ಕಣ್ಣಿಗೆ ರಾಚುತ್ತಿವೆ. ನಗರ ಪ್ರದೇಶ ಮಾತ್ರವಲ್ಲದೇ ಗ್ರಾಮೀಣ ಭಾಗದಲ್ಲೂ ಭಾರಿ ದೊಡ್ಡ ಪ್ರಮಾದ ನಡೆದು ಹೋಗಿದ್ದು, ಈಗಾಗಲೇ ಸಾವಿರಾರು ಜನರು ಜೀವ ಬಿಟ್ಟಿದ್ದಾರೆ. ಶವಗಳನ್ನ ಹೊರಗೆ ತೆಗೆಯಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಇಂತಹ ಸಮಯದಲ್ಲೇ ಸಾವಿನ ಸಂಖ್ಯೆಯು 3,564 ದಾಟಿದ್ದು, 210 ಜನರು ಈಗಲೂ ನಾಪತ್ತೆಯಾಗಿದ್ದಾರೆ.
ಮ್ಯಾನ್ಮಾರ್ ಸಂಕಷ್ಟದಲ್ಲಿ ಇರುವಾಗ ಮತ್ತೆ ಮತ್ತೆ ಪ್ರಾಕೃತಿಕ ವಿಕೋಪಗಳು ಕಾಡುತ್ತಿದ್ದು, ಹೀಗೆ ಮತ್ತೆ ಮತ್ತೆ ಅಲ್ಲಿ ಭೂಮಿ ಕಂಪಿಸುತ್ತಿದೆ. ಇನ್ನೊಂದು ಕಡೆ ಸರ್ಕಾರ ಕೂಡ ಈಗಿನ ಪರಿಸ್ಥಿತಿ ನೋಡಿ ಕಂಗೆಟ್ಟು ಹೋಗಿದೆ. ಮುಂದೆ ಏನು ಮಾಡುವುದು? ಎಂಬ ಪರಿಸ್ಥಿತಿಯೂ ನಿರ್ಮಾಣ ಆಗಿದೆ. ಭಾರತ ಕೂಡ ಸಾಕಷ್ಟು ದೊಡ್ಡ ಪ್ರಮಾಣದ ಸಹಾಯವನ್ನೇ ಮಾಡಿ, ಮ್ಯಾನ್ಮಾರ್ ಬೆಂಬಲಕ್ಕೆ ನಿಲ್ಲುತ್ತಿದೆ. ಆದರೂ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ, ಹಳ್ಳಿಗಳ ಜನರು ನೀರು & ಆಹಾರ ಸಿಗದೆ ನರಳಿದ್ದಾರೆ.

ಗುಳೆ ಹೋಗುತ್ತಿರುವ ಹಳ್ಳಿಗಳ ಜನ
ಮ್ಯಾನ್ಮಾರ್ ದೇಶದ ಗ್ರಾಮೀಣ ಭಾಗದಲ್ಲಿ ಸಾವಿರಾರು ಮನೆಗಳಿಗೆ ಹಾನಿಯಾಗಿದ್ದು, ಜನಕ್ಕೆ ಇದೀಗ ಆಹಾರ & ನೀರು ಹೊಂದಿಸುವುದೇ ಕಷ್ಟವಾಗಿದೆ. ಇದೇ ಕಾರಣಕ್ಕೆ ಮ್ಯಾನ್ಮಾರ್ ದೇಶದ ಹಲವು ಹಳ್ಳಿಗಳ ಜನರು ಇದೀಗ ಗ್ರಾಮಗಳನ್ನು ಬಿಟ್ಟು ನಗರ ಪ್ರದೇಶಕ್ಕೆ ಹೆಜ್ಜೆ ಹಾಕುತ್ತಿದ್ದು, ಪರಿಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಸಾಧ್ಯತೆ ಇದೆ. ಈಗಾಗಲೇ ಹಲವು ದೇಶಗಳು ಸಾಕಷ್ಟು ದೊಡ್ಡ ಪ್ರಮಾಣದ ನೆರವು ರವಾನೆ ಮಾಡಿವೆ. ಮ್ಯಾನ್ಮಾರ್ ಪರಿಸ್ಥಿತಿ ಸರಿಯಾಗಲು ಎಲ್ಲಾ ರೀತಿಯ ಸಹಕಾರ ಕೊಡುತ್ತಿವೆ.
ಭಾರತದ ಕಡೆಯಿಂದ ಬೃಹತ್ ಸಹಾಯ
ಮ್ಯಾನ್ಮಾರ್ ದೇಶಕ್ಕೆ ಭಾರತ ಕೂಡ ದೊಡ್ಡ ಪ್ರಮಾಣದ ನೆರವು ರವಾನೆ ಮಾಡುತ್ತಿದ್ದು, ಈ ಮೂಲಕ ಸಹಾಯಕ್ಕೆ ಮುಂದಾಗಿದೆ. ಈಗಾಗಲೆ ಭಾರತೀಯ ಸೇನೆಯ ಸಿ-17 ಗ್ಲೋಬ್ ಮಾಸ್ಟರ್ ವಿಮಾನದಲ್ಲಿ ನೆರವು ಸಾಮಗ್ರಿಯನ್ನ ರವಾನೆ ಮಾಡಲಾಗಿದೆ. ಮಾರ್ಚ್ 28 ಶುಕ್ರವಾರ ಭೀಕರ ಭೂಕಂಪನ ಸಂಭವಿಸಿ, ಈಗಾಗಲೇ 3,500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಹೀಗಾಗಿ ಈವರೆಗೂ ಭಾರತದ ಕಡೆಯಿಂದ 442 ಮೆಟ್ರಿಕ್ ಟನ್ ಆಹಾರ ಸಾಮಗ್ರಿ ರವಾನೆ ಮಾಡಲಾಗಿದೆ.
ಒಟ್ನಲ್ಲಿ ಮ್ಯಾನ್ಮಾರ್ ಸೇರಿದಂತೆ ಅಕ್ಕಪಕ್ಕದ ದೇಶಗಳಿಗೆ ಭೂಕಂಪನ ಅಪ್ಪಳಿಸಿ ಈಗಾಗಲೇ 11 ದಿನವೇ ಕಳೆದು ಹೋಗಿದೆ. ಹೀಗಿದ್ದರೂ ಪರಿಸ್ಥಿತಿ ಇನ್ನೂ ಹಿಡಿತಕ್ಕೆ ಸಿಕ್ಕಿಲ್ಲ. ಮನುಷ್ಯರು ಈ ಘಟನೆ ನೋಡಿ ಪಾಠ ಕಲಿಯದೇ ಹೋದರೆ, ಪ್ರಕೃತಿಯ ಮೇಲೆ ಇದೇ ರೀತಿಯ ದೌರ್ಜನ್ಯ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಆತಂಕ ಇದೆ.












Click it and Unblock the Notifications