ಇಸ್ರೇಲ್‌ನ ಯುದ್ಧ ಅಪರಾಧಗಳಿಗೆ ಅಂತ್ಯ ಹಾಡಲೇಬೇಕು: ಭಯ ಹುಟ್ಟಿಸಿದ ಇರಾನ್, ಸೌದಿ ನಾಯಕರ ನಡುವಿನ ಫೋನ್ ಸಂಭಾಷಣೆ
ರಿಯಾದ್, ಅಕ್ಟೋಬರ್ 12: ಪ್ಯಾಲೆಸ್ತೀನ್-ಇಸ್ರೇಲ್ ನಡುವಿನ ಯುದ್ಧದ ಕುರಿತು ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಸೌದಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಬುಧವಾರ ಚರ್ಚಿಸಿದ್ದಾರೆ.
ಪ್ಯಾಲೆಸ್ತೀನ್ ವಿರುದ್ಧದ ಇಸ್ರೇಲಿನ ಯುದ್ಧ ಅಪರಾಧಗಳನ್ನು ಕೊನೆಗೊಳಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ರೈಸಿ ಹಾಗೂ ಮೊಹಮ್ಮದ್ ಬಿನ್ ಸಲ್ಮಾನ್ ವ್ಯಕ್ತಪಡಿಸಿದ್ದಾರೆ ಎಂದು ಇರಾನ್ ಸರ್ಕಾರ ಮಾಧ್ಯಮ ವರದಿ ಮಾಡಿದೆ.

ರೈಸಿ ಮತ್ತು ಸೌದಿ ರಾಜಕುಮಾರ ಇಸ್ರೇಲ್ ಯುದ್ಧದ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
'ಸದ್ಯ ನಡೆಯುತ್ತಿರುವ ಯುದ್ದವನ್ನು ತಡೆಯಲು ಎಲ್ಲಾ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ನಾಯಕರೊಂದಿಗೆ ನಾನು ಚರ್ಚೆ ನಡೆಸಿದ್ದೇನೆ. ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ ಎಂಬುದಾಗಿ ರಾಜಕುಮಾರ ತಿಳಿಸಿದ್ದಾರೆ' ಎಂದು ಸೌದಿ ರಾಜ್ಯ ಸುದ್ದಿ ಸಂಸ್ಥೆ ಸ್ಪಾ ಹೇಳಿದೆ.

ಅಮಾಯಕ ನಾಗರಿಕರನ್ನು ಕೊಲ್ಲುವ ಅಥವಾ ಗುರಿಯಾಗಿಸುವ ಇಸ್ರೇಲ್ ಕ್ರಮವನ್ನು ಸೌದಿ ಅರೇಬಿಯಾದ ನಿರಾಕರಿಸುತ್ತದೆ ಎಂದು ಇರಾನ್ ಅಧ್ಯಕ್ಷರಿಗೆ ಅವರು ತಿಳಿಸಿದ್ದಾರೆ.
ಸೌದಿ ಅರೇಬಿಯಾ ಮತ್ತು ಇರಾನ್ ಏಳು ವರ್ಷಗಳ ಹಗೆತನದ ನಂತರ ಮತ್ತೆ ಒಂದಾಗಿವೆ. ಚೀನಾ ಮಾತುಕತೆ ನಡೆಸಿದ ಒಪ್ಪಂದದಡಿಯಲ್ಲಿ ಈ ಎರಡೂ ರಾಷ್ಟ್ರಗಳು ಒಗ್ಗೂಡಿವೆ.
ಈ ಎರಡೂ ದೇಶಗಳ ನಾಯಕರ ನಡುವಿನ ಮಾತುಕತೆಯು ವಿಶ್ವದಾದ್ಯಂತ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಇಸ್ರೇಲ್‌ನ ಯುದ್ಧ ಅಪರಾಧಗಳನ್ನು ಕೊನೆಗೊಳಿಸಲೇಬೇಕು ಎಂಬ ಸಂದೇಶವು ಬೇರೆಯದೇ ಗುಟ್ಟನ್ನು ಹೇಳುತ್ತಿದೆ. ಯಹೂದಿ ರಾಷ್ಟ್ರವಾದವನ್ನು ತಡೆಯಲು ಮುಸ್ಲಿಂ ರಾಷ್ಟ್ರಗಳು ಒಂದಾಗುತ್ತಿವೆಯೇ ಎಂಬ ಶಂಕೆಗಳು ಮೂಡಿವೆ.

ಮುಂದುವರಿದ ಇಸ್ರೇಲ್ ದಾಳಿ
ಗಾಜಾಪಟ್ಟಿಯ ಮೇಲೆ ವೈಮಾನಿಕ ದಾಳಿಗಳನ್ನು ಇಸ್ರೇಲ್ ಮುಂದುವರಿಸಿದೆ. ಖಾನ್ ಯೂನಿಸ್ ನಗರದಲ್ಲಿ ಒಂಬತ್ತು ಮಕ್ಕಳು ಸೇರಿದಂತೆ ಹಲವಾರು ನಾಗರಿಕರು ಮೃತಪಟ್ಟಿದ್ದಾರೆ.
ಹಮಾಸ್ ವಶದಲ್ಲಿರುವ ಎಲ್ಲರನ್ನು ಬಿಡುಗಡೆ ಮಾಡುವವರೆಗೆ ಗಾಜಾಕ್ಕೆ ವಿದ್ಯುತ್ ಮತ್ತು ಇಂಧನ ಸೇರಿದಂತೆ ಯಾವುದೇ ಮೂಲಭೂತ ಸಂಪನ್ಮೂಲಗಳು ಅಥವಾ ಮಾನವೀಯ ನೆರವನ್ನು ನೀಡುವುದಿಲ್ಲವೆಂದು ಇಸ್ರೇಲಿ ಇಂಧನ ಸಚಿವರು ಹೇಳಿದ್ದಾರೆ.
'ಇಸ್ರೇಲಿನಿಂದ ಅಪಹರಣಕ್ಕೊಳಗಾದವರನ್ನು ಮನೆಗೆ ಹಿಂದಿರುಗಿಸುವವರೆಗೆ ಯಾವುದೇ ವಿದ್ಯುತ್ ಸ್ವಿಚ್ ಆನ್ ಆಗುವುದಿಲ್ಲ. ನೀರಿನ ಟ್ಯಾಪ್ ತೆರೆಯುವುದಿಲ್ಲ. ಯಾವುದೇ ಇಂಧನಚಾಲಿತ ಟ್ರಕ್ ಸಂಚರಿಸುವುದಿಲ್ಲ' ಎಂದು ಅವರು 'ಎಕ್ಸ್' ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಇಸ್ರೇಲ್ ದಾಳಿಯ ಕುರಿತು ಪ್ರತಿಕ್ರಿಯಿಸಿರುವ ಹಮಾಸ್ ರಾಜಕೀಯ ಬ್ಯೂರೋ ಸದಸ್ಯ ಗಾಜಿ ಹಮದ್, 'ನಾವು ಹೆದರುವುದಿಲ್ಲ. ನಾವು ಪ್ರಬಲ ಜನರು. ನಾವು ಮುಂದುವರೆಯುತ್ತೇವೆ. ಬಲವಾದ ನಿರ್ಧಾರಗಳನ್ನು ಮಾಡಿದ್ದೇವೆ.ನಾವು ಸಾಕಷ್ಟು ಹೋರಾಟಗಾರರನ್ನು ಹೊಂದಿದ್ದೇವೆ. ನಮ್ಮನ್ನು ಬೆಂಬಲಿಸಲು ಬಯಸುವ ಬಹಳಷ್ಟು ಜನರಿದ್ದಾರೆ' ಎಂದು ಹೇಳಿದ್ದಾರೆ.
'ಜೋರ್ಡಾನ್, ಲೆಬನಾನ್ ಮತ್ತು ಎಲ್ಲೆಡೆಯ ಗಡಿಯಲ್ಲಿರುವ ಜನರು ಸಹ ಇಲ್ಲಿಗೆ ಬಂದು ನಮಗಾಗಿ ಹೋರಾಡಲು ಬಯಸುತ್ತಾರೆ. ಗಾಜಾ ಉದ್ಯಾನವನವಲ್ಲ. ಈ ಯುದ್ಧ ಇಸ್ರೇಲ್‌ಗೆ ತುಂಬಾ ದುಬಾರಿಯಾಗಲಿದೆ' ಎಂದು ಹಮದ್ ಎಚ್ಚರಿಸಿದ್ದಾರೆ.
'ಈ ಕಾರ್ಯಾಚರಣೆಯ ಆರಂಭದಲ್ಲಿ ನಾವು 1,200 ಹೋರಾಟಗಾರರನ್ನು ಕಳುಹಿಸಿದ್ದೇವೆ. ಇಸ್ರೇಲಿನ ಭದ್ರತೆ, ಇಸ್ರೇಲಿನ ಗುಪ್ತಚರ ಮತ್ತು ಇಸ್ರೇಲಿನ ಮಹಾಶಕ್ತಿಯ ಚಿತ್ರಣವನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications