ಇಸ್ರೇಲ್ ದಾಳಿಗೆ ನಲುಗಿದ ಲೆಬನಾನ್, ಹಿಜ್ಬುಲ್ಲಾ ಮುಖಂಡರು ಅನಾಮಿಕ ಸ್ಥಳಗಳಿಗೆ ಎಸ್ಕೇಪ್... Israel And Lebanon
ಪ್ರಪಂಚ ಈಗ ಮತ್ತೊಂದು ಅವನತಿ ಕಡೆಗೆ ಸಾಗುತ್ತಿರುವ ರೀತಿ ಭಾಸವಾಗುತ್ತಿದ್ದು, ಅದರಲ್ಲೂ ಈಗಿನ ಪರಿಸ್ಥಿತಿ ನೋಡಿದರೆ ಮಧ್ಯಪ್ರಾಚ್ಯ ಏನಾಗುತ್ತೋ ಗೊತ್ತಿಲ್ಲ. ಯಾಕೆ ಈ ಮಾತು ಅಂತಾ ಹೇಳಿದರೆ, ಮಧ್ಯಪ್ರಾಚ್ಯ ಭಾಗದಲ್ಲಿ ಮತ್ತೆ ಮತ್ತೆ ತಿಕ್ಕಾಟ ನಡೆಯುತ್ತಿದೆ. ನಿನ್ನೆಯಷ್ಟೇ ಲೆಬನಾನ್‌ನ ವಿರುದ್ಧದ ಕಾರ್ಯಾಚರಣೆ ವೇಳೆ ಇಸ್ರೇಲ್ ವಾಯುದಾಳಿ ನಡೆಸಿತ್ತು. ಆ ಮೂಲಕ ಲೆಬನಾನ್ ನೆಲದಲ್ಲಿ ಇರುವ ಹಿಜ್ಬುಲ್ಲಾ ನಾಯಕರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿತ್ತು. ಆದರೆ ಹೀಗೆಲ್ಲಾ ಇಸ್ರೇಲ್ ದಾಳಿಯನ್ನ ನಡೆಸಿದ ಹಿನ್ನೆಲೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಇನ್ನುಳಿದ ಹಿಜ್ಬುಲ್ಲಾ ಮುಖಂಡರು ಈಗ ಅನಾಮಿಕ ಸ್ಥಳಗಳಿಗೆ ಎಸ್ಕೇಪ್ ಆಗಿದ್ದಾರೆ.
ಮಧ್ಯಪ್ರಾಚ್ಯ ಭಾಗದ ಯಾವುದೇ ದೇಶದಲ್ಲಿ ಇಸ್ರೇಲ್ ವಿರುದ್ಧ ಕುತಂತ್ರ ನಡೆದರೆ ತಕ್ಷಣವೇ ಇಸ್ರೇಲ್ ಸೇನೆ ಅಲರ್ಟ್ ಆಗಿ, ಸೇನಾ ಕಾರ್ಯಾಚರಣೆಯನ್ನ ಇದೀಗ ಕೈಗೆತ್ತಿಕೊಂಡು ಶತ್ರು ನಾಶ ಮಾಡುತ್ತಿದೆ. ಇದೇ ರೀತಿಯಾಗಿ ಇಸ್ರೇಲ್ ಸೇನೆ ಲೆಬನಾನ್ ಪೂರ್ವ & ದಕ್ಷಿಣ ಭಾಗದಲ್ಲಿ ನಡೆಸಿರುವ ದಾಳಿಯಲ್ಲಿ ನಿನ್ನೆ ಕನಿಷ್ಠ 12 ಜನರು ಜೀವ ಬಿಟ್ಟಿದ್ದಾರೆ ಎನ್ನಲಾಗಿತ್ತು. ಈ ಮೂಲಕ ಹಿಜ್ಬುಲ್ಲಾ ಜೊತೆ 2024ರ ಸಮಯದಲ್ಲಿ ಮಾಡಿಕೊಂಡಿದ್ದ ಕದನ ವಿರಾಮ ಒಪ್ಪಂದ ಮುರಿಯಲಾಗಿದ್ದು, ಇಸ್ರೇಲ್ ಸೇನೆ ಮತ್ತಷ್ಟು ಅಲರ್ಟ್ ಆಗಿ ಕಾರ್ಯಾಚರಣೆ ಮುಂದುವರಿಸಿದೆ.

ಇರಾನ್ ಜೊತೆಗೆ ಲೆಬನಾನ್ ಮೇಲೂ ದಾಳಿ?
ದಿಢೀರ್ ಇಸ್ರೇಲ್ ಸೇನೆ ದಾಳಿ ಮಾಡಿ ಶತ್ರುಗಳನ್ನು ಹೊಸಕಿ ಹಾಕಲು ಮುಂದಾಗಿದೆ. ಈ ದಾಳಿಯಲ್ಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆ ಸೇರಿದ್ದು, ಎಲ್ಲೆಲ್ಲೂ ಈ ಘಟನೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ಇದೆ. ಮತ್ತೊಂದು ಕಡೆ ಇಸ್ರೇಲ್ ದಾಳಿಗೆ ಹೆದರಿ ಹಿಜ್ಬುಲ್ಲಾ ಮುಖಂಡರು ಅನಾಮಿಕ ಸ್ಥಳಗಳಿಗೆ ಎಸ್ಕೇಪ್ ಆಗಿದ್ದಾರಂತೆ ಈಗ. ಹಾಗೇ ಇಸ್ರೇಲ್ ಸೇನೆ ಮತ್ತೊಮ್ಮೆ ಈ ಭಾಗದಲ್ಲಿ ಹಿಜ್ಬುಲ್ಲಾ ವಿರುದ್ಧ ಮತ್ತೊಂದು ಸುತ್ತಿನ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೀಗ ದಟ್ಟವಾಗಿದೆ. ಇರಾನ್‌ನ ಜೊತೆಗೆ ಅಮೆರಿಕ ಹಾಗೂ ಇಸ್ರೇಲ್ ತಿಕ್ಕಾಟ ನಡೆಯುವಾಗಲೇ ಲೆಬನಾನ್ ಮೇಲೆ ನಡೆದಿರುವ ಈ ದಾಳಿ ಕೂಡ ಕಂಪನ ಸೃಷ್ಟಿ ಮಾಡಿದೆ.
ಇರಾನ್ ಮತ್ತು ಅಮೆರಿಕ ಯುದ್ಧ ಭೀತಿ
ಮಧ್ಯಪ್ರಾಚ್ಯ ಮಾತ್ರವಲ್ಲ ಇಡೀ ಜಗತ್ತಿನಾದ್ಯಂತ ಈಗ ಒಂದೇ ಒಂದು ವಿಚಾರ ದೊಡ್ಡ ಚರ್ಚೆಗೆ ನಾಂದಿ ಹಾಡಿದ್ದು, ಇರಾನ್ & ಅಮೆರಿಕ ನಡುವೆ ನಡೆಯುತ್ತಿರುವ ತಿಕ್ಕಾಟ ಯುದ್ಧವಾದರೆ ಹೇಗೆ? ಎಂಬ ಭೀತಿ ಕಾಡುತ್ತಾ ಇದೆ. ಇರಾನ್ & ಅಮೆರಿಕ ನಡುವೆ ಇದೇ ವಾರಂತ್ಯದಲ್ಲಿ ಯುದ್ಧ ಶುರುವಾಗುತ್ತೆ ಎನ್ನುವ ಆತಂಕ ಆವರಿಸಿತ್ತು. ಇದೇ ಸಮಯದಲ್ಲಿ ವಾರಾಂತ್ಯದಲ್ಲಿ ಇರಾನ್ ಮೇಲೆ ಅಮೆರಿಕವು ಕಾರ್ಯಾಚರಣೆ ಶುರು ಮಾಡಿದ್ರೆ ಅದರಿಂದ ಆಗುವ ಅಪಾಯಗಳ ಬಗ್ಗೆ ಕೂಡ ಆತಂಕದ ವಾತಾವರಣ ನಿರ್ಮಾಣ ಆಗಿತ್ತು ಮಧ್ಯಪ್ರಾಚ್ಯದಲ್ಲಿ. ಆದರೆ ಅಂತಹ ಯಾವುದೇ ಘಟನೆ ಸಂಭವಿಸಿಲ್ಲ, ಇದರ ಜೊತೆ ಇದೀಗ ಲೆಬನಾನ್ ಮೇಲೂ ಮುಗಿಬಿದ್ದಿರುವ ಇಸ್ರೇಲ್ ಸೇನೆ ಶತ್ರು ಪಡೆಗೆ ದೊಡ್ಡ ಆಘಾತ ನೀಡಿದೆ.












Click it and Unblock the Notifications