ವಿಶ್ವಕಪ್: ರೊನಾಲ್ಡೊಗೆ ಮಂತ್ರವಾದಿ ಕಾಟ ಶುರು
ಬೆಂಗಳೂರು, ಜೂ.9: ಪೋರ್ಚುಗಲ್ ನ ಅಗ್ರಗಣ್ಯ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೊಗೆ ಮಂತ್ರವಾದಿ ಕಾಟ ಶುರುವಾಗಿದೆಯಂತೆ. ಘಾನಾ ಮೂಲದ ಮಂತ್ರವಾದಿಯೊಬ್ಬ ರೊನಾಲ್ಡೋ ಮೇಲೆ ತನ್ನ ಪ್ರಯೋಗ ಆರಂಭಿಸಿದ್ದು ವಿಶ್ವಕಪ್ ನಲ್ಲಿ ರೊನಾಲ್ಡೋ ಕಾಲು ಎಂದಿನ ಲಯ ಕಾಣುವುದು ಅನುಮಾನ ಎಂಬ ಸುದ್ದಿ ಹಬ್ಬಿದೆ.
ವಿಶ್ವಕಪ್ ಫುಟ್ಬಾಲ್ ಸಂದರ್ಭದಲ್ಲಿ ಈ ರೀತಿ ಅಂತೆ ಕಂತೆಗಳಿಗೇನು ಕಡಿಮೆಯಿಲ್ಲ. ಆಕ್ಟೋಪಸ್, ಗಿಣಿ, ಆನೆ, ಮೊಸಳೆ ಭವಿಷ್ಯ, ಪಾರಿವಾಳ ಮೂಲಕ ಮಾಟ ಎಲ್ಲವೂ ಮಾಮೂಲಿ, ಕಳೆದ ವಿಶ್ವಕಪ್ ನಲ್ಲಿ ಇಂಗ್ಲೆಂಡ್ ತಂಡಕ್ಕೆ ಪಾರಿವಾಳ ಮೂಲಕ ಮಾಟ ಮಾಡಿಸಿ ಸೋಲಿಸಲಾಯಿತು ಎಂಬ ಸುದ್ದಿ ಹಬ್ಬಿತ್ತು.
ಕಳೆದ ಬಾರಿ ಫೀಫಾ 2010ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪಂದ್ಯವೊಂದರಲ್ಲಿ ಬಲಿಷ್ಠ ತಂಡ ಇಂಗ್ಲೆಡ್ ದುರ್ಬಲ ಆಲ್ಜೀರಿಯಾ ವಿರುದ್ಧ ಡ್ರಾ ಸಾಧಿಸಲು ಹೆಣಗಾಡಿತ್ತು. ಆಫ್ರಿಕಾದಲ್ಲಿ ಮಾಟ ಮಂತ್ರ, ಮೂಢನಂಬಿಕೆಗಳಿಗೇನೂ ಕೊರತೆಯಿಲ್ಲ. ಹೀಗಾಗಿ ಪಾರಿವಾಳ ಮೂಲಕ ಇಂಗ್ಲೆಂಡ್ ತಂಡಕ್ಕೆ ಮೋಡಿ ಮಾಡಲಾಗಿತ್ತು ಎಂಬ ಸುದ್ದಿ ಹಬ್ಬಿತ್ತು. [ಇನ್ನಷ್ಟು ಸುದ್ದಿ ಇಲ್ಲಿ ಓದಿ]

ಈಗ ಘಾನಾ ದೇಶದ ನಾನಾ ಕುವಾಕು ಬೊನ್ಸಾಮ್ ಎಂಬ ಹೆಸರಿನ ಮಂತ್ರವಾದಿಯೊಬ್ಬ ಬ್ರೆಜಿಲ್ಲಿನಲ್ಲಿ ಪೋರ್ಚುಗಲ್ ಆಟವೇನು ನಡೆಯುವುದಿಲ್ಲ, ರೊನಾಲ್ಡೊ ಯಶ ಸಾಧಿಸದಂತೆ ನಾನೇ ಮಾಟ ಮಾಡಿದ್ದೇನೆ. ಎಲ್ಲವೂ ನಾನು ಅಂದುಕೊಂಡಂತೆ ನಡೆಯುತ್ತದೆ. ರೊನಾಲ್ಡೊ ಕಾಲಿಗೆ ಪೆಟ್ಟು ಮಾಡಿಕೊಳ್ಳಲಿದ್ದು, ಪೋರ್ಚುಗಲ್ ಟೂರ್ನಿಯಿಂದ ಬೇಗನೇ ಹೊರಬೀಳಲಿದೆ ಎಂದಿದ್ದಾನೆ.
ಘಾನಾ ಘನ ವೈದ್ಯದ ಹೇಳಿಕೆಗೆ ತಕ್ಕಂತೆ ಅಭ್ಯಾಸ ಪಂದ್ಯಗಳಲ್ಲಿ ರೊನಾಲ್ಡೊ ಸರಿಯಾಗಿ ಆಡಿಲ್ಲ, ಕೆಲವು ಪಂದ್ಯಗಳಿಂದಲೇ ಹಿಂದೆ ಸರಿದಿದ್ದಾರೆ. ವಿಶ್ವಕಪ್ ನಲ್ಲಿ ಘಾನಾ ಜಿ ಗುಂಪಿನಲ್ಲಿದ್ದು ತನ್ನ ಮೊದಲ ಪಂದ್ಯವನ್ನು ಭಾನುವಾರ(ಜೂ.22) ರಂದು ಜರ್ಮನಿ ವಿರುದ್ಧ ಆಡಲಿದೆ. ಜಿ ಗುಂಪಿನಲ್ಲಿ ಪೋರ್ಚುಗಲ್ ಹಾಗೂ ಜರ್ಮನಿ ಮುಂದಿನ ಹಂತಕ್ಕೆ ತಲುಪುವ ನಿರೀಕ್ಷೆಯಿದ್ದು, ಯುಎಸ್ ಎ ಹಾಗೂ ಘಾನಾ ಇತರೆ ತಂಡಗಳಾಗಿವೆ.
ಘಾನಾ ಹಾಗೂ ಪೋರ್ಚುಗಲ್ ನಡುವೆ ಜೂ.26 ರಂದು ಪಂದ್ಯ ನಡೆಯಲಿದ್ದು ಅಂದಿನ ದಿನವಾದರೂ ರೊನಾಲ್ಡೊ ಆಡದಂತೆ ಮಾಡುವಲ್ಲಿ ನಾನು ಯಶಸ್ವಿಯಾಗುತ್ತೇನೆ ಎಂದು ಮಂತ್ರವಾದಿ ಬಡಬಡಾಯಿಸಿದ್ದಾನೆ. ಅವರ ಮಾತನ್ನು ನೀವೇ ಕೇಳಿ ನೋಡಿ.ಈ ವಿಡಿಯೋ ಸುಮಾರು 267,027 ಬಾರಿ ನೋಡಲ್ಪಟ್ಟಿದೆ. ನಾಲ್ಕು ನೂರಿಗೂ ಅಧಿಕ ಕಾಮೆಂಟ್ ಗಳು ಸಿಕ್ಕಿವೆ.












Click it and Unblock the Notifications