ಹುಡುಕಿ.. ಹುಡುಕಿ.. ಹೊಸಕಿ ಹಾಕ್ತೀವಿ: ತೈವಾನ್‌ಗೆ ವಾರ್ನಿಂಗ್ ಕೊಟ್ಟ ‘ಡ್ರ್ಯಾಗನ್’!
ಜಗತ್ತಿನಲ್ಲಿ ಮತ್ತೊಂದು ಮಹಾಯುದ್ಧ ನಡೆಯೋದು, ಬಹುತೇಕ ಗ್ಯಾರಂಟಿ ಆಗುತ್ತಿದೆ. ಆ ಕಡೆ ರಷ್ಯಾ & ಉಕ್ರೇನ್ ಬಡಿದಾಡಿ ಸಾಯುತ್ತಿವೆ, ಇನ್ನೊಂದು ಕಡೆ ಹಮಾಸ್ & ಇಸ್ರೇಲ್‌ನ ಮಧ್ಯೆ ಬೆಂಕಿ ಹತ್ತಿ ಗಾಜಾ ಪಟ್ಟಿ ನರಳಿ ಹೋಗಿದೆ. ಹೀಗಿದ್ದಾಗ ಇರಾನ್ & ಇಸ್ರೇಲ್‌ಗೆ ಕೂಡ ಸೇಡು ಮೆತ್ತಿದೆ. ಈ ಎಲ್ಲಾ ಟೆನ್ಷನ್ ನಡುವೆ ಇದೀಗ ತೈವಾನ್ ವಿರುದ್ಧ ಯುದ್ಧ ಮಾಡುವ ಎಚ್ಚರಿಕೆ ನೀಡಿದೆ 'ಡ್ರ್ಯಾಗನ್' ಚೀನಾ!
ಅಂದಹಾಗೆ ತೈವಾನ್ ಮೇಲೆ ಮೊದಲಿನಿಂದ ಕೂಡ ಕಣ್ಣಿಟ್ಟು ಕಾಯುತ್ತಿದ್ದ ಚೀನಾ ಈಗ, ಘೋರ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಈ ಪೈಕಿ ತೈವಾನ್ ಸುತ್ತಮುತ್ತ ಈಗಾಗಲೇ ಯುದ್ಧ ನೌಕೆ & ಯುದ್ಧ ವಿಮಾನಗಳನ್ನ ನಿಯೋಜನೆ ಮಾಡಿರುವ ಚೀನಾ ರಣಕಹಳೆಯ ಮೊಳಗಿಸಲು ಸಜ್ಜಾಗಿದೆ. ಇದು ತೈವಾನ್ ಮಾತ್ರವಲ್ಲ ಇಡೀ ಜಾಗತಿಕ ಆರ್ಥಿಕ ಪರಿಸ್ಥಿತಿಗೆ ಹೊಸ ಆತಂಕ ತಂದೊಡ್ಡಿದೆ. ಈಗಾಗಲೇ ರಷ್ಯಾ & ಉಕ್ರೇನ್ ಯುದ್ಧದ ಪರಿಣಾಮ ಜಗತ್ತು ನರಳಾಡಿ ಹೋಗಿದೆ. ಹೀಗಿದ್ದಾಗ ಮತ್ತೊಂದು ಯುದ್ಧ ಶುರುವಾದರೆ ಕಥೆ ಏನು? ಎನ್ನುವ ವಾತಾವರಣ ನಿರ್ಮಾಣ ಆಗಿದೆ.

ಹೊಸ ಅಧ್ಯಕ್ಷ ಬಂದ ನಂತರ ಕಿರಿಕ್!
ಕೆಲವು ದಿನಗಳಿಂದ ತೈವಾನ್ ಸುತ್ತ ಸೇನಾ ತಾಲೀಮು ನಡೆಸುತ್ತಿರುವ ಚೀನಾ ಈಗ ನೇರವಾಗಿ ಯುದ್ಧಕ್ಕೆ ಸಿದ್ಧ ಎಂಬ ಸಂದೇಶ ರವಾನಿಸಿದೆ. ತೈವಾನ್ ವಿರುದ್ದ ಯುದ್ಧ ನಡೆಸುವ ಬಗ್ಗೆ ಇದೀಗ ಚೀನಾ ಎಚ್ಚರಿಕೆ ಸಂದೇಶ ನೀಡಿದೆ. ಹಾಗೇ ಮತ್ತೊಂದು ಕಡೆ ತೈವಾನ್ ದೇಶವನ್ನ ಪೂರ್ತಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕೂಡ ಚೀನಾ ಸಿದ್ಧವಿದೆ ಎಂಬ ಮಾತುಗಳು ಈಗ ಚರ್ಚೆಗೆ ಕಾರಣವಾಗಿವೆ. ಅಲ್ಲದೆ ಮುಂದಿನ ದಿನಗಳಲ್ಲಿ ಎರಡೂ ದೇಶಗಳ ನಡುವೆ ಭೀಕರ ಸಮರ ನಡೆಯುವ ಮುನ್ಸೂಚನೆ ಈ ಮೂಲಕ ಸಿಗುತ್ತಿದೆ. ತೈವಾನ್‌ಗೆ ಹೊಸ ಅಧ್ಯಕ್ಷ ಬಂದ ನಂತರ ಈ ರೀತಿಯ ಬೆಳವಣಿಗೆ ಹೆಚ್ಚಾಗುತ್ತಿದೆ.
ನೇರವಾಗಿ ಯುದ್ಧಕ್ಕೆ ಆಹ್ವಾನ!
ತೈವಾನ್ ಇತ್ತೀಚೆಗೆ ಹೊಸ ನಾಯಕನನ್ನ ನೋಡುತ್ತಿದೆ, ಲಾಯ್ ಚಿಂಗ್-ಟೆ ತೈವಾನ್ ದ್ವೀಪ ರಾಷ್ಟ್ರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೇವಲ 3 ದಿನದ ನಂತರ ಚೀನಾ ಸೇನೆ, ಯುದ್ಧ ತಾಲೀಮು ಆರಂಭ ಮಾಡಿತ್ತು. ಅಲ್ಲದೆ ತೈವಾನ್ ಅಧ್ಯಕ್ಷರ ಭಾಷಣವನ್ನು ಚೀನಾ ಖಂಡಿಸಿ, ಎಚ್ಚರಿಕೆ ಸಂದೇಶ ರವಾನೆ ಮಾಡಿತ್ತು. ಸತತವಾಗಿ ಚೀನಾ & ತೈವಾನ್ ನಡುವೆ ಈ ಕುರಿತು ತಿಕ್ಕಾಟವೂ ನಡೆಯುತ್ತಿದೆ. ಆದರೂ ಈ ಕುರಿತು ಯಾವುದೇ ರೀತಿಯಲ್ಲಿ ತಲೆಕೆಡಸಿಕೊಳ್ಳದ ತೈವಾನ್, ಚೀನಾ ಹೇಳಿಕೆಗೆ ಒತ್ತು ನೀಡಿರಲಿಲ್ಲ. ಆದರೆ ಈಗ ಚೀನಾ ನೇರವಾಗಿ ಯುದ್ಧಕ್ಕೆ ಆಹ್ವಾನ ನೀಡುತ್ತಿದೆ. ಇದು ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದೆ.












Click it and Unblock the Notifications