ಭಾರತೀಯ ಸೇನೆ ಬೇಡ ಹೋಗು ಎಂದಿದ್ದ ಯುವಕನೇ ಈಗ ಉಕ್ರೇನ್‌ನಲ್ಲಿ ಸೈನಿಕ!
ಕೀವ್, ಮಾರ್ಚ್ 8: ಉಕ್ರೇನ್ ನೆಲದಲ್ಲಿ ರೌದ್ರನರ್ತನ ತೋರುತ್ತಿರುವ ರಷ್ಯಾದ ವಿರುದ್ಧ ಪ್ರಜೆಗಳೇ ಆಯುಧವನ್ನು ಕೈಗೆತ್ತಿಕೊಳ್ಳುವಂತೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕರೆ ನೀಡಿದ್ದು ಆಗಿದೆ. ಉಕ್ರೇನ್ ಪರವಾಗಿ ಭಾರತೀಯ ವಿದ್ಯಾರ್ಥಿಯೊಬ್ಬ ಅಸ್ತ್ರ ಹಿಡಿದು ನಿಂತಿರುವುದು ಈದೀಗ ಸಾಕಷ್ಟು ಚರ್ಚೆ ಆಗುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧವು 13ನೇ ದಿನಕ್ಕೆ ಕಾಲಿಟ್ಟಿದೆ. ಇದರ ಮಧ್ಯೆ ಉಕ್ರೇನ್ ಪ್ರಜೆಗಳ ಪರವಾಗಿ ರಷ್ಯಾದ ವಿರುದ್ಧ ಭಾರತೀಯ ವಿದ್ಯಾರ್ಥಿಯೊಬ್ಬರು ಯುದ್ಧಕ್ಕೆ ನಿಂತಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆಯಿಂದ ಮಾಹಿತಿ ಹೊರ ಬಿದ್ದಿದೆ.
ಈಗ ಉಕ್ರೇನ್ ಪರವಾಗಿ ಶಸ್ತ್ರಾಸ್ತ್ರ ಹಿಡಿದು ನಿಂತಿರುವ ಭಾರತೀಯ ಯುವಕನು ಒಂದು ಕಾಲದಲ್ಲಿ ಭಾರತೀಯ ಸೇನೆ ಸೇರುವ ಆಶಯವನ್ನು ಹೊಂದಿದ್ದ. ಆದರೆ ಭಾರತೀಯ ಸೇನೆ ಆತನನ್ನು ಎರಡು ಬಾರಿ ತಿರಸ್ಕರಿಸಿತ್ತು ಎಂದು ತಿಳಿದು ಬಂದಿದೆ. ಅಸಲಿಗೆ ಉಕ್ರೇನ್ ನೆಲದಲ್ಲಿ ಸೇನೆಯ ಪರವಾಗಿ ನಿಂತಿರುವ ಭಾರತೀಯ ಯುವಕನ ಹಿನ್ನಲೆ ಏನು?, ಆತ ಉಕ್ರೇನ್‌ಗೆ ಹೋಗಿದ್ದು ಏಕೆ?, ಭಾರತೀಯ ಸೇನೆ ಆತನನ್ನು ತಿರಸ್ಕರಿಸಿದ್ದು ಏಕೆ? ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಜಾರ್ಜಿಯನ್ ನ್ಯಾಷನಲ್ ಲೀಜನ್ ಸೇರಿದ ಭಾರತೀಯ ವಿದ್ಯಾರ್ಥಿ:
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ತೀವ್ರತೆ ಹೆಚ್ಚುತ್ತಿರುವುದರ ಮಧ್ಯೆ ತನ್ನ ಪ್ರಜೆಗಳಿಗೆ ಝೆಲೆನ್ಸ್ಕಿ ಸಂದೇಶವನ್ನು ರವಾನಿಸಿ ಆಗಿದೆ. ದೇಶದ ರಕ್ಷಣೆಗಾಗಿ ಶಸ್ತ್ರಾಸ್ತ್ರ ಹಿಡಿದು ನಿಲ್ಲುವಂತೆ ಕರೆ ನೀಡಿದ್ದು, ಇದರ ಮಧ್ಯೆ ಭಾರತೀಯ ಪ್ರಜೆ ಆಗಿರುವ ಸೈನಿಕೇಶ್ ರವಿಚಂದ್ರನ್ ಉಕ್ರೇನ್ ಪರ ಸೈನಿಕರಾಗಿ ಹೋರಾಡುತ್ತಿದ್ದಾರೆ. ಜಾರ್ಜಿಯನ್ ನ್ಯಾಷನಲ್ ಲೀಜನ್ ಪಡೆಗೆ ಸೇರ್ಪಡೆ ಆಗಿರುವ ಸೈನಿಕೇಶ್, ರಷ್ಯಾ ವಿರುದ್ಧ ಶಸ್ತ್ರಾಸ್ತ್ರ ಹಿಡಿದು ಯುದ್ಧದಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸೈನಿಕೇಶ್ ರವಿಚಂದ್ರನ್ ಅವರಿಗೆ ಸೇನೆ ಸೇರುವ ಕನಸು:
ತಮಿಳುನಾಡಿನ 21 ವರ್ಷದ ಸೈನಿಕೇಶ್ ರವಿಚಂದ್ರನ್ ಮೂಲತಃ ಸುಬ್ರಮಣಿಯಂ ಪಾಲಯಮ್ ನಗರದ ನಿವಾಸಿಯಾಗಿದ್ದಾರೆ. ಸ್ಕೂಲ್ ವಿದ್ಯಾಭ್ಯಾಸ ಪೂರ್ಣಗೊಳ್ಳುತ್ತಿದ್ದಂತೆ ಸೈನಿಕೇಶ್ ಭಾರತೀಯ ಸೇನೆಗೆ ಸೇರುವುದಕ್ಕಾಗಿ ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾದವು. ತದನಂತರ 2018ರಲ್ಲಿ ಖಾರ್ಕಿವ್ ನಗರದ ನ್ಯಾಷನಲ್ ಏರೋಸ್ಪೇಸ್ ಯೂನಿವರ್ಸಿಟಿಯಲ್ಲಿ ಕೋರ್ಸ್ ತೆಗೆದುಕೊಂಡರು.
ಭಾರತೀಯ ಸೇನೆಯಿಂದ ತಿರಸ್ಕೃತಗೊಂಡಿದ್ದ ವಿದ್ಯಾರ್ಥಿ:
ಇಂಡಿಯನ್ ಆರ್ಮಿಗೆ ಸೇರುವ ಕನಸು ಕಂಡಿದ್ದ ಸೈನಿಕೇಶ್ ಅದಕ್ಕಾಗಿ ಎಲ್ಲ ರೀತಿ ಪ್ರಯತ್ನ ಪಟ್ಟಿದ್ದರು. ಆದರೆ ಎತ್ತರವಿಲ್ಲ ಎಂಬ ಕಾರಣಕ್ಕೆ ಎರಡು ಬಾರಿ ರಿಜೆಕ್ಟ್ ಆಗಿದ್ದರು. ಇದಾದ ನಂತರ ಅಮೆರಿಕನ್ ಸೇನೆಗೆ ಸೇರುವುದಕ್ಕೆ ಸಂಬಂಧಿಸಿದಂತೆ ಮನವಿ ಸಲ್ಲಿಸಲು ಸೈನಿಕೇಶ್ ರವಿಚಂದ್ರನ್ ಚೆನ್ನೈನಲ್ಲಿರುವ ಅಮೆರಿಕನ್ ದೂತವಾಸ ಕಚೇರಿ ಅಧಿಕಾರಿಯನ್ನೂ ಸಂಪರ್ಕಿಸಿದ್ದರು. ಅದೂ ಸಹ ಸಾಧ್ಯವಾಗುವುದಿಲ್ಲ ಎಂದು ತಿಳಿದ ನಂತರದಲ್ಲಿ ಖಾರ್ಕಿವ್ ನಗರದಲ್ಲಿರುವ ನ್ಯಾಷನಲ್ ಏರೋಸ್ಪೇಸ್ ಯೂನಿವರ್ಸಿಟಿಗೆ ಸೇರ್ಪಡೆಯಾಗಿದ್ದರು.
ಸೈನಿಕೇಶ್ ಬಗ್ಗೆ ಕುಟುಂಬ ಸದಸ್ಯರು ಹೇಳುವುದೇನು?:
"ಕಳೆದ ಒಂದು ತಿಂಗಳ ಹಿಂದೆ ಕರೆ ಮಾಡಿದ್ದ ಸೈನಿಕೇಶ್, ತನಗೆ ವಿಡಿಯೋ ಡೆವಲಪ್ ಮೆಂಟ್ ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಉದ್ಯೋಗ ಸಿಕ್ಕಿರುವುದಾಗಿ ಹೇಳಿಕೊಂಡಿದ್ದನು. ಉಕ್ರೇನ್ ನೆಲದಲ್ಲಿ ಯುದ್ಧ ಶುರುವಾದ ನಂತರದಲ್ಲಿ ನಾಲ್ಕು ದಿನಗಳಿಂದ ನಮ್ಮನ್ನು ಆತ ಸಂಪರ್ಕಿಸಿರಲಿಲ್ಲ. ಆದರೆ ಇತ್ತೀಚಿಗೆ ತಮಿಳುನಾಡಿನ ಯುವಕನೊಬ್ಬ ಉಕ್ರೇನ್ ಪರವಾಗಿ ಯುದ್ಧದಲ್ಲಿ ಭಾಗಿಯಾಗಿದ್ದಾರೆ ಎಂಬ ಸುದ್ದಿಯನ್ನು ನೋಡಿ ಆಘಾತವಾಗುತ್ತಿದೆ," ಎಂದು ಸೈನಿಕೇಶ್ ರವಿಚಂದ್ರನ್ ಸಂಬಂಧಿಕರು ಹೇಳಿದ್ದಾರೆ.












Click it and Unblock the Notifications