ಉತ್ತರ ಭಾರತದ ಜನರೇಕೆ ದಕ್ಷಿಣಕ್ಕೆ ವಲಸೆ ಬರುತ್ತಾರೆ? ಅಂಕಿಅಂಶ, ಮಾಹಿತಿ, ವಿವರ, ವಿಶ್ಲೇಷಣೆ ಇಲ್ಲಿದೆ
ಲಕ್ಷಾಂತರ ಜನರು ಕೆಲಸ ಹುಡುಕಿಕೊಂಡು ಹಿಂದಿ ಹೃದಯಭಾಗದಿಂದ ದಕ್ಷಿಣ ಭಾರತಕ್ಕೆ ಏಕೆ ವಲಸೆ ಹೋಗುತ್ತಾರೆ ಎಂಬುದನ್ನು ರಾಜಕಾರಣಿಗಳು ಅರ್ಥಮಾಡಿಕೊಳ್ಳುವುದು ಉಪಯುಕ್ತವಾಗಿದೆ.
ನವದೆಹಲಿ, ಮಾರ್ಚ್ 13: ತಮಿಳುನಾಡಿನಲ್ಲಿ ಬಿಹಾರಿಗಳ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪವೀಗ ವ್ಯಾಪಕ ಚರ್ಚೆಗೆ ಒಳಗಾಗಿದೆ. ಬಿಹಾರದ ಬಿಜೆಪಿ ಮುಖಂಡರ ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ತಮಿಳುನಾಡಿನ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಮುಖಂಡರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ವಿಡಿಯೊಗಳು ತಮಿಳರಿಗೆ ಸಂಬಂಧಿದ್ದಲ್ಲವೆಂದು ತಿಳಿದುಬಂದಿದೆ. ಇದೀಗ ಮತ್ತೊಂದು ಸುತ್ತಿನ ಚರ್ಚೆಗೆ ಗ್ರಾಸವಾಗಿದೆ.
ರಾಜಕಾರಣಿಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಆದರೆ, ಲಕ್ಷಾಂತರ ಜನರು ಕೆಲಸ ಹುಡುಕಿಕೊಂಡು ಹಿಂದಿ ಹೃದಯಭಾಗದಿಂದ ದಕ್ಷಿಣ ಭಾರತಕ್ಕೆ ಏಕೆ ವಲಸೆ ಹೋಗುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಉಪಯುಕ್ತವಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಜಾರ್ಖಂಡ್ ರಾಜ್ಯಗಳ ಜನರು ಹೆಚ್ಚಾಗಿ ದಕ್ಷಿಣದ ರಾಜ್ಯಗಳಿಗೆ ವಲಸೆ ಹೋಗುತ್ತಾರೆ.

ಈ ಆರು ರಾಜ್ಯಗಳು ಒಟ್ಟಾಗಿ ಸುಮಾರು 52 ಕೋಟಿ ಜನಸಂಖ್ಯೆಯನ್ನು ಹೊಂದಿವೆ. 2018 ರಲ್ಲಿ, ಈ ಆರು ರಾಜ್ಯಗಳು ಸೇರಿ ತಮಿಳುನಾಡಿನಷ್ಟು ಕಾರ್ಖಾನೆಗಳನ್ನು ಹೊಂದಿದ್ದವು. 7 ಕೋಟಿ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ತಮಿಳುನಾಡು. ತಮಿಳುನಾಡಿನಲ್ಲಿರುವ ಕಾರ್ಖಾನೆಗಳು ಮಧ್ಯ ಮತ್ತು ಉತ್ತರ ಭಾರತದ ಜನರನ್ನು ಹೆಚ್ಚಾಗಿ ಕೆಲಸಕ್ಕೆ ನೇಮಿಸಿದೆ.
ಇದಲ್ಲದೆ, ದಕ್ಷಿಣ ಭಾರತದಲ್ಲಿನ ವೇತನವು ದೇಶದ ಉಳಿದ ಭಾಗಗಳಿಗೆ ಹೋಲಿಸಿದರೆ ಗಮನಾರ್ಹವಾಗಿ ಹೆಚ್ಚಾಗಿದೆ. ಅಂದರೆ, ನೀವು ಉತ್ತರ ಭಾರತದಲ್ಲಿ ದುಡಿಯುವ ವಯಸ್ಸಿನವರಾಗಿದ್ದರೆ, ಸಂಘಟಿತ ವಲಯದಲ್ಲಿ ನಿಮಗೆ ಉದ್ಯೋಗ ಪಡೆಯುವ ಸರಳ ಸಂಭವನೀಯತೆ ಕಡಿಮೆ. ನಿಮ್ಮ ವೇತನವು ಕಡಿಮೆ ಇರುತ್ತದೆ. ಹೀಗಾಗಿ ಉತ್ತರ ಭಾರತದ ಹೆಚ್ಚು ಜನರು ಉದ್ಯೋಗಗಳನ್ನು ಅರಸಿಕೊಂಡು ದಕ್ಷಿಣದ ರಾಜ್ಯಗಳಿಗೆ ವಲಸೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ.

ಕಾರ್ಖಾನೆಗಳಿಗೆ ಮಾನವ ಬಂಡವಾಳದ ಅಗತ್ಯವಿರುತ್ತದೆ. ಉತ್ತಮ ಆಡಳಿತ, ಕಾನೂನಿನ ನಿಯಮಕ್ಕೆ ಬದ್ಧತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಉತ್ತಮ ಶೈಕ್ಷಣಿಕ ಮತ್ತು ಆರೋಗ್ಯ ವ್ಯವಸ್ಥೆ ಇರುವ ಸ್ಥಳಗಳಲ್ಲಿ ಸಾಮಾನ್ಯವಾಗಿ ಕಾರ್ಖಾನೆಗಳು ಸ್ಥಾಪಿಸಲ್ಪಡುತ್ತವೆ.
ಉದಾಹರಣೆಗೆ ತಮಿಳುನಾಡನ್ನು ತೆಗೆದುಕೊಳ್ಳಬಹುದು. ಈ ರಾಜ್ಯವು ಹೈಯರ್ ಸೆಕೆಂಡರಿ ಮಟ್ಟದಲ್ಲಿ ಶೇ 84 ರ ಒಟ್ಟು ದಾಖಲಾತಿ ಅನುಪಾತವನ್ನು ಹೊಂದಿದೆ. ಇದು ದೇಶದಲ್ಲೇ ಅತ್ಯಧಿಕವಾಗಿದೆ. ಬಿಹಾರದಲ್ಲಿ ಶೇ 29 ರಷ್ಟು ಹೈಯರ್ ಸೆಕೆಂಡರಿ ಮಟ್ಟದಲ್ಲಿ ದಾಖಲಾತಿ ಅನುಪಾತವನ್ನು ಹೊಂದಿದೆ. 2019 ರ ಮಾದರಿ ನೋಂದಣಿ ವ್ಯವಸ್ಥೆಯ ಡೇಟಾದ ಪ್ರಕಾರ, ಉತ್ತರ ಪ್ರದೇಶದ 41 (ಪ್ರತಿ 1,000 ಜನನಗಳಿಗೆ ಶಿಶು ಮರಣಗಳು) ಅಥವಾ ಬಿಹಾರದ 29 ರ ವಿರುದ್ಧ ತಮಿಳುನಾಡಿನ ಶಿಶು ಮರಣ ಪ್ರಮಾಣ ಶೇ 15 ರಷ್ಟಿದೆ.

ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ವಿರುದ್ಧ ದೈಹಿಕ ಹಲ್ಲೆ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿರುವ ಬಿಹಾರ ಮತ್ತು ಉತ್ತರ ಭಾರತದ ಉಳಿದ ರಾಜಕೀಯ ಪಕ್ಷಗಳು ಮೂಲಭೂತ ಆಡಳಿತವನ್ನು ಸಾಧಿಸುವಲ್ಲಿ ಗಮನಹರಿಸಬೇಕಿದೆ. ತಮ್ಮ ರಾಜ್ಯಗಳು ದಕ್ಷಿಣದ ರಾಜ್ಯಗಳಿಗಿಂತ ಏಕೆ ಹಿಂದುಳಿದಿವೆ ಎಂದು ತಮ್ಮದೇ ಸರ್ಕಾರಗಳನ್ನು ಕೇಳುವುದು ಒಳ್ಳೆಯದು. ರಾಜಕೀಯ ಲಾಭಕ್ಕಾಗಿ ನಕಲಿ ಸುದ್ದಿ ಅಥವಾ ದ್ವೇಷವನ್ನು ಹರಡುವುದಕ್ಕಿಂತ, ಇದನ್ನು ಮಾಡುವುದು ಒಳಿತು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.
*ಈ ವರದಿಯನ್ನು 'ದಿ ಪ್ರಿಂಟ್' ವೆಬ್‌ಸೈಟ್ ಮಾಡಿದೆ.












Click it and Unblock the Notifications