ಫೈರ್ ಬ್ರಾಂಡ್ ಯೋಗಿ ಅಂದು ಸಂಸತ್ತಿನಲ್ಲಿ ಅತ್ತಿದ್ಯಾಕೆ?

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 21: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ ಯೋಗಿ ಆದಿತ್ಯನಾಥ್ ಅವರು ಸಿಡಿಗುಂಡಿನಂಥವರು ಎಂಬ ಮಾತು ಚಾಲ್ತಿಯಲ್ಲಿದೆ. ಅದು ನಿಜವೂ ಹೌದು.

ತಮ್ಮ ತತ್ವ, ಸಿದ್ಧಾಂತಗಳಿಗೆ ಯಾರೇ ಅಡ್ಡ ಬಂದರೂ, ಖುದ್ದು ಬಿಜೆಪಿಯ ಹಿರಿಯ ನಾಯಕರೇ ಅಡ್ಡಿಯಾದರೂ ಡೋಂಟ್ ಕೇರ್ ಎನ್ನುತ್ತಾರೆಂಬ ಪ್ರತೀತಿ ಅವರ ಬಗ್ಗೆ ಹಬ್ಬಿದೆ. ಹಾಗಾಗಿಯೇ, ಅವರನ್ನು ಫೈರ್ ಬ್ರಾಂಡ್ ರಾಜಕಾರಣಿ ಎಂದು ಹೇಳುವುದು.

ಆದರೆ, ಇದೇ ಯೋಗಿ, ಹಿಂದೊಮ್ಮೆ ಸಂಸತ್ತಿನಲ್ಲಿ ಗಳಗಳನೆ ಅತ್ತುಬಿಟ್ಟಿದ್ದರು. ರಾಜಕೀಯದಲ್ಲಿ ತಮ್ಮ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಅಸಹಾಯಕತೆ ವ್ಯಕ್ತಪಡಿಸಿದ್ದ ಅವರು, ಲೋಕಸಭೆಯಲ್ಲಿ ಉತ್ತರ ನೀಡುವಾಗ ಕಣ್ಣೀರಾಗಿದ್ದರು.[ಯುಪಿ ಸಿಎಂ ಆದಿತ್ಯನಾಥ್ ಪರಮಾಪ್ತ ಈ ಮುಸ್ಲಿಂ ಯುವಕ]

15 ದಿನಗಳ ಕಾಲ ಜೈಲು ವಾಸ

15 ದಿನಗಳ ಕಾಲ ಜೈಲು ವಾಸ

ಅದು 2007. ಕೇಂದ್ರದಲ್ಲಿ ಯುಪಿಎ ಅಧಿಕಾರದಲ್ಲಿತ್ತು ಹಾಗೂ ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಸರ್ಕಾರ ಅಧಿಕಾರದಲ್ಲಿತ್ತು. ಆಗ, ನಡೆದಿದ್ದ ಗೋರಖ್ ಪುರ ದೊಂಬಿ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ್ ಬಂಧಿಸಲ್ಪಟ್ಟು 15 ದಿನಗಳ ಕಾಲ ಜೈಲು ವಾಸವನ್ನು ಅನುಭವಿಸಿದ್ದರು. ಆಗ, ಅವರು, ಲೋಕಸಭೆಯ ಸದಸ್ಯರೂ ಹೌದು.

ಅಸಹನೆ ಹೆಚ್ಚಾಗಿತ್ತು

ಅಸಹನೆ ಹೆಚ್ಚಾಗಿತ್ತು

ಆ ಬಂಧನ ಅವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಒಂದು ಧ್ಯೇಯ, ಗುರಿಯೊಂದಿಗೆ ಸಾಗುತ್ತಿರುವ ತಮ್ಮನ್ನು ರಾಜಕೀಯ ಷಡ್ಯಂತ್ರದಿಂದ ಜೈಲಿಗೆ ತಳ್ಳಲಾಗಿತ್ತೆಂಬುದು ಅವರ ವಾದವಾಗಿತ್ತು.[ಆ ಒಂದು ಘಟನೆಯೇ ಯೋಗಿ ಸಿಎಂ ಆಗಲು ಮೂಲ ಕಾರಣ!]

ಕಣ್ಣೀರಾದ ಯೋಗಿ

ಕಣ್ಣೀರಾದ ಯೋಗಿ

ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ನಂತರ, ಎಂದಿನಂತೆ ಲೋಕಸಭೆ ಕಲಾಪಕ್ಕೆ ಹಾಜರಾಗಿದ್ದ ಯೋಗಿಯವರನ್ನು ಅಂದಿನ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಪ್ರಶ್ನೆಯೊಂದಕ್ಕೆ ಉತ್ತರಿಸುವಂತೆ ಸೂಚಿಸಿದ್ದರು.

ಸದನದಲ್ಲಿ ಅತ್ತಿದ್ದರು

ಸದನದಲ್ಲಿ ಅತ್ತಿದ್ದರು

ಮೊದಲೇ ಖನ್ನಿರಾಗಿ ಕುಳಿತಿದ್ದ ಯೋಗಿ, ತಾವು ಕುಳಿತ ಆಸನದಿಂದ ಪ್ರಶ್ನೆಗೆ ಉತ್ತರಿಸಲು ಮೇಲೆದ್ದರು. ಆದರೆ, ಏಕೋ ಅವರ ಮನಸ್ಸು, ತನ್ನಲ್ಲಿದ್ದ ನೋವು, ಬೇಗುದಿಯನ್ನು ಸದನ ಸದಸ್ಯರೊಂದಿಗೆ ಹಂಚಿಕೊಳ್ಳಬೇಕೆನ್ನಿಸಿತೋ ಏನೋ ಗೊತ್ತಿಲ್ಲ. ತಕ್ಷಣವೇ ಗಳಗಳನೇ ಅಳಲಾರಂಭಿಸಿದರು.

ಹಾಗೆ ಅತ್ತರೂ ಯೋಗಿ ನಡೆ ಸ್ಫೂರ್ತಿಯುತ

ಹಾಗೆ ಅತ್ತರೂ ಯೋಗಿ ನಡೆ ಸ್ಫೂರ್ತಿಯುತ

ಹೀಗೆ, ಚಿಕ್ಕ ಮಕ್ಕಳಂತೆ ಅತ್ತಿದ್ದ ಯೋಗಿ, ಅಂದು ಸ್ಪೀಕರ್ ಗೆ ''ರಾಜಕೀಯ ಷಡ್ಯಂತ್ರ ನಡೆಸಿ ನನ್ನನ್ನು ಜೈಲಿಗೆ ಅಟ್ಟಲಾಗಿದೆ. ಸದನವು ಸಂಸದರಿಗೆ ರಕ್ಷಣೆ ಕೊಡಬೇಕು. ಇಲ್ಲವಾದಲ್ಲಿ ನನಗೆ ಈ ಸಂಸತ್ ಸದಸ್ಯತ್ವ ಸ್ಥಾನವೇ ಬೇಡ'' ಎಂದು ವೇದನೆ ವ್ಯಕ್ತಪಡಿಸಿದ್ದರು..

ಅದೇ ಕೊನೆ. ಯೋಗಿ ಹೀಗೆ ಬಹಿರಂಗವಾಗಿ ಅತ್ತಿದ್ದು ಎನ್ನುತ್ತಾರೆ ಅವರ ಆಪ್ತ ಮೂಲಗಳು. ಅದೇನೇ ಇರಲಿ ಯೋಗಿ ಅನುಭವಿಸಿದ್ದ ಆ ಪರಿಸ್ಥಿತಿ ಇಂದಿನ ಯುವ ಸಾಧಕರಿಗೆ ಸ್ಫೂರ್ತಿದಾಯಕ. ಯಾರೇ ಇರಲಿ, ಜೀವನದಲ್ಲಿ ಏರು ಪೇರುಗಳು ಸಹಜ. ಸನ್ನಿವೇಶಗಳಿಗೆ ತಲೆಬಾಗಿ ಸಾಧನಾ ಪಥದಿಂದ ಹಿಂದಿರುಗದೇ ಮುಂದುವರಿದರೆ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಇಲ್ಲಿ ವೇದ್ಯವಾಗುತ್ತದೆ.

ಚಿತ್ರ ಕೃಪೆ: ಝೀ ನ್ಯೂಸ್ ಜಾಲತಾಣ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The five-time BJP MP Yodi Adityanath had once cried bitterly in Parliament after he had been jailed for 11 days by the Mulayam government in 2007.
Please Wait while comments are loading...