ಮಣಿಪುರದಲ್ಲಿ ಆತಂಕ ಹೆಚ್ಚಳ: ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡುತ್ತೇನೆ ಎಂದ ಮಮತಾ ಬ್ಯಾನರ್ಜಿ
ಗುವಾಹಟಿ, ಮೇ. 30: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಜೀವಗಳು ಬಲಿಯಾಗುತ್ತಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಮಣಿಪುರ ಪ್ರವಾಸದಲ್ಲಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಿಂಸಾಚಾರ ಪೀಡಿತ ರಾಜ್ಯಕ್ಕೆ ಭೇಟಿ ನೀಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹಿಂಸಾಚಾರದ ಸಂತ್ರಸ್ತರ ಪರವಾಗಿ ನಿಲ್ಲಲು ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಲು ಸಿದ್ಧರಾಗುತ್ತಿದ್ದಾರೆ. ಇನ್ನು, ಗಾಯಗೊಂಡಿದ್ದ ಮೂವರು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಮೇ 3 ರಂದು ಪ್ರಾರಂಭವಾದ ಹಿಂಸಾಚಾರದಲ್ಲಿ ಕಳೆದುಹೋದ ಜೀವಗಳ ಸಂಖ್ಯೆ 80 ಎನ್ನಲಾಗಿದೆ. ಕೆಲವರು ಸಾವಿನ ಸಂಖ್ಯೆ 100 ಕ್ಕಿಂತ ಹೆಚ್ಚು ಎಂದು ಹೇಳಿದ್ದಾರೆ.

"ನಾನು ಮಣಿಪುರಕ್ಕೆ ಭೇಟಿ ನೀಡಲು ಮತ್ತು ಕೋಮು ಸಂಘರ್ಷದ ಸಂತ್ರಸ್ತರ ಪರವಾಗಿ ನಿಲ್ಲಲು ಬಯಸುತ್ತೇನೆ. ಅಲ್ಲಿಗೆ ಹೋಗಲು ಸಾಧ್ಯವಾಗುವಂತೆ ಅವರಿಂದ ಮತ್ತು ಸೇನೆಯಿಂದ ಅನುಮತಿ ಕೋರಿ ನಾನು ಕೇಂದ್ರಕ್ಕೆ ಪತ್ರ ಬರೆಯುತ್ತಿದ್ದೇನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. "ಮಣಿಪುರದಲ್ಲಿ ಏನೇ ಆಗಿದ್ದರೂ ಬಹಳ ಆತಂಕಕಾರಿ ಘಟನೆಯಾಗಿದೆ. ಈ ಕೋಮುಗಲಭೆ ಮತ್ತು ಚರ್ಚ್‌ಗಳಿಗೆ ಬೆಂಕಿ ಹಚ್ಚಿರುವುದನ್ನು ನಾನು ಖಂಡಿಸುತ್ತೇನೆ. ಇಂಫಾಲಕ್ಕೆ ಭೇಟಿ ನೀಡಲು ಕೇಂದ್ರವು ನನಗೆ ಅವಕಾಶ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಬಂಗಾಳ ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಮಣಿಪುರ ಕಲಹವು "ಮಾನವ ನಿರ್ಮಿತ" ಎಂದು ಮಮತಾ ಬ್ಯಾನರ್ಜಿ ಪ್ರತಿಪಾದಿಸಿದ್ದಾರೆ ಮತ್ತು ರಾಜ್ಯದ ಬಿಜೆಪಿ ಸರ್ಕಾರವು ಸಮುದಾಯಗಳನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ವಾರದ ಆರಂಭದಲ್ಲಿ, ಬಂಗಾಳದಲ್ಲಿ ಮಣಿಪುರದಂತಹ ಸಂಘರ್ಷಗಳನ್ನು ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು.

ಕಳೆದ ಕೆಲವು ದಿನಗಳಿಂದ ಭದ್ರತಾ ಪಡೆಗಳು 40 ಕುಕಿ ಉಗ್ರರನ್ನು ಹತ್ಯೆಗೈದಿರುವ ಕುರಿತು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಭಾನುವಾರ ನೀಡಿದ ಹೇಳಿಕೆಯು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಬುಡಕಟ್ಟು ಸಮುದಾಯಗಳು ತಮ್ಮ ಮೇಲಿನ ದಾಳಿಗೆ ರಾಜ್ಯ ಆಡಳಿತವನ್ನು ದೂಷಿಸುತ್ತಿವೆ.
"ಮಣಿಪುರ ಪೊಲೀಸ್ ಸಮವಸ್ತ್ರದಲ್ಲಿ ವೇಷ ಧರಿಸಿದ ಕಣಿವೆಯ ಭೂಗತ ಸಿಬ್ಬಂದಿ ಆದಿವಾಸಿಗಳ ವಿರುದ್ಧ ಭೀಕರ ಅಪರಾಧವನ್ನು ಮುನ್ನಡೆಸುತ್ತಿರುವ ದುಷ್ಕರ್ಮಿಗಳು ಎಂದು ತಿಳಿದುಬಂದಿದೆ" ಎಂದು ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಮಾನ್ಯತೆ ಪಡೆದ ಬುಡಕಟ್ಟುಗಳ ಒಕ್ಕೂಟವಾದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಬಿಡುಗಡೆ ಮಾಡಿದ ಮಾಧ್ಯಮ ಪ್ರಕಟಣೆ ತಿಳಿಸಿದೆ.
"ಬಡ ಬುಡಕಟ್ಟು ಹಳ್ಳಿಗರು ಕೇವಲ ಬೆರಳೆಣಿಕೆಯಷ್ಟು ಸಿಂಗಲ್ ಬ್ಯಾರೆಲ್ ಗನ್‌ಗಳು ಮತ್ತು ಕೆಲವು ಪರವಾನಗಿ ಪಡೆದ ಬಂದೂಕುಗಳೊಂದಿಗೆ ತಮ್ಮ ಹಳ್ಳಿಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಮಣಿಪುರ ರಾಜ್ಯ ಸರ್ಕಾರದ ಪಡೆಗಳ ಕ್ರಮಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಆಪಾಯದಲ್ಲಿರುವ ನಮ್ಮ ಮುಗ್ಧ ಬುಡಕಟ್ಟು ಗ್ರಾಮಸ್ಥರನ್ನು ರಕ್ಷಿಸಲು ನಮ್ಮ ಹಳ್ಳಿಗಳಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸುವಂತೆ ನಾವು ಕೇಂದ್ರ ಸರ್ಕಾರ ಮತ್ತು ಕೇಂದ್ರ ಪಡೆಗಳಿಗೆ ಮನವಿ ಮಾಡುತ್ತೇವೆ. ಜೊತೆಗೆ ಎನ್. ಬಿರೇನ್ ಸಿಂಗ್ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ" ಎಂದು ಬುಡಕಟ್ಟು ಸಮುದಾಯದ ವೇದಿಕೆ ಆಗ್ರಹಿಸಿದೆ.
ಇನ್ನು, ಸೋಮವಾರ ಮಣಿಪುರಕ್ಕೆ ನಾಲ್ಕು ದಿನಗಳ ಭೇಟಿಯನ್ನು ಆರಂಭಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಸಹಜ ಸ್ಥಿತಿಗೆ ಮರಳಲು ಕ್ರಮಗಳನ್ನು ಯೋಜಿಸಲು ಮಂಗಳವಾರ ಹಲವಾರು ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.
ಬುಧವಾರ, ಹಿಂಸಾಚಾರವನ್ನು ನಿಯಂತ್ರಿಸಲು ಪ್ರಾರಂಭಿಸಲಾದ ಕ್ರಮಗಳನ್ನು ಘೋಷಿಸಲು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿದೆ. ಅವರು ಗುರುವಾರ ಬೆಳಗ್ಗೆ ಮಣಿಪುರದಿಂದ ಹೊರಡುವ ನಿರೀಕ್ಷೆಯಿದೆ.












Click it and Unblock the Notifications