ಮುಂಬೈ ಹೈಕೋರ್ಟ್‌ನಿಂದ ಗೌತಮ್ ಅದಾನಿ, ರಾಜೇಶ್ ಅದಾನಿಗೆ ಬಿಗ್ ರಿಲೀಫ್
ಮುಂಬೈ, ಮಾರ್ಚ್ 17: ಮುಂಬೈ ಹೈಕೋರ್ಟ್ ಸೋಮವಾರ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅದಾನಿಗೆ ಬಿಗ್ ರಿಲೀಫ್ ನೀಡಿದೆ. 388 ಕೋಟಿ ರೂ.ಗಳ ಮಾರುಕಟ್ಟೆ ನಿಯಮ ಉಲ್ಲಂಘನೆ ಆರೋಪದಲ್ಲಿ ಇಬ್ಬರನ್ನು ಬಿಡುಗಡೆಗೊಳಿಸಿ ಆದೇಶಿಸಿದೆ. 2012ರಿಂದ ಈ ಪ್ರಕರಣದ ವಿಚಾರಣೆ ವಿವಿಧ ಕೋರ್ಟ್‌ಗಳಲ್ಲಿ ನಡೆಯುತ್ತಿತ್ತು.
2012ರಲ್ಲಿ ಗಂಭೀರ ವಂಚನೆ ಪ್ರಕರಣಗಳ ತನಿಖಾ ವಿಭಾಗ (ಎಸ್ಎಫ್ಐಒ) ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (ಎಇಎಲ್) ಮತ್ತು ಗೌತಮ್ ಅದಾನಿ, ರಾಜೇಶ್ ಅದಾನಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಕ್ರಿಮಿನಲ್ ಪಿತೂರಿ ಮತ್ತು ವಂಚನೆಯ ಆರೋಪವನ್ನು ಮಾಡಲಾಗಿತ್ತು.

2019ರಲ್ಲಿ ಇಬ್ಬರು ಉದ್ಯಮಿಗಳು ಹೈಕೋರ್ಟ್‌ನಲ್ಲಿ ಇದನ್ನು ಪ್ರಶ್ನೆ ಮಾಡಿ ಅರ್ಜಿ ಸಲ್ಲಿಸಿದ್ದರು. ತಮ್ಮನ್ನು ಪ್ರಕರಣದಿಂದ ಬಿಡುಗಡೆ ಮಾಡುವಂತೆ ಕೋರಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಈ ಅರ್ಜಿಯಲ್ಲಿ ಇಬ್ಬರೂ ಪ್ರಶ್ನೆ ಮಾಡಿದ್ದರು.
ಸೋಮವಾರ ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ಆರ್. ಎನ್. ಲಡ್ಡಾ ಸೆಷನ್ಸ್ ಕೋರ್ಟ್ ಆದೇಶವನ್ನು ರದ್ದುಗೊಳಿಸಿದ್ದಾರೆ. ಗೌತಮ್ ಅದಾನಿ, ರಾಜೇಶ್ ಅದಾನಿ ಅವರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ. ಕೋರ್ಟ್ ಆದೇಶದ ಸಂಪೂರ್ಣ ಪ್ರತಿ ಇನ್ನೂ ಸಹ ಲಭ್ಯವಾಗಿಲ್ಲ.
2019ರ ಡಿಸೆಂಬರ್‌ನಿಂದ ಹೈಕೋರ್ಟ್ ಸೆಷನ್ಸ್ ಕೋರ್ಟ್ ಆದೇಶದ ಅನ್ವಯ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ವಿಸ್ತರಣೆ ಮಾಡುತ್ತಲಿತ್ತು. ಸೋಮವಾರ ಈ ಅರ್ಜಿಯ ಅಂತಿಮ ಆದೇಶ ಪ್ರಕಟವಾಗಿದೆ.
ಗಂಭೀರ ವಂಚನೆ ಪ್ರಕರಣಗಳ ತನಿಖಾ ವಿಭಾಗ (ಎಸ್ಎಫ್ಐಒ) 2012ರಲ್ಲಿ 12 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಕ್ರಿಮಿನಲ್ ಪಿತೂರಿ ಮತ್ತು ವಂಚನೆಯ ಆರೋಪವನ್ನು ಗೌತಮ್ ಅದಾನಿ ವಿರುದ್ಧ ಮಾಡಿತ್ತು. 2014ರ ಮೇ ತಿಂಗಳಿನಲ್ಲಿ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಅವರನ್ನು ಬಿಡುಗಡೆ ಮಾಡಿತ್ತು.
ಈ ಆದೇಶವನ್ನು ಎಸ್ಎಫ್ಐಒ ಸೆಷನ್ಸ್ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ನವೆಂಬರ್ 2019ರಲ್ಲಿ ಸೆಷನ್ಸ್ ಕೋರ್ಟ್ ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನು ರದ್ದುಗೊಳಿಸಿತ್ತು, ಎಸ್ಎಫ್ಐಒ ಕಾನೂನು ಬಾಹಿರವಾಗಿ ಅದಾನಿ ಗ್ರೂಪ್ ವಿರುದ್ಧ ಪ್ರಕರಣ ದಾಖಲಿಸಿದೆ ಎಂಬ ಆದೇಶವನ್ನು ತಿರಸ್ಕಾರ ಮಾಡಿತ್ತು.
ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ರಾಜೇಶ್ ಅದಾನಿ ಸೆಷನ್ಸ್ ಕೋರ್ಟ್ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದರು. ಇದು ನಿರಂಕುಶ ಆದೇಶವಾಗಿದ್ದು, ಪ್ರಕರಣದಿಂದ ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಈ ವಂಚನೆ ಪ್ರಕರಣವು ಸುಮಾರು 388 ಕೋಟಿ ರೂ. ಮೌಲ್ಯದ ಮಾರುಕಟ್ಟೆ ನಿಯಮ ಉಲ್ಲಂಘನೆ ಆರೋಪಗಳನ್ನು ಒಳಗೊಂಡಿತ್ತು. ಹೈಕೋರ್ಟ್ ತೀರ್ಪಿನ ಅಂತಿಮ ಪ್ರತಿ ಸಿಕ್ಕಿದ ಬಳಿಕ ಪ್ರಕರಣದ ಬಗೆಗಿನ, ಕೋರ್ಟ್ ಆದೇಶದ ಇನ್ನಷ್ಟು ಮಾಹಿತಿ ಲಭ್ಯವಾಗಲಿದೆ.












Click it and Unblock the Notifications