ಕೇರಳ ಚುನಾವಣೆ ಮುಖ್ಯಮಂತ್ರಿ ಅಭ್ಯರ್ಥಿ: ಯೂ-ಟರ್ನ್ ಹೊಡೆದ ಬಿಜೆಪಿ
ನವದೆಹಲಿ, ಮಾರ್ಚ್ 4: ಕೇರಳ ವಿಧಾನಸಭೆ ಚುನಾವಣೆಯಲ್ಲಿ 'ಮೆಟ್ರೋ ಮ್ಯಾನ್' ಇ. ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವ ವಿಚಾರದಲ್ಲಿ ಪಕ್ಷದಲ್ಲಿ ಗೊಂದಲ ಮೂಡಿದೆ. ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸುವಂತೆ ಪಕ್ಷದ ನಾಯಕತ್ವಕ್ಕೆ ಶಿಫಾರಸು ಮಾಡಿರುವುದಾಗಿ ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ತಿಳಿಸಿದ್ದರು.
ಇದನ್ನು ಕೇಂದ್ರ ಸಚಿವ ವಿ. ಮುರಳೀಧರನ್ ಕೂಡ ಅನುಮೋದಿಸಿದ್ದರು. ಆದರೆ ಕೆಲವೇ ಸಮಯದಲ್ಲಿ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರುವುದು ಗೊಂದಲ ಮೂಡಿಸಿದೆ. ತಾವು ತಪ್ಪಾಗಿ ಈ ಪ್ರಕಟಣೆ ನೀಡಿದ್ದಾಗಿ ಅವರು ಹೇಳಿದ್ದಾರೆ.
'ಕೇರಳ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಇ. ಶ್ರೀಧರನ್ ಅವರೊಂದಿಗೆ ಕೇರಳ ಚುನಾವಣೆಯಲ್ಲಿ ಹೋರಾಟ ನಡೆಸಲಿದೆ. ನಾವು ಕೇರಳದ ಜನತೆಗೆ ಭ್ರಷ್ಟಾಚಾರಮುಕ್ತ, ಅಭಿವೃದ್ಧಿಪರ ಆಡಳಿತ ನೀಡುವ ಸಲುವಾಗಿ ಸಿಪಿಐಎಂ ಮತ್ತು ಕಾಂಗ್ರೆಸ್ ಎರಡನ್ನೂ ಸೋಲಿಸಲಿದ್ದೇವೆ' ಎಂದು ಮುರಳೀಧರನ್ ಟ್ವೀಟ್ ಮಾಡಿದ್ದರು.

ಆದರೆ ತಮ್ಮ ಹೇಳಿಕೆಯನ್ನು ವಾಪಸ್ ಪಡೆದ ಮುರಳೀಧರನ್, ಟ್ವೀಟ್‌ಅನ್ನು ಕೂಡ ಅಳಿಸಿ ಹಾಕಿದ್ದಾರೆ. 'ಪಕ್ಷ ಈ ಪ್ರಕಟಣೆ ಮಾಡಿದೆ ಎಂದು ಮಾಧ್ಯಮ ವರದಿಗಳಿಂದ ನಾನು ತಿಳಿದುಕೊಂಡಿದ್ದೆ. ಬಳಿಕ ಪಕ್ಷದ ಮುಖ್ಯಸ್ಥರೊಂದಿಗೆ ಸ್ಪಷ್ಟಪಡಿಸಿಕೊಂಡೆ. ಅವರು ಅಂತಹ ಘೋಷಣೆ ಮಾಡಿಲ್ಲ ಎಂದು ತಿಳಿಸಿದರು' ಎಂದು ಅವರ ಸ್ಪಷ್ಟಪಡಿಸಿದ್ದಾರೆ.
ಕೇರಳ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್ ಅವರು, ಇ. ಶ್ರೀಧರನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸುವಂತೆ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿರುವುದಾಗಿ ತಿಳಿಸಿದ್ದರು.












Click it and Unblock the Notifications