ಸಮ್ಮೇದ್ ಶಿಖರ್ಜಿ ವಿವಾದ: ಕೇಂದ್ರದಿಂದ ಮಹತ್ವದ ಆದೇಶ, ಪ್ರತಿಭಟನೆ ಹಿಂಪಡೆದ ಜೈನ ಸಮುದಾಯ
ರಾಂಚಿ, ಜ. 05: ಸಮ್ಮೇದ್ ಶಿಖರ್ಜಿ ವಿವಾದದ ಬಗ್ಗೆ ಕೇಂದ್ರ ಸರ್ಕಾರದ ಮಹತ್ವದ ಆದೇಶದ ನಂತರ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದ ಜೈನರು ಪ್ರತಿಭಟನೆಯನ್ನು ಹಿಂತೆಗೆದುಕೊಂಡಿದ್ದಾರೆ.
ಜಾರ್ಖಂಡ್‌ನಲ್ಲಿನ ಜೈನರ ಪವಿತ್ರ ಸ್ಥಳವಾದ ಸಮ್ಮೇದ್ ಶಿಖರ್ಜಿಯನ್ನು ಪರಿಸರ ಪ್ರವಾಸೋದ್ಯಮ ತಾಣವನ್ನಾಗಿ ಗೊತ್ತುಪಡಿಸಲು ಜಾರ್ಖಂಡ್ ಸರ್ಕಾರ ಘೋಷಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಜೈನರು ದೇಶಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸರ್ಕಾರವು ಬೃಹತ್ ಪಾರಸ್‌ನಾಥ್ ಬೆಟ್ಟದ ಅಭಯಾರಣ್ಯದಲ್ಲಿ ಅಂತಹ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ.
ಮದ್ಯ ಸೇವನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯ ತಾಣಗಳನ್ನು ಅಪವಿತ್ರಗೊಳಿಸುವುದು, ಪರಿಸರಕ್ಕೆ ಹಾನಿ ಮಾಡುವಂತಹ ನಿಷೇಧಿತ ಅಭ್ಯಾಸಗಳ ವಿರುದ್ಧ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಕೇಂದ್ರ ಸೂಚಿಸಿದೆ.

ಗುರುವಾರ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರನ್ನು ಭೇಟಿ ಮಾಡಿದ ಜೈನ ಸಮುದಾಯದ ಮುಖಂಡರು, ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಗುರುತಿಸುವುದರಿಂದ ಅದರ ಪಾವಿತ್ರ್ಯತೆಗೆ ಧಕ್ಕೆಯಾಗಬಹುದು ಎಂದು ದೂರು ನೀಡಿದ್ದರು.
ಸಮ್ಮೇದ್ ಶಿಖರ್ಜಿಯು ಪಾರಸ್‌ನಾಥ್ ವನ್ಯಜೀವಿ ಅಭಯಾರಣ್ಯ ಮತ್ತು ಟೋಪ್ಚಾಂಚಿ ವನ್ಯಜೀವಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದಲ್ಲಿ ಬರುತ್ತದೆ. ಈ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಮತ್ತು ಸುತ್ತಮುತ್ತ ನಡೆಯಲು ಸಾಧ್ಯವಾಗದ ನಿಷೇಧಿತ ಚಟುವಟಿಕೆಗಳ ಪಟ್ಟಿ ಇದೆ ಎಂದು ಪರಿಸರ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ.
ಗುರುವಾರ ಮುಖ್ಯಮಂತ್ರಿ ಹೇಮಂತ್ ಸೊರೆನ್ ಕೇಂದ್ರಕ್ಕೆ ಪತ್ರ ಬರೆದು ಅದರ 2019 ರ ಅಧಿಸೂಚನೆಯ ಕುರಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಕೋರಿದ್ದರು. ರಾಜ್ಯದ 2021 ರ ಪ್ರವಾಸೋದ್ಯಮ ನೀತಿ, ಜೈನ ಸಮುದಾಯದ ವಿರೋಧ, ದೇಗುಲವನ್ನು ಉತ್ತಮವಾಗಿ ನಿರ್ವಹಿಸುವ ನಿರ್ವಹಣಾ ಮಂಡಳಿಯ ರಚನೆ ಕುರಿತಂತೆ ನಿರ್ಧಾರ ತೆಗೆದುಕೊಳ್ಳುವಂತೆ ಬರೆದಿದ್ದಾರೆ.

ಸುಮಾರು ಎರಡು ಗಂಟೆಗಳ ನಂತರ, ಪ್ರವಾಸೋದ್ಯಮ ಚಟುವಟಿಕೆಗಳಿಗೆ ಸಂಬಂಧಿಸಿದ 2019 ರ ಅಧಿಸೂಚನೆಯ ಷರತ್ತನ್ನು ತಕ್ಷಣವೇ ಸ್ಟೇ ನೀಡಿ ಕೇಂದ್ರ ಸಚಿವಾಲಯವು ಮೆಮೊವನ್ನು ನೀಡಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಕೂಡ ಸುದ್ದಿಗೋಷ್ಠಿಯಲ್ಲಿ ಇದು ಯಾರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಿಲ್ಲ. ಪರಿಸರ ಪ್ರವಾಸೋದ್ಯಮ ಎಂದರೆ ಆ ಪ್ರದೇಶದಲ್ಲಿ ಯಾವುದೇ ಶಾಶ್ವತ ರಚನೆಗಳು, ರೆಸ್ಟೋರೆಂಟ್‌ಗಳು ಮತ್ತು ಅಂತಹವುಗಳಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ರಾಜಧಾನಿ ರಾಂಚಿಯಿಂದ ಸುಮಾರು 160 ಕಿಮೀ ದೂರದಲ್ಲಿರುವ ರಾಜ್ಯದ ಅತಿ ಎತ್ತರದ ಶಿಖರವಾಗಿರುವ ಗಿರಿದಿಹ್ ಜಿಲ್ಲೆಯ ಪಾರಸ್‌ನಾಥ್ ಬೆಟ್ಟಗಳಲ್ಲಿರುವ ದೇವಾಲಯವು ಜೈನರ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ದಿಗಂಬರ ಮತ್ತು ಶ್ವೇತಾಂಬರ ಪಂಥಗಳೆರಡನ್ನೂ ಒಳಗೊಂಡಂತೆ, 24 ಜೈನ ತೀರ್ಥಂಕರರಲ್ಲಿ 20 ಮಂದಿಗೆ ಇಲ್ಲಿ ಮೋಕ್ಷ ಲಭಿಸಿದೆ ಎಂದು ನಂಬಲಾಗಿದೆ.












Click it and Unblock the Notifications