Tirupati Laddu row: ತಿರುಪತಿ ಲಡ್ಡು ವಿವಾದ: ಎಸ್‌ಐಟಿ ತನಿಖೆ ಸ್ಥಗಿತ
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡಲಾಗಿದ್ದ ಲಡ್ಡುಗಳಲ್ಲಿ ಪ್ರಾಣಿಕೊಬ್ಬು ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಸದ್ಯಕ್ಕೆ ಸ್ಥಗಿತಗೊಂಡಿದೆ. ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ದ್ವಾರಕಾ ತಿರುಮಲ ರಾವ್ ಮಂಗಳವಾರ ಈ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರಾವ್ ಅವರು, ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಹೀಗಾಗಿ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 3 ರಂದು ನಡೆಯಲಿದ್ದು, ಅಲ್ಲಿಯವರೆಗೆ ಎಸ್‌ಐಟಿ ತನಿಖೆಯನ್ನು ಮುಂದೂಡಲಾಗುವುದು ಎಂದಿದ್ದಾರೆ.

ತಿರುಪತಿ ಲಡ್ಡು ಪ್ರಸಾದ ಪ್ರಕರಣದ ತನಿಖೆಗಾಗಿ ಎಸ್‌ಐಟಿ ತಂಡವನ್ನು ರಚಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದ್ದರಿಂದ ತನಿಖೆಯನ್ನು ಮುಂದೂಡಲಾಗಿದೆ ಎಂದು ದ್ವಾರಕಾ ತಿರುಮಲ ರಾವ್ ಅವರು ಹೇಳಿದರು. ಎಸ್‌ಐಟಿ ತನಿಖೆಯು ಸುಪ್ರೀಂ ಕೋರ್ಟ್‌ನ ಮಾರ್ಗಸೂಚಿಗಳ ಪ್ರಕಾರ ಮುಂದುವರಿಯುತ್ತದೆ, ಇದು ನ್ಯಾಯಯುತ ತನಿಖೆಯಾಗಿದೆ. ಅಕ್ಟೋಬರ್ 3 ರಂದು ಸುಪ್ರೀಂ ಕೋರ್ಟ್ ತನ್ನ ಸೂಚನೆಗಳನ್ನು ನೀಡಿದ ನಂತರ ತನಿಖೆಯನ್ನು ಪುನರಾರಂಭಿಸಲಾಗುವುದು ಎಂದು ರಾವ್ ಸ್ಪಷ್ಟಪಡಿಸಿದ್ದಾರೆ.
ಸಿಎಂ ನಾಯ್ಡು ಹೇಳಿಕೆಗೆ ಸುಪ್ರೀಂ ಕೋರ್ಟ್ ಪ್ರಶ್ನೆ
ಲಡ್ಡು ತಯಾರಿಕೆಯಲ್ಲಿ ಕಲಬೆರಕೆ ತುಪ್ಪದ ಬಳಕೆ ಕುರಿತು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಹೇಳಿಕೆಗೆ ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನೆಗಳನ್ನು ಎತ್ತಿದ್ದು ತರಾಟೆ ತೆಗೆದುಕೊಂಡಿದೆ. ಮುಖ್ಯಮಂತ್ರಿ ನಾಯ್ಡು ಅವರನ್ನು ಟೀಕಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರ ಪೀಠ, ಲಡ್ಡು ತಯಾರಿಕೆಯಲ್ಲಿ ಕಲುಷಿತ ತುಪ್ಪವನ್ನು ಬಳಸಲಾಗಿದೆ ಎಂಬುದಕ್ಕೆ ಯಾವುದೇ ಖಚಿತವಾದ ಪುರಾವೆಗಳಿಲ್ಲ ಎಂದು ಹೇಳಿದೆ.

ಹೀಗಾಗಿ ಕನಿಷ್ಠ ಪಕ್ಷ ದೇವರನ್ನಾದರೂ ರಾಜಕೀಯದಿಂದ ದೂರವಿಡಬೇಕು ಎಂದು ಸುಪ್ರೀಂ ಕೋರ್ಟ್ ತರಾಟೆ ತೆಗೆದುಕೊಂಡಿದೆ. ತಿರುಪತಿ ದೇವಸ್ಥಾನದ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳುವಾಗ ಯಾವ ಸಾಕ್ಷ್ಯಾಧಾರಗಳು ಇದ್ದವು ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಸೆಪ್ಟೆಂಬರ್ 18 ರಂದು ಮುಖ್ಯಮಂತ್ರಿಗಳು ಲಡ್ಡು ಪ್ರಸಾದದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು. ಸೆಪ್ಟೆಂಬರ್ 25 ರಂದು ಎಫ್ಐಆರ್ ದಾಖಲಿಸಲಾಗಿದೆ ಮತ್ತು ಸೆಪ್ಟೆಂಬರ್ 26 ರಂದು ಎಸ್ಐಟಿ ರಚಿಸಲಾಗಿದೆ. ಉನ್ನತ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಸಾರ್ವಜನಿಕವಾಗಿ ಇಂತಹ ಹೇಳಿಕೆ ನೀಡುವುದು ಸೂಕ್ತವಲ್ಲ, ಇದು ಕೋಟ್ಯಂತರ ಜನರ ಭಾವನೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಪೀಠ ಹೇಳಿದೆ. ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಯನ್ನು ಮುಂದುವರಿಸಬೇಕೆ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೆ ಎಂಬುದನ್ನು ನಿರ್ಧರಿಸಲು ಸಹಾಯ ಮಾಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪೀಠ ಕೇಳಿದೆ.
ತಿರುಪತಿ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂಬ ಬೇಡಿಕೆ ಸೇರಿದಂತೆ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಹೀಗಾಗಿ ಎಸ್‌ಐಟಿ ತನಿಖೆಯನ್ನು ಮುಂದೂಡಲಾಗಿದೆ. ತೀರ್ಪಿನ ಬಳಿಕ ಎಸ್‌ಐಟಿ ತನಿಖೆಯನ್ನು ಮುಂದೂಡಲು ನಿರ್ಧರಿಸಲಾಗಿದೆ.












Click it and Unblock the Notifications