Narendra Modi temple: ಸ್ವಂತ ದುಡ್ಡಿನಲ್ಲಿ ನರೇಂದ್ರ ಮೋದಿ ದೇವಾಲಯ ಕಟ್ಟಿದ ತಮಿಳುನಾಡಿನ ರೈತ!
ಚೆನ್ನೈ, ಜುಲೈ. 19: ರಾಜಕೀಯ ನಾಯಕರ ಮೇಲಿನ ಭಕ್ತಿ ಭಾರತದಲ್ಲಿ ಹೊಸದೇನಲ್ಲ... ಸಿನಿಮಾ ಸ್ಟಾರ್‌ಗಳಿಗೆ ದೇವಾಲಯ ಕಟ್ಟುವ ನಾಡಿನಲ್ಲಿ ರಾಜಕೀಯ ನಾಯಕರು ಕೂಡ ಹಿಂದೆ ಉಳಿದಿಲ್ಲ. ಈಗ ತಮಿಳುನಾಡಿನಲ್ಲಿ ರೈತರೊಬ್ಬರು ತಮ್ಮ ಸ್ವಂತ ಹಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನ ಕಟ್ಟಿದ್ದಾರೆ.
ತಮಿಳುನಾಡಿನ ತಿರುಚ್ಚಿ ಬಳಿಯ ಸಾತನೂರಿನ ರೈತರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷವಾಗಿ ಗೌರವ ಸಲ್ಲಿಸಲು ದೇವಾಲಯವನ್ನು ನಿರ್ಮಿಸಿದ್ದಾರೆ. ತಾವು ದುಡಿದ ಸ್ವಂತ ಹಣದಿಂದ ಬರೋಬ್ಬರಿ 1.25 ಲಕ್ಷ ರೂಪಾಯಿ ಖರ್ಚು ಮಾಡಿ ದೇವಾಲಯ ನಿರ್ಮಿಸಿದ್ದಾರೆ.

ತಿರುಚ್ಚಿ ಜಿಲ್ಲೆಯ ತರಿಯೌರ್ ಪ್ರದೇಶದ ಎರಕುಡಿ ಗ್ರಾಮದವರಾದ ರೈತ ಶಂಕರ್ ಅವರು ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಕೃಷಿ ಮಾಡಲು ತಮ್ಮ ಊರಿಗೆ ಮರಳಿದರು. ಪ್ರಧಾನಿ ಮೋದಿಯವರ ಯೋಜನೆಗಳಿಂದ ಪ್ರೇರಿತರಾದ ಶಂಕರ್ ಅವರನ್ನು ಗೌರವಿಸಿಲು ನಿರ್ಧರಿಸಿ, ದೇವಸ್ಥಾನ ಕಟ್ಟಿದ್ದಾರೆ ಎಂದು ಒನ್ಇಂಡಿಯಾ ತಮಿಳು ವರದಿ ಮಾಡಿದೆ.
2019 ರಲ್ಲಿ, ಶಂಕರ್ ದೇವಾಲಯವನ್ನು ನಿರ್ಮಿಸಿ ನರೇಂದ್ರ ಮೋದಿಯ ವಿಗ್ರಹವನ್ನು ಸ್ಥಾಪಿಸಿದರು. ಈ ದೇವಾಲಯವು ಪ್ರಧಾನಿ ಮೋದಿಯವರ ಸುಂದರವಾದ ಪ್ರತಿಮೆಯನ್ನು ಹೊಂದಿದೆ. ಇದರ ಜೊತೆಗೆ ದೇವಾಲಯದಲ್ಲಿ ಇತರ ಪ್ರಮುಖ ವ್ಯಕ್ತಿಗಳಾದ ಕಾಮರಾಜ್, ಎಂಜಿಆರ್, ಜಯಲಲಿತಾ, ಅಮಿತ್ ಶಾ ಮತ್ತು ಎಡಪ್ಪಾಡಿ ಪಳನಿಸ್ವಾಮಿ ಅವರ ಚಿತ್ರಗಳು ಇವೆ.

ರೈತ ಶಂಕರ್ ಅವರಿಗೆ ನರೇಂದ್ರ ಮೋದಿಯವರ ಮೇಲಿನ ಅಭಿಮಾನ ಗಾಢವಾಗಿದೆ. ಕೃಷಿ ಇಳುವರಿ ಉತ್ತಮಗೊಂಡರೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೂರನೇ ಅವಧಿಗೆ ಮೋದಿ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸುವುದಾಗಿ ಶಪಥ ಮಾಡಿದ್ದರು. ತೆಂಗು, ಮಾವು, ಹಲಸಿನ ಹಣ್ಣಿನ ಯಶಸ್ವಿ ಇಳುವರಿಯೊಂದಿಗೆ ಶಂಕರ್ ಪ್ರತಿನಿತ್ಯ ವಿಶೇಷ ಪೂಜೆ ಸಲ್ಲಿಸಿ, ಮೋದಿಯವರನ್ನು ದೇವರಂತೆ ಕಾಣುವ ಮೂಲಕ ತಮ್ಮ ಶಪಥ ನೆರವೇರಿಸುತ್ತಿದ್ದಾರೆ.
ರೈತ ಶಂಕರ್ ಅವರು 'ಒನ್ಇಂಡಿಯಾ ತಮಿಳು' ವರದಿಗಾರರೊಂದಿಗೆ ತಮ್ಮ ಕಥೆಯನ್ನು ಹಂಚಿಕೊಂಡಿದ್ದಾರೆ. "ಪ್ರಧಾನಿ ಮೋದಿಯವರ ಯೋಜನೆಗಳಿಂದ ನನಗೆ ಅಪಾರ ಪ್ರಯೋಜನವಾಗಿದೆ. ಕೃತಜ್ಞತೆ ಮತ್ತು ಅಭಿಮಾನದಿಂದ ನಾನು ಈ ದೇವಾಲಯವನ್ನು ನಿರ್ಮಿಸಿದೆ. ನನ್ನ ಬೆಳೆಗಳಿಗೆ ಉತ್ತಮ ಇಳುವರಿ ಬಂದಿರುವ ಕಾರಣ ಮೋದಿಯವರನ್ನು ದೈವಿಕ ವ್ಯಕ್ತಿ ಎಂದು ಭಾವಿಸಿ ಪ್ರತಿದಿನ ಪೂಜೆ, ಪೂಜೆ ಸಲ್ಲಿಸುತ್ತಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಪ್ರತಿ ಬೆಳೆಯ ಲಾಭದಿಂದ ನಾನು 10,000 ರೂಪಾಯಿ ಉಳಿಸಿ ದೇವಸ್ಥಾನ ನಡೆಸುತ್ತಿದ್ದೇನೆ" ಎಂದಿದ್ದಾರೆ.
ಇನ್ನು, ರೈತ ಶಂಕರ್ ಪಳನಿ ಮುರುಗನ್ ದೇವಸ್ಥಾನಕ್ಕೆ ಚಿನ್ನವನ್ನು ಅರ್ಪಿಸಲು ಮತ್ತು ದೇಣಿಗೆ ನೀಡಲು ಯೋಜಿಸಿದ್ದಾರೆ. ಅಲ್ಲದೆ, ತಮ್ಮ ಹೊಲದಲ್ಲಿ ಕಟಾವು ಮಾಡಿದ 10 ಚೀಲ ಭತ್ತದಿಂದ ಸುಮಾರು 1,000 ಮಂದಿಗೆ ಅನ್ನದಾನದ ವ್ಯವಸ್ಥೆ ಮಾಡಿದ್ದಾರೆ. ಶಂಕರ್ ಅವರು ಪ್ರಧಾನಿಯವರ ಮಂದಿರಕ್ಕೆ ಕುಂಬಾಭಿಷೇಕ ನಡೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ತಮ್ಮ ಬಳಿಕವೂ ದೇವಾಲಯ ಹೀಗೆಯೇ ನಡೆಯಬೇಕು ಎಂದು ತಮ್ಮ ಜಮೀನಿನ ಒಂದು ಭಾಗವನ್ನು ದೇವಸ್ಥಾನಕ್ಕೆ ಬರೆದಿದ್ದಾರೆ. ಪ್ರಧಾನಿ ಮೋದಿ ಅವರು ದೀರ್ಘಾಯುಷ್ಯ, 2030ರ ವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿ, ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಅನುಷ್ಠಾನಗೊಳಿಸಲಿ ಎಂಬುದು ಅವರ ಆಶಯ.
ಇನ್ನು, ದೇಶದಲ್ಲಿ ಕ್ರಿಕೆಟರಿಗೆ, ಸಿನಿಮಾ ತಾರೆಯರಿಗೆ ದೇವಾಲಯ ಕಟ್ಟಿದ ಹಲವು ಉದಾಹರಣೆಗಳಿವೆ. ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ದೇವಾಲಯವಿದೆ. ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಕೋಲ್ಕತ್ತಾದಲ್ಲಿ ದೇವಸ್ಥಾನವಿದೆ. ಅದೇ ರೀತಿ, ನಟಿ, ರಾಜಕಾರಣಿ ಖುಷ್ಬೂ ಸುಂದರ್ ಅವರ ದೇವಸ್ಥಾನ ಕೂಡ ಇತ್ತು. ಆದರೆ, ಅದನ್ನು 2005 ರಲ್ಲಿ ಕೆಡವಲಾಯಿತು.












Click it and Unblock the Notifications