ತಮಿಳುನಾಡಿನ ರಾಜಕೀಯ ಚದುರಂಗದಾಟ: ಸೋತರು-ಗೆದ್ದರೂ ಅದು ಸಂಪೂರ್ಣ ಸೋಲಲ್ಲ-ಗೆಲುವಲ್ಲ: ಪ್ರವೀಣ್ ಕುಮಾರ್ ಶೆಟ್ಟಿ ಬರಹ
ಚೆನ್ನೈ: ತಮಿಳುನಾಡಿನಲ್ಲಿ 2026ರ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಚಟುವಟಿಕೆ ಗರಿಗೆದರಿವೆ. ಆಡಳಿತಾರೂಢ ಡಿಎಂಕೆಯು ಏಳು ಸದಸ್ಯರು ಸೀಟು ಹಂಚಿಕೆ ಸಮಿತಿ ರಚಿಸಿದೆ. ಮತ್ತೊಂದೆಡೆ ಬಿಜೆಪಿ ಮತ್ತು ಎ.ಐ.ಎ.ಡಿ.ಎಂ.ಕೆ ತಮ್ಮದೇ ರಾಜಕೀಯ ಆಲೋಚನೆಯಲ್ಲಿ ತೊಡಗಿವೆ. ಸದರಿ ವಿಧಾನಸಭಾ ಚುನಾವಣೆಯು 2029ರ ಲೋಕಸಭಾ ಚುನಾವಣೆ ಮೇಲೂ ಪ್ರಭಾವ ಬೀರುವ, ಒಂದಷ್ಟು ಹೊಂದಾಣಿಕೆಗೂ ಕಾರಣವಾಗುವ ಸಾಧ್ಯತೆ ಇದೆ. ತಮಿಳುನಾಡು ಚುನಾವಣಾ ರಾಜಕೀಯ, ಗೆಲುವು-ಸೋಲಿನ ವಿಶ್ಲೇಷಣೆ ಕುರಿತ ವಿಶೇಷ ಲೇಖನ ಇಲ್ಲಿದೆ. (ಬರಹ: ಪ್ರವೀಣ್ ಕುಮಾರ್ ಶೆಟ್ಟ, ಶಾನ್ಕಟ್)
ಅಂಗಾತ ಬಿದ್ದರೆ ನಾನು ಗೆದ್ದಂತೆ, ಮಗುಚಿ ಬಿದ್ದರೆ ನೀನು ಸೋತಂತೆ ಅನ್ನುವ ರೀತಿಯಲ್ಲಿ ಪಂದ್ಯ ಕಟ್ಟಿದಂತೆ ತಮಿಳುನಾಡಿನ ಚುನಾವಣಾ ಚಟುವಟಿಕೆಗಳು ನೆಡೆಯುತ್ತಿವೆ. ಗೆದ್ದರೂ ಲಾಭವಾಗಬೇಕು, ಸೋತರೂ ನಷ್ಟವಾಗಬಾರದೆನ್ನುವ ಲೆಕ್ಕಾಚಾರದಲ್ಲಿ ಎರಡು ರಾಜಕೀಯ ಪಕ್ಷಗಳು ಚಾಣಾಕ್ಷ ನೆಡೆಯನ್ನು ಇಡುತ್ತಿವೆ. ಹತ್ತಾರು ಪಕ್ಷಗಳು ಕಣಕ್ಕಿಳಿದಿರುವ ತಮಿಳುನಾಡಿನಲ್ಲಿ ಈ ಎರಡು ಪಕ್ಷಗಳು ಯಾವುವು ಎಂದು ನೋಡೋಣ.

ಭಾರತದ ಹೆಚ್ಚಿನ ಎಲ್ಲಾ ಪ್ರಾದೇಶಿಕ ಪಕ್ಷಗಳು ಕುಟುಂಬ ರಾಜಕಾರಣದ ಸುಳಿಯಿಂದ ಹೊರ ಬರಲು ಉತ್ಸುಕತೆ ತೋರುತ್ತಿಲ್ಲ. ರಾಜಾಡಳಿತ ಕಾಲದಲ್ಲೂ ರಾಜನ ಮಗನೇ ರಾಜನಾಗುತ್ತಿದ್ದರೂ, ರಾಜನ ಮಗನು ಗುರುಕುಲಕ್ಕೆ ಹೋಗಿ ಸಮಗ್ರ ಶಿಕ್ಷಣದ ನಂತರವೇ ಯುವರಾಜನ ಪಟ್ಟಕ್ಕೇರುತ್ತಿದ್ದು ಬಹುತೇಕವಾಗಿತ್ತು. ಇವತ್ತಿಗೆ ಪಕ್ಷದ ಪ್ರಮುಖನ ಮಗನೇ ಮುಂಗಡ ಸೀಟು ಬುಕ್ಕಿಂಗ್ ಮಾಡಿಕೊಂಡೇ ಹುಟ್ಟಿರುತ್ತಾನೆ. ಇಂತಹ ಸನ್ನಿವೇಶದಲ್ಲಿ ವಂಶಪಾರಂಪರತೆ ಇಲ್ಲದೇ ಇರುವ ಕೆಲವೇ ಪ್ರಾದೇಶಿಕ ಪಕ್ಷಗಳಲ್ಲಿ, ಎ.ಐ.ಎ.ಡಿ.ಎಂ.ಕೆ ಮತ್ತು ಶಿವಸೇನಾ (ಶಿಂಧೆ) ಮಾತ್ರ ಎನ್ನಬಹುದು.
ಆಡಳಿತ ವಿರೋಧಿ ಅಲೆಯಿಂದ ಮತ
ಎಂಜಿಆರ್ ನಂತರ ಪಕ್ಷವನ್ನು ಹೆಗಲಿಗೆ ತೆಗೆದುಕೊಂಡು, ಖಡಕ್ಕಾಗಿಯೇ ನಾಯಕತ್ವ ನಿರ್ವಹಿಸಿದ ತಿರುಚ್ಚಿ ತಲೈವಿ ಕುಮಾರಿ ಜಯಲಲಿತಾ ಅವರ ನಿಧನದಿಂದ ಎ.ಐ.ಎ.ಡಿ.ಎಂ.ಕೆ ಪಕ್ಷವೀಗ ಅಷ್ಟೇನೂ ತಾರಾ ವರ್ಚಸ್ಸಿಲ್ಲದ ಪಳನಿಸಾಮಿಯ ಹಿಡಿತದಲ್ಲಿರುವಂತೆ ಕಾಣುತ್ತಿದೆ. ವಂಶಪಾರಂಪರ್ಯದಿಂದ ಹೊರಗಡೆ ನಿಂತಿರುವ ಎ.ಐ.ಎ.ಡಿ.ಎಂ.ಕೆ ಗೆ ಆಡಳಿತ ವಿರೋಧಿ ಅಲೆ ಮಾತ್ರ ಮತವನ್ನು ತಂದು ಕೊಡಬಹುದೇ ವಿನಃ ಬೇರಾವುದೇ ಕಾರಣ ಕಾಣಿಸುತ್ತಿಲ್ಲ. ಇದೇ ಕಾರಣ ಸಮಗ್ರ ಒಕ್ಕೂಟಕ್ಕೆ ಎ.ಐ.ಎ.ಡಿ.ಎಂ.ಕೆ ಸಜ್ಜಾಗುತ್ತಿದೆ.
ಈ ಚುನಾವಣೆಯಲ್ಲಿ ಎ.ಐ.ಎ.ಡಿ.ಎಂ.ಕೆ ಒಂದು ವೇಳೆ ಸೋತರೆ, ಬಹುಶಃ ಅದು ಮಾಯಾವತಿಯ ಬಿ.ಎಸ್.ಪಿಯಂತೆ ಮೂಲೆ ಗುಂಪಾಗುವುದು ಸಹಜ. ಗೆದ್ದರೆ ಅದು ಕೇಂದ್ರದ ಬಿಜೆಪಿ ಸರ್ಕಾರ ನೆರವಿನಿಂದ, ತಮಿಳುನಾಡಿನಲ್ಲಿ ಗಟ್ಟಿಯಾದ ಸರ್ಕಾರ ರಚಿಸಲಿದೆ. ಆದರೆ 2029 ಲೋಕಸಭೆಯಲ್ಲಿ ಬಿಜೆಪಿಗೆ ಅಧಿಕ ಪಾಲು ಕೊಡಬೇಕಾಗಿ ಬಂದರೆ, ಎ.ಐ.ಎ.ಡಿ.ಎಂ.ಕೆ ಬಿಜೆಪಿಯ ಕಿರಿಯ ಸಹೋದರನಂತಾಗುತ್ತದೆ. ಹಾಗಾಗಿ ಇಲ್ಲಿ ಎ.ಐ.ಎ.ಡಿ.ಎಂ.ಕೆ ಗೆದ್ದರೆ ಮಾತ್ರ ಬದುಕುಳಿಯುತ್ತದೆ.
ಎರಡನೇ ಬಾರಿ ಆಡಳಿತ ಹಿಡಿದಿರುವ ಡಿ.ಎಮ್.ಕೆ ಆಡಳಿತ ವಿರೋಧಿ ಆಲೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಕಳೆದೆರಡು ಬಾರಿ ಅಧಿಕ ಸಂಸದರನ್ನು ಆರಿಸಿ ಸಂಸತ್ತಿಗೆ ಕಳುಹಿಸಿದ್ದರೂ ಕೇಂದ್ರ ಸರ್ಕಾರದಲ್ಲಿ ಯಾವುದೇ ಅಧಿಕಾರದ ಲಾಭ ಪಡೆದುಕೊಳ್ಳದ ಡಿ.ಎಮ್.ಕೆ, ಈ ಬಾರಿ ತನ್ನ ತಲೆಯ ಮೇಲಿರುವ ಹೆಚ್ಚುವರಿ ಬ್ಯಾಗೇಜಾಗಿರುವ ಕಾಂಗ್ರೆಸ್ ಅನ್ನು ಕೆಳಗಿಳಿಸಿ, ದಿವಂಗತ ವಿಜಯಕಾಂತ್ ಅವರ ಡಿ.ಎಂ.ಡಿ.ಕೆ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.
ಡಿಎಂಕೆ ಗೆದ್ದರೆ ಬಿಜೆಪಿ ಜತೆ ಸಂಬಂಧ
ಕಾಂಗ್ರೆಸ್ ಸಖ್ಯವಿಲ್ಲದಿರುವ ಡಿ.ಎಮ್.ಕೆ ಈ ಬಾರಿ ಮತ್ತೆ ಗೆದ್ದರೆ ಅದು ಬಿಜೆಪಿಯೊಂದಿಗೆ ನೆಂಟಸ್ತನ ಬೆಳಸಿಕೊಳ್ಳುತ್ತದೆ. ರಾಜ್ಯದಲ್ಲಿ ಅಲ್ಲವಾದರೂ, ಕೇಂದ್ರದಲ್ಲಿ ಅದು ಸರ್ಕಾರದ ಭಾಗವಾಗಿ ಭರಪೂರ ಲಾಭ ಪಡೆದುಕೊಳ್ಳುತ್ತದೆ. ಒಂದೊಮ್ಮೆ ವಿಧಾನಸಭೆಯ ಚುನಾವಣೆಯಲ್ಲಿ ಸೋತರೂ ಕೂಡ, ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿರುವ ಕಾರಣಕ್ಕೆ ಬಿಜೆಪಿಯ ಸನಿಹಕ್ಕೆ ಬರುತ್ತದೆ. ಇದೇ ಕಾರಣಕ್ಕೆ ಡಿ.ಎಮ್.ಕೆ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಂತೆ ಕಾಣುತ್ತಿದೆ. ಹಾಗಾಗಿ ಡಿ.ಎಮ್.ಕೆಗೆ ಗೆದ್ದರೆ ಲಾಟರಿ, ಸೋತರೆ ಸಮಾಧಾನಕರ ಬಹುಮಾನಕ್ಕೆ ಕೊರತೆಯಿಲ್ಲ.
ಎರಡು ಶೇಕಡಕ್ಕಿಂತ ಕಡಿಮೆ ಮತ ಬ್ಯಾಂಕಿರುವ ಬಿಜೆಪಿ, ಅಣ್ಣಾಮಲೈ ಎಂಬ ಸಿಂಗಮ್ ಅನ್ನು ಕಳೆದ ಬಾರಿಯ ವಿಧಾನಸಭಾ ಚುನಾವಣಾ ಕಣಕ್ಕಿಳಿಸಿ, ಪಕ್ಷಕ್ಕೊಂದು ಗಟ್ಟಿನೆಲೆಯನ್ನು ಸ್ಥಾಪಿಸಿ, 2024ರ ಲೋಕಸಭೆಯ ಚುನಾವಣೆಯಲ್ಲಿ ಏಕಾಂಗಿ ಹೋರಾಟ ನೆಡೆಸಿ, ತನ್ನ ಬಲವನ್ನು ಶೇ.7 ರಷ್ಟಿದೆ ಎಂದು ತೋರಿಸಿಕೊಟ್ಟಿದೆ. ಈ ಬಾರಿಯ ಚುನಾವಣೆಗೆ ಎ.ಐ.ಎ.ಡಿ.ಎಂ.ಕೆಯ ಪಳನಿಸಾಮಿಯನ್ನೇ ಮುಖ್ಯಮಂತ್ರಿಯೆಂದು ಬಿಂಬಿಸಿರುವ ಬಿಜೆಪಿ, ಉಪಾಯವಾಗಿ ಫೈರ್ ಬ್ರ್ಯಾಂಡ್ ಅಣ್ಣಾಮಲೈಯನ್ನು ಮೈದಾನದಿಂದ ಹೊರಕ್ಕೆ ಕರೆಯಿಸಿಕೊಂಡು ಪೆವಿಲಿಯನ್ನಿನಲ್ಲಿ ಕೂರಿಸಿಕೊಂಡಿದೆ. ಹೊಡಿಬಡಿಯ ದಾಂಡಿಗಗನನ್ನು ಪರಿಸ್ಥಿತಿಗೆ ತಕ್ಕಂತೆ ಕಣಕ್ಕಿಳಿಸುವ ಇರಾದೆ ಬಿಜೆಪಿಯದ್ದು. ಇದು ಕೆಲವರಿಗೆ ಬಾಲಿಶವಾಗಿ ಕಂಡರೂ ಬಿಜೆಪಿಗೆ ತಮಿಳುನಾಡು ಒಂಥರಾ ಟೆಸ್ಟ್ ಕ್ರಿಕೆಟ್ ಪಂದ್ಯವಿದ್ದಂತೆ. ಕೊನೆಯ ನಿಮಿಷದವರೆಗೂ ಗೆಲ್ಲುವ ಸಾಧ್ಯತೆಯನ್ನು ಆಲ್ಲಗಳೆಯುವಂತಿಲ್ಲ.
ಈ ಬಾರಿಯ ವಿಧಾನಸಭೆಯ ಚುನಾವಣೆಯಲ್ಲಿ ಮೈತ್ರಿಕೂಟ ಗೆದ್ದರೆ, ಬಿಜೆಪಿ ಖಂಡಿತವಾಗಿಯೂ ಗೃಹ ಇಲಾಖೆ ಅಥವಾ ವಿತ್ತ ಸಚಿವಾಲಯವನ್ನು ಉಪಮುಖ್ಯಮಂತ್ರಿ ಸ್ಥಾನದೊಂದಿಗೆ ಕೇಳಲಿದೆ. ಈ ವಿಚಾರಕ್ಕೇನಾದರೂ ಎ.ಐ.ಎ.ಡಿ.ಎಂ.ಕೆ ನಖರಾ ಮಾಡಿದರೆ ಕಾಂಗ್ರೆಸ್ ಮುಕ್ತ ಡಿ.ಎಮ್.ಕೆ ಕೇಂದ್ರ ಸರ್ಕಾರದಲ್ಲಿ ಬಂದು ಕುಳಿತುಕೊಳ್ಳುತ್ತದೆ. ಹಾಗಾಗಿ ಈ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬಂದು ಕುಳಿತುಕೊಳ್ಳುವುದೇ ಬಿಜೆಪಿಯ ಭಾವಿ ಮುಖ್ಯಮಂತ್ರಿ ಅಭ್ಯರ್ಥಿ. ಮುಂದಿನ ಐದು ವರ್ಷ ಎ.ಐ.ಎ.ಡಿ.ಎಂ.ಕೆ ರಾಜ್ಯದಲ್ಲಿ ಆಡಳಿತ ಹಿಡಿದುಕೊಂಡಿರುವಾಗ, ಬಿಜೆಪಿಯು 2029ರ ಲೋಕಸಭೆಯ ಚುನಾವಣೆಯಲ್ಲಿ ಹೆಚ್ಚು ಸೀಟಿನ ಪಾಲನ್ನು ಕೇಳುತ್ತದೆ ಅಥವಾ ಬಿಜೆಪಿಯ ಅಭ್ಯರ್ಥಿಗಳೇ ಎ.ಐ.ಎ.ಡಿ.ಎಂ.ಕೆಯ ಚಿಹ್ನೆಯಲ್ಲಿ ಗೆದ್ದು ಬರಲಿದ್ದಾರೆ.

ಒಂದೊಮ್ಮೆ ಮೈತ್ರಿಕೂಟವೇನಾದರೂ ವಿಧಾನಸಭೆಯ ಚುನಾವಣೆಯಲ್ಲಿ ಸೋತರೇ, ಕೇಂದ್ರದಲ್ಲಿ ಡಿ.ಎಮ್.ಕೆ ಸರ್ಕಾರದ ಭಾಗವಾಗಬಹುದು ಮತ್ತು ಎ.ಐ.ಎ.ಡಿ.ಎಂ.ಕೆ ಸಂಪೂರ್ಣವಾಗಿ ನೆಲಕಚ್ಚಿ, ಫೈರ್ ಬ್ರ್ಯಾಂಡ್ ಅಣ್ಣಾಮಲೈಯನ್ನು ಮೈದಾನಕ್ಕಿಳಿಸುವ ಸಮಯ ಬರುತ್ತದೆ.
ಸಾರಾಂಶವಾಗಿ ಹೇಳುವುದಾದರೆ, ತಮಿಳುನಾಡಿನ ರಾಜಕೀಯ ಈ ಬಾರಿ ತತ್ವಗಳಿಗಿಂತ ಹೆಚ್ಚು ಲೆಕ್ಕಾಚಾರದ ಚದುರಂಗವಾಗಿ ಪರಿಣಮಿಸಿದೆ. ಗೆಲುವು-ಸೋಲು ಎರಡನ್ನೂ ಲಾಭ-ನಷ್ಟದ ಸಮೀಕರಣದಲ್ಲಿ ಅಳೆಯುವ ರಾಜಕೀಯ ಬುದ್ಧಿವಂತಿಕೆ ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಎ.ಐ.ಎ.ಡಿ.ಎಂ.ಕೆ ಗೆ ಈ ಚುನಾವಣೆ ಅಸ್ತಿತ್ವದ ಪ್ರಶ್ನೆಯಾಗಿದ್ದರೆ, ಡಿ.ಎಮ್.ಕೆ ಗೆ ಇದು ಬಲವರ್ಧನೆಯ ಅವಕಾಶ. ಬಿಜೆಪಿ ಮಾತ್ರ ದೀರ್ಘಕಾಲಿಕ ತಂತ್ರದೊಂದಿಗೆ ತಾಳ್ಮೆಯ ಆಟವಾಡುತ್ತಿರುವಂತೆ ಕಾಣುತ್ತಿದೆ. ಮೈತ್ರಿ, ದೂರದೃಷ್ಠಿ, ಹಾಗೂ ಕೇಂದ್ರ-ರಾಜ್ಯ ಸಮೀಕರಣಗಳ ನಡುವಿನ ಸೂಕ್ಷ್ಮ ನಡೆಗಳು ತಮಿಳುನಾಡಿನ ಭವಿಷ್ಯ ರಾಜಕಾರಣವನ್ನು ರೂಪಿಸಲಿವೆ. ಇಲ್ಲಿ ಗೆದ್ದವನು ಸಂಪೂರ್ಣ ಗೆಲ್ಲುವುದಿಲ್ಲ, ಸೋತವನು ಸಂಪೂರ್ಣ ಸೋಲುವುದಿಲ್ಲ. ಆದರೆ ಯಾರ ನಡೆ ದೂರದೃಷ್ಟಿಯಿಂದ ಕೂಡಿರುತ್ತದೆಯೋ ಅಂತಿಮವಾಗಿ ಅದೇ ಪಕ್ಷ ರಾಜ್ಯದ ರಾಜಕೀಯ ನಕ್ಷೆಯನ್ನು ಮರು ಬರೆಯಲಿದೆ..
(ಲೇಖಕರು: ಪ್ರವೀಣ್ ಕುಮಾರ್ ಶೆಟ್ಟಿ, ಶಾನ್ಕಟ್. ಡಿಪ್ಲಮೋ ಮೆಕ್ಯಾನಿಕಲ್ ಇಂಜಿನಿಯರಿಂಗನ್ನು ಕಲಿತು ಐಟಿ ಪದವಿ ಪಡೆದು, ಕಳೆದ ಹಲವಾರು ವರ್ಷಗಳಿಂದ ತೈಲೋತ್ಪನ್ನ ಸಂಬಂಧಿತ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ. ಆನಿವಾಸಿ ಕನ್ನಡ ಕೂಟದಲ್ಲಿ ನಿರಂತರ ಭಾಗವಹಿಸುವಿಕೆ ಮತ್ತು ಕನ್ನಡ ಸಾಹಿತ್ಯಗಳಲ್ಲಿ ಆಸಕ್ತಿ. ಏಷ್ಯನ್ ಕ್ರಿಕೆಟ್ ಕೌನ್ಸಿಲಿನ ಮಾನ್ಯತೆ ಪಡೆದ ಲೆವೆಲ್ ಒನ್ ತೀರ್ಪುಗಾರ.)












Click it and Unblock the Notifications